

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಷಯದಲ್ಲಿ ಅನಿಶ್ಚಿತತೆ ಮುಂದುವರಿಸಿ, ವಿಳಂಬ ಮಾಡುವುದು ಸರಿಯಲ್ಲ. ಇದರಿಂದ ಅನಗತ್ಯ ಗೊಂದಲ, ಅಪಸ್ವರಕ್ಕೆ ಕಾರಣವಾಗುತ್ತದೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ಷೇಪಿಸಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ ಅವರು, ಯಾರಾದರೂ ದೆಹಲಿಗೆ ಕರೆಯಿಸಿಕೊಂಡರೋ ಹೋದರೋ ಗೊತ್ತಿಲ್ಲ. ಸಂಘಟನಾ ಪರ್ವಕ್ಕೆ ಚಾಲನೆ ನೀಡಿದ ಬಳಿಕ ಎಲ್ಲ ಹಂತದ ಪ್ರಕ್ರಿಯೆಗಳು ಕಾಲಮಿತಿಯೊಳಗೆ ಪೂರ್ಣಗೊಂಡರೆ ಜವಾಬ್ದಾರಿ ಹೊತ್ತವರಿಗೆ ಹುರುಪು ಹೆಚ್ಚಿ, ಸಂಘಟನೆಯಲ್ಲಿ ಚೈತನ್ಯ ತುಂಬಲ ಶಕ್ತರಾಗುತ್ತಾರೆ ಎಂದು ವಿಶ್ಲೇಷಿಸಿದರು.
ಆಂತರಿಕ ಸಮಸ್ಯೆ ಕೆಂಡದಂತೆ ಬಿಸಿಯಾಗಿರುವುದು ಸತ್ಯ. ತಾರ್ಕಿಕ ಅಂತ್ಯ ಕಾಣಿಸಲು ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡಲು ಬೇಕಾದ ನಿರ್ಣಯಗಳನ್ನು ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಕೈಗೊಳ್ಳಬಹುದಾಗಿದೆ ಎಂದರು.
ವಿಜಯೇಂದ್ರ ಬದಲಾವಣೆಗೆ ಬೆಂಬಲಿಸಲು ಕೋರಿ ಅತೃಪ್ತರ ಬಣದವರು ಭೇಟಿಯಾದದ್ದನ್ನು ಖಚಿತಪಡಿಸಿದ ಡಿವಿಎಸ್, ಹಲವು ಹಿರಿಯರು ನನ್ನಲ್ಲಿಗೂ ಬಂದು, ಮಾತನಾಡಿದರು. ನನ್ನ ಬಳಿ ಏನೇ ಹೇಳಿದರೂ ಅದು ಕಸದ ಬುಟ್ಟಿಗೆ ಸೇರುತ್ತದೆ.
ಕರ್ನಾಟಕದಲ್ಲಿ ಯಾರೊಂದಿಗೂ ಮಾತುಕತೆ ನಡೆಸಿದರೂ ಪರಿಹಾರ ಸಿಗುವುದಿಲ್ಲ. ನೇರ ವರಿಷ್ಠರಿಗೆ ಭೇಟಿಯಾಗಿ ಮಾತನಾಡಿ, ಶಂಖದಿಂದ ಬಂದರೆ ತೀರ್ಥ ಇಲ್ಲದಿದ್ದರೆ ವ್ಯರ್ಥವೆಂದು ಹೇಳಿ ಕಳುಹಿಸಿರುವೆ ಎಂದು ತಿಳಿಸಿದರು.