

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಭೂಮಿ ಹಂಚಿಕೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಜಿಲ್ಲಾದ್ಯಂತ ಮೊಬೈಲ್ ಟವರ್‌ಗಳ ಕಾಮಗಾರಿ ಪ್ರಗತಿಗೆ ಅಡಚಣೆಯಾಗಿದೆ ಎಂದು ಕೇಂದ್ರ ಮತ್ತು ದೂರ ಸಂಪರ್ಕ ಇಲಾಖೆ ದೂರಿದೆ.
ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್‌ಗಳ ಸ್ಥಾಪನೆ ವಿಳಂಬದ ಬಗ್ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಕೇಂದ್ರ ಮತ್ತು ದೂರ ಸಂಪರ್ಕ ಇಲಾಖೆ ಸಚಿವರ ಬಳಿ ಪ್ರಸ್ತಾಪಿಸಿದ್ದರು. ಇದಕ್ಕೆ ಸಂಬಂಧಿಸಿ ಉತ್ತರ ನೀಡಿರುವ ಸಚಿವಾಲಯ, ಕೇಂದ್ರ ಸರ್ಕಾರದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೂರ ಸಂಪರ್ಕ ಸೇವೆ ಉತ್ತಮಪಡಿಸಲು ಮೊಬೈಲ್ ಟವರ್‌ಗಳ ಸ್ಥಾಪನೆಗೆ ಮೂರು ವರ್ಷಗಳಲ್ಲಿ 4ಜಿ ಸ್ಯಾಚುರೇಷನ್ ಯುಎಸ್‌ಒಎಫ್ (ಸಾರ್ವತ್ರಿಕ ಸೇವಾ ಬಾಧ್ಯತೆ ನಿಧಿ) ಅಡಿ ಮಂಜೂರು ಮಾಡಿರುವುದಾಗಿ ತಿಳಿಸಿದೆ.
ಜಿಲ್ಲೆಯಲ್ಲಿ 4ಜಿ ಸ್ಯಾಚುರೇಷನ್ ಯೋಜನೆಯಡಿ 134 ಮೊಬೈಲ್ ಟವರ್ ಅಳವಡಿಕೆಗೆ ಅನುಮೋದನೆ ನೀಡಿದೆ. 49 ಟವರ್‌ಗಳನ್ನು ಸ್ಥಾಪಿಸಿದ್ದು, ಅವುಗಳ ಪೈಕಿ 11 ಕಾರ್ಯನಿರ್ವಹಣೆಯಲ್ಲಿವೆ. 227 ಸ್ಥಳಗಳನ್ನು 4ಜಿಗೆ ಅಪ್‌ಗ್ರೇಡ್ ಮಾಡಲು ಯೋಜನೆ ರೂಪಿಸಿದ್ದು, 119 ಸ್ಥಳಗಳಲ್ಲಿ ಸ್ಥಾಪನೆ ಪೂರ್ಣಗೊಂಡಿದೆ ಮತ್ತು 87 ಸ್ಥಳಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದೆ. ಆದರೆ ಭೂಮಿ ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ.
ಬಾಕಿ ಮೊಬೈಲ್ ಟವರ್‌ಗಳ ಸ್ಥಾಪನೆ ಮತ್ತು ಯೋಜನೆ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ರಾಜ್ಯ ಪ್ರಾಧಿಕಾರಗಳೊಂದಿಗೆ ಬಿಎಸ್‌ಎನ್‌ಎಲ್ ಸಕ್ರಿಯವಾಗಿ ಸಮನ್ವಯ ಸಾಧಿಸುತ್ತಿದೆ. ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದಿಂದ ಬಾಕಿ ಮೊಬೈಲ್ ಟವರ್‌ಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಒದಗಿಸುವ ವಿಶ್ವಾಸವಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.