ಅನುಕಂಪದ ನೇಮಕಗಳಿಂದ ಗುಣಮಟ್ಟ ಕುಸಿತ!; ಸರ್ಕಾರದಿಂದ ನೇಮಕ ಪ್ರಸ್ತಾವನೆಗಳಿಗೆ ಬ್ರೇಕ್

Vidhanasoudha
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುತ್ತಿರುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳ ಕುರಿತು ಮುಂದಿನ ನಿರ್ದೇಶನದವರೆಗೆ ಯಾವುದೇ ಕ್ರಮಕೈಗೊಳ್ಳದೇ ತಡೆಹಿಡಿಯಲು ಗ್ರಾಮೀಣಾಭಿವೃದ್ಧಿ ಇಲಾಖೆ ತೀರ್ಮಾನಿಸಿದೆ.

ಈ ತೀರ್ಮಾನಕ್ಕೆ ಮೂರು ಕಾರಣಗಳನ್ನು ಇಲಾಖೆ ಪ್ರಸ್ತಾಪಿಸಿದ್ದು, ಗುಣಮಟ್ಟ ಕುಸಿಯುವ ಕಳವಳ ವ್ಯಕ್ತಪಡಿಸಿದೆ. ಜಿಲ್ಲಾ ಪಂಚಾಯಿತಿಗಳಿಗೆ ಪತ್ರವನ್ನೂ ಬರೆದು ಮುಂದೆ ಆಗಬಹುದಾದ ಸಮಸ್ಯೆ ಬಗ್ಗೆ ಸೂಚ್ಯವಾಗಿ ತಿಳಿಸಿದೆ.

- ಆಗಿದ್ದೇನು?

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಗಣನೀಯ ಪ್ರಮಾಣದ ಗ್ರೂಪ್-ಸಿ ಹುದ್ದೆಗಳು ಹಾಲಿ ಇದ್ದು, ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿರುವುದನ್ನು ಗಮನಿಸಿ ಅನುಕಂಪದ ನೇಮಕಾತಿ ಕುರಿತು ಬಾಕಿ ಇರುವ ಪ್ರಸ್ತಾವನೆಗಳ ಪೈಕಿ ಪ್ರಥಮ ದರ್ಜೆ ಸಹಾಯಕರು, ಶೀಘ್ರಲಿಪಿಗಾರರು ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಹುದ್ದೆಗಳ ಎದುರು ನೇಮಕ ಮಾಡಲು ಅನುವಾಗುವಂತೆ ತಿಳಿಸಲಾಗಿತ್ತು.

ಇತ್ತೀಚಿನ ಬೆಳವಣಿಗೆಯಂತೆ, ಪ್ರಾದೇಶಿಕ ಆಯುಕ್ತರ ಕಚೇರಿಗಳಿಂದ ಸ್ವೀಕೃತವಾಗುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಆಧರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯತ್‌ಗಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹೀಗೆ ನೇಮಕ ಮುಂದುವರೆದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ನೇರನೇಮಕಾತಿ ಖೋಟಾದಡಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆಯೇ ಭರ್ತಿ ಮಾಡಬಹುದಾದ ಸಂದರ್ಭ ಉಂಟಾಗುತ್ತದೆ ಎಂದು ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಈ ರೀತಿ ಆದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಚೇರಿಗಳ ಕಾರ್ಯನಿರ್ವಹಣೆಯ ಗುಣಮಟ್ಟ ಕುಸಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

ಅಲ್ಲದೇ ಕರ್ತವ್ಯದಲ್ಲಿದ್ದಾಗ ಮರಣ ಹೊಂದುವ ನೌಕರರ ಕುಟುಂಬದ ಸದಸ್ಯರಿಗೆ ನೇಮಕಾತಿ ನೀಡಲು ಹುದ್ದೆಗಳು ಲಭ್ಯವಾಗದ ಸನ್ನಿವೇಶ ನಿರ್ಮಾಣವಾಗುತ್ತದೆ. ಹೀಗಾಗಿ ಈ ಅಂಶಗಳನ್ನು ಗಮನಿಸಿ, ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಆಧರಿಸಿ ಮಾಡುವ ಅನುಕಂಪದ ನೇಮಕಾತಿಯನ್ನು ಒಂದು ನಿರ್ದಿಷ್ಟ ಪ್ರಮಾಣಕ್ಕೆ ಸೀಮಿತಗೊಳಿಸುವುದು ಅಗತ್ಯವೆಂದು ನಿರ್ಣಯಿಸಿದೆ.

ಆದ್ದರಿಂದ ಈ ವಿಷಯದ ಕುರಿತು ಸರ್ಕಾರದಿಂದ ಮುಂದಿನ ನಿರ್ದೇಶನ ನೀಡುವವರೆಗೆ ಪ್ರಾದೇಶಿಕ ಆಯುಕ್ತರ ಮುಖಾಂತರ ಸ್ವೀಕೃತವಾಗಿರುವ ಸ್ವೀಕೃತವಾಗುವ ಅನುಕಂಪದ ನೇವಕಾತಿ ಪ್ರಸ್ತಾವನೆಗಳ ಕುರಿತು ಯಾವುದೇ ಕ್ರಮ ವಹಿಸದಂತೆ ಹಾಗೂ ಈಗಾಗಲೇ ಪರಿಶೀಲನೆಯಲ್ಲಿರುವ ಪ್ರಸ್ತಾವನೆಗಳನ್ನು ಯಾವ ಹಂತದಲ್ಲಿದೆಯೋ ಅದೇ ಹಂತಕ್ಕೆ ಬಾಕಿ ಇಡುವಂತೆ ಗ್ರಾಮೀಣಾಭಿವೃದ್ಧಿ ಇಲಾಖೆಯು ಎಲ್ಲ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net