

ಬೆಂಗಳೂರು: ಲೋಕಸಭೆಚ ಚುನಾವಣೆಯಲ್ಲಿ ಪಕ್ಷವು ಕರ್ನಾಟಕದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನಗಳನ್ನು ಗೆಲ್ಲಲು ವಿಲವಾಗಿರುವುದಕ್ಕೆ ಕಾರಣ ಹುಡುಕಲು ಅಖಿಲ ಭಾರತ ಕಾಂಗ್ರೆಸ್ ರಚಿಸಿರುವ ಸತ್ಯಶೋಧನಾ ಸಮಿತಿ ಗುರುವಾರದಿಂದ ಎರಡು ದಿನ ರಾಜ್ಯದಲ್ಲಿ ಸರಣಿ ಸಭೆ ನಡೆಸಿ ವರದಿ ಸಿದ್ಧಪಡಿಸಲಿದೆ.
ಹಿರಿಯ ಮುಖಂಡ ಮಧುಸೂದನ ಮಿಸಿ ನೇತೃತ್ವದ ಸತ್ಯಶೋಧನಾ ಸಮಿತಿಯಲ್ಲಿ ಸಂಸದ ಗೌರವ್ ಗೊಗೋಯಿ, ಹಿಬಿ ಹಿಡನ್ ಸದಸ್ಯರಾಗಿದ್ದಾರೆ.
ಕರ್ನಾಟಕದಿಂದ ಆಯ್ಕೆಯಾದ ಎಐಸಿಸಿ ಪದಾಧಿಕಾರಿಗಳು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ನಾಯಕರು, ಸಚಿವರು, ಲೋಕಸಭೆ ಹಾಗೂ ರಾಜ್ಯ ಸಭಾ ಸದಸ್ಯರು, ಜಿಲ್ಲಾಧ್ಯಕ್ಷರ ಸಭೆ ಜುಲೈ 11ರಂದು ನಡೆದರೆ, 12ರಂದು ಕೆಪಿಸಿಸಿ ಪದಾಧಿಕಾರಿಗಳು, 2024ರ ಲೋಕಸಭಾ ಅಭ್ಯರ್ಥಿಗಳು, 2023ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳು, ಮುಂಚೂಣಿ ಘಟಕ, ಸೆಲ್ ಮತ್ತು ವಿಭಾಗದ ಅಧ್ಯಕ್ಷರು, ನಿಗಮ- ಮಂಡಳಿ ಅಧ್ಯಕ್ಷರು, ಕೆಪಿಸಿಸಿ ಕಾರ್ಯಾಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸಮಿತಿ ಮಾಹಿತಿ ಕಲೆ ಹಾಕಲಾಗಿದೆ.
ಯಾವ ಕಾರಣಕ್ಕೆ ತಮ್ಮ ವ್ಯಾಪ್ತಿಯಲ್ಲಿ ಪಕ್ಷಕ್ಕೆ ಹಿನ್ನೆಡೆಯಾಯಿತು, ನಿಮಗಿದ್ದ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಿದ್ದೀರಿ, ಗ್ಯಾರಂಟಿ ಕೈ ಹಿಡಿಯದೇ ಇರಲು ಕಾರಣವೇನು? ಎಂಬಿತ್ಯಾದಿ ಮಾಹಿತಿಯನ್ನು ಸಮಿತಿ ಪಡೆದುಕೊಳ್ಳಲಿದೆ.
ಇದೇ ವೇಳೆ ಕೆಪಿಸಿಸಿಯು ಸತ್ಯ ಶೋಧನೆಗೆ ನಾಲ್ಕು ಪ್ರತ್ಯೇಕ ತಂಡ ರಚಿಸಿದ್ದು, ಅದು ಮಾಹಿತಿ ಸಂಗ್ರಹಿಸಿ ನೀಡುವ ವರದಿಯನ್ನು ಕೇಂದ್ರ ಸತ್ಯಶೋಧನಾ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.