ಪದವಿ ಕಾಲೇಜು: ಮತ್ತೆ ಅತಂತ್ರ ಸ್ಥಿತಿಯಲ್ಲಿ ಅತಿಥಿ ಉಪನ್ಯಾಸಕರು

Teacher teaching students in the classroom scene
Teacher teaching students in the classroom scene illustration
Published on

ಬೆಂಗಳೂರು: ಯುಜಿಸಿ ಅರ್ಹತೆ ಹೊಂದಿರುವವರನ್ನು ಮಾತ್ರ ಅತಿಥಿ ಉಪನ್ಯಾಸಕರಾಗಿ ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್ ಆದೇಶ ನೀಡಿರುವ ಕಾರಣ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುಜಿಸಿ ಅನರ್ಹ ಅತಿಥಿ ಉಪನ್ಯಾಸಕರ ಸ್ಥಿತಿ ಮತ್ತೆ ಅತಂತ್ರವಾಗಿದೆ.

ಸಾಕಷ್ಟು ಚರ್ಚೆಗಳ ಬಳಿಕ ಇದೇ ತಿಂಗಳ ಮೊದಲ ವಾರವಷ್ಟೇ ಕಳೆದ ವರ್ಷ ಕಾರ್ಯ ನಿರ್ವಹಿಸಿದ್ದ ಎಂಟು ಸಾವಿರ ಅತಿಥಿ ಉಪನ್ಯಾಸಕರನ್ನು ಕಾಲೇಜು ಶಿಕ್ಷಣ ಇಲಾಖೆಯು ನೇಮಕ ಮಾಡಿತ್ತು.

ಕಾನೂನು ತೊಡಕಿನಿಂದ ಕಳೆದ ಎರಡು ತಿಂಗಳುನಿಂದ ಕಗ್ಗಂಟಾಗಿದ್ದ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ನೇಮಕ ವಿಚಾರವನ್ನು ಸರ್ಕಾರವು ಬಗೆಹರಿಸಿದ್ದು, ಕಳೆದ ವರ್ಷ ಕಾರ್ಯನಿರ್ವಹಿಸಿದ್ದ ಅತಿಥಿ ಉಪನ್ಯಾಸಕರನ್ನೇ 2025-26ನೇ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲು ಅನುಮತಿ ನೀಡಿದೆ.

ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ನೀಡಿರುವ ಕಾನೂನು ಅಭಿಪ್ರಾಯದಂತೆ ಸೆ.9ರಂದು ನೀಡಿರುವ ಮಧ್ಯಂತರ ಆದೇಶದ ಅವಲೋಕನಗಳಿಗೆ ಒಳಪಟ್ಟಿರುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2025-26ನೇ ಶೈಕ್ಷಣಿಕ ಸಾಲಿನ ಹಾಲಿ ಸೆಮಿಸ್ಟರ್ ಪೂರ್ಣಗೊಳ್ಳುವವರೆಗೆ 2024-25ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸಿದ ಅತಿಥಿ ಉಪನ್ಯಾಸಕರನ್ನೇ ಕಾರ್ಯಭಾರಕ್ಕೆ ಅನುಗುಣವಾಗಿ ಮುಂದುವರಿಸಲು ಅನುಮತಿ ನೀಡಲಾಗಿದೆ.

ಈ ರೀತಿ ಮುಂದುವರಿಕೆ ನಂತರವೂ ಕಾರ್ಯಭಾರವಿದ್ದಲ್ಲಿ ಅಂತಹ ಕಾರ್ಯಭಾರಕ್ಕೆ ಎದುರಾಗಿ ನ್ಯಾಯಾಲಯದ ಮಧ್ಯಂತರ ಆದೇಶದ ಅನುಸಾರ ಪ್ರಸ್ತುತ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಯುಜಿಸಿ ವಿದ್ಯಾರ್ಹತೆ ಹೊಂದಿರದ ಅಭ್ಯರ್ಥಿಗಳನ್ನು ಅತಿಥಿ ಉಪನ್ಯಾಸಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು.

ಯುಜಿಸಿ ಅರ್ಹತೆಗೆ ಹೈಕೋರ್ಟ್ ಸೂಚನೆ

ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಲು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ನಿಗದಿಪಡಿಸಿರುವ ಕೆ-ಸೆಟ್/ನೆಟ್/ಪಿಎಚ್.ಡಿ. ಪದವಿಯನ್ನು ಪಡೆದಿರಬೇಕು ಎಂದು ಸೂಚನೆ ನೀಡಿದೆ.

ಮತ್ತೆ ಕಾನೂನು ಮೊರೆ ಹೋದ ಸರ್ಕಾರ

ಹೈಕೋರ್ಟ್ ಆದೇಶದ ಬೆನ್ನಲ್ಲಿಯೇ ಈಗಾಗಲೇ ನೇಮಿಸಿರುವ ಎಂಟು ಸಾವಿರಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕೋ ಬೇಡವೋ ಎಂದು ಉನ್ನತ ಶಿಕ್ಷಣ ಇಲಾಖೆಯು ಕಾನೂನು ಅಭಿಪ್ರಾಯ ಕೇಳಿದೆ.

ಇದರಿಂದ ಈಗಾಗಲೇ ನೇಮಿಸಿರುವ ಉಪನ್ಯಾಸಕರನ್ನು ಬಿಡಿಸುವುದರಿಂದ ಈ ಸೆಮಿಷ್ಟರ್ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಈಗಾಗಲೇ ಎರಡು ತಿಂಗಳು ಪಾಠಗಳು ನಡೆದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕೆಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾನವಾಗಿದೆ. ಹೀಗಾಗಿ, ಯಾವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂದು ತಿಳಿಸುವಂತೆ ಕಾನೂನು ಅಭಿಪ್ರಾಯ ಕೇಳಿರುವುದಾಗಿ ಉನ್ನತ ಶಿಕ್ಷಣ ಇಲಾಖೆ ಆಯುಕ್ತೆ ಎನ್. ಮಂಜುಶ್ರೀ ತಿಳಿಸಿದ್ದಾರೆ.

ಸುಮಾರು 5 ಸಾವಿರ ಮಂದಿ ಅತಂತ್ರ

ಹತ್ತಾರು ವರ್ಷಗಳಿಂದ ಬೋಧನೆ ಮಾಡುತ್ತಿದ್ದರೂ ಯುಜಿಸಿ ಅರ್ಹತೆ ಹೊಂದಿರದ ಸುಮಾರು 5 ಸಾವಿರ ಉಪನ್ಯಾಸಕರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net