

'ಅಮ್ಮ' – ಆ ಮೂರು ಅಕ್ಷರದ ನುಡಿ. ಆ ಸ್ಪಷ್ಟವಾದ, ಮಗುವಿನಂತೆ ತೋರುವ ಧ್ವನಿ ಕಿವಿಗೆ ಬಿದ್ದ ತಕ್ಷಣ ದಿಯಾಳಿಗೆ ಹೃದಯವೇ ಬೆಚ್ಚಿಬಿದ್ದಂತಾಯಿತು. ಕಣ್ಣೆದುರೇ ಹಾಸಿಗೆಯ ಮೇಲೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಆ ಕ್ರೂರ ಉಗ್ರಗಾಮಿ, ನಬೀಲ್, ಅದೇ ಶಬ್ದವನ್ನು ಉಸಿರಿದಾಗ ಅವಳೊಳಗಿನ ನೆಮ್ಮದಿಯ ಗೂಡು, ಅಕ್ಕರೆಯ ಬದುಕು ಒಮ್ಮೆಲೆ ಅಲುಗಾಡಿ ಹೋಯಿತು. ಅವನ ಧ್ವನಿ ನಿಜವಾಗಿಯೂ ತಾಯಿಯನ್ನು ಕರೆಯುವ ಮುಗ್ಧ ಮಗುವಿನ ಅಂತರಾಳದ ಕರೆ ಇದ್ದಂತೆ ಇತ್ತು. ಆ ಕ್ಷಣದಲ್ಲಿ, ಅವಳ ಕಣ್ಣುಮುಂದೆ ಒಂದು ಪುಟ್ಟ ಕಂದಮ್ಮ ಕುಳಿತಂತಾಯಿತು. ಆದರೆ ಅದು ಕಂದಮ್ಮನಾಗಿರಲಿಲ್ಲ, ಅದು ನಬೀಲ್.
ತನ್ನ ಇಡೀ ಕುಟುಂಬವನ್ನು, ತನ್ನೆಲ್ಲಾ ನೆಮ್ಮದಿಯನ್ನು ಕಿತ್ತುಕೊಂಡಿದ್ದ ಕ್ರೂರ ಉಗ್ರಗಾಮಿ. ಅವನ ಹೆಸರು ನೆನಪಾದಾಗಲೆಲ್ಲಾ ಅವಳೊಳಗೆ ಕೋಪಾಗ್ನಿ ಭುಗಿಲೇಳುತ್ತಿತ್ತು. ಆ ಒಂದು ಶಬ್ದ ಅವಳೊಳಗೆ ಅಡಗಿದ್ದ ನೋವು, ಕೋಪ, ಆಕ್ರೋಶ, ಅವಮಾನ ಮತ್ತು ಹತಾಶೆಗಳನ್ನು ಒಮ್ಮೆಲೇ ಬಿಚ್ಚಿಹಾಕಿತು. 'ಅಮ್ಮ' ಎಂದಾಗ, ಆ ಶಬ್ದಕ್ಕೇ ಅರ್ಥವಿಲ್ಲದ ಎದೆಯೊಳಗಿನ ತೀವ್ರ ಅಳಲೊಂದು ಸೇರಿಕೊಂಡಂತೆ ಭಾಸವಾಯಿತು. ಅದು ಕೇವಲ ಧ್ವನಿಯಾಗಿರಲಿಲ್ಲ, ಬದಲಿಗೆ ಆಳವಾದ ಒಂದು ಭಾವನೆಯ ಗಾಯವಾಗಿತ್ತು. ಎಂದಿಗೂ ಮಾಸದ, ಮತ್ತೆ ಮತ್ತೆ ಕೆರೆದುಕೊಳ್ಳುವ ಗಾಯ. ಆ ಶಬ್ದ ಪ್ರತಿಧ್ವನಿಸಿದಂತೆ, ಅವಳ ಕುಟುಂಬದ ನಗುಮುಖಗಳು, ಅವರೊಂದಿಗೆ ಕಳೆದ ಪ್ರತಿಯೊಂದು ಸಿಹಿ ಕ್ಷಣವೂ ಮರುಕಳಿಸಿತು.
ಅಪ್ಪನ ಆ ಗಟ್ಟಿ ಧ್ವನಿ, ಬೆನ್ನು ತಟ್ಟಿದ ಅಮ್ಮನ ಪ್ರೀತಿಯ ಮಮಕಾರದ ಸ್ಪರ್ಶ, ಅಣ್ಣನ ಮುದ್ದಾದ ಕಿರಿಕಿರಿ, ತಂಗಿಯ ನವಿರಾದ ನಗು. ಎಲ್ಲವೂ ಒಂದು ಭೀಕರ ಬಾಂಬ್ ಸ್ಫೋಟದಲ್ಲಿ ಮರೆಯಾಗಿದ್ದು, ಆ ದೃಶ್ಯ ಮತ್ತೆ ಅಸಹಾಯಕಳಾಗಿ ನೋಡಲು ಸಾಧ್ಯವಾಗಲಿಲ್ಲ. ಎಷ್ಟೇ ಪ್ರಯತ್ನಿಸಿದರೂ, ಆ ಕ್ಷಣಗಳು, ಆ ನೆನಪುಗಳು ಅವಳನ್ನು ಬಿಡದೆ ಕಾಡುತ್ತಿದ್ದವು.. ದಿಯಾ, ಸೇನಾ ಆಸ್ಪತ್ರೆಯ ಹದಿನೈದನೆಯ ವಾರ್ಡ್‌ನ ಆ ಒಂದೇ ಕೋಣೆಯಲ್ಲಿ ತನ್ನ ಪಾಡಿಗೆ ತಾನು ದುಡಿಯುತ್ತಿದ್ದಳು. ಅವಳಿಗೆ ಹೊರಗಿನ ಪ್ರಪಂಚದ ಅರಿವೇ ಇರಲಿಲ್ಲ. ಸೇನಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಸೇರಿ ಇದು ಆಕೆಯ ಮೂರನೇ ದೀಪಾವಳಿ.... ಆದರೆ ಈ ಬಾರಿ, ಅವಳ ಬದುಕಿನಲ್ಲಿ ದೀಪವಿರಲಿಲ್ಲ, ಹಬ್ಬದ ಸಂಭ್ರಮಕ್ಕೆ ಮನಸ್ಸೇ ಇರಲಿಲ್ಲ. ಹಿಂದಿನ ದೀಪಾವಳಿಗಳಲ್ಲಿ ಅಮ್ಮನ ಕೈತುತ್ತು, ಅಪ್ಪನ ತಮಾಷೆಗಳು, ಅಣ್ಣ-ತಂಗಿಯರ ಜೊತೆ ಪಟಾಕಿ ಹಚ್ಚಿದ ನೂರಾರು ನೆನಪುಗಳು ಹೃದಯವನ್ನು ಕೊರೆಯುತ್ತಿದ್ದವು. ದೀಪಾವಳಿ ಎಂದರೆ ಅವಳಿಗೆ ಕೇವಲ ಕರಾಳ ನೆನಪುಗಳ ಮೆರವಣಿಗೆಯಾಗಿತ್ತು.
ಆ ದಾಳಿ… ಅದು ಕೇವಲ ಒಂದು ಸ್ಫೋಟವಾಗಿರಲಿಲ್ಲ, ಅದು ದಿಯಾಳ ಬದುಕಿನ ಆಧಾರವನ್ನೇ ಕಸಿದುಕೊಂಡಿತ್ತು. ಆ ಭೀಕರ ಬಾಂಬ್ ಸ್ಫೋಟ. ಕಣಿವೆಯ ಮುಂಭಾಗದಲ್ಲಿ ಅವಳು ಕಳೆದುಕೊಂಡ ದೇಹಗಳು, ತನ್ನವರ ಜೀವವಿಲ್ಲದ, ಛಿದ್ರವಾದ ದೇಹಗಳನ್ನು ನೋಡಿದಾಗ ಅವಳ ಆತ್ಮವೇ ಹೊರಟುಹೋದಂತಾಗಿತ್ತು. ತಾಯಿ, ಅಪ್ಪ, ಅಣ್ಣ, ತಂಗಿ – ಎಲ್ಲರೂ ಒಂದೇ ಒಂದು ಕ್ಷಣದಲ್ಲಿ, ಆ ಒಂದೇ ಸ್ಫೋಟದ ರಭಸಕ್ಕೆ ಬಲಿಯಾದರು. ಅವರನ್ನು ಉಳಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಅವಳು ಮಾತ್ರ ಉಳಿದುಕೊಂಡಳು. ಬದುಕುಳಿದು ನರಳಲು, ಆ ನೋವನ್ನು ಸದಾ ಕಾಲ ಹೊತ್ತುಕೊಳ್ಳಲು. ಆ ಕ್ಷಣದಲ್ಲಿ ಜಗತ್ತು ಶೂನ್ಯವಾಗಿತ್ತು. ಪ್ರಪಂಚದಲ್ಲಿ ತನ್ನದಾದದ್ದು ಏನೂ ಇಲ್ಲ ಎನ್ನುವಂತೆ ಭಾಸವಾಗಿತ್ತು. ತಿನ್ನಲು ಮನಸ್ಸಾಗಲಿಲ್ಲ, ನಿದ್ದೆ ಬರಲಿಲ್ಲ. ಆದರೆ ಆ ಶೂನ್ಯತೆಯ ನಡುವೆಯೇ ಅವಳನ್ನು ಮರಳಿ ಬದುಕಿಗೆ ತಂದದ್ದು, ಆಕೆಯ ಬಿಳಿಯ ನರ್ಸ್ ಕೋಟ್.
ಅದು ಕೇವಲ ಬಟ್ಟೆಯಾಗಿರಲಿಲ್ಲ, ಅದು ಕರ್ತವ್ಯದ ಸಂಕೇತವಾಗಿತ್ತು, ಬದುಕನ್ನು ಮುಂದುವರಿಸಲು ಒಂದು ಬಲವಾದ ಕಾರಣವಾಗಿತ್ತು. ಜೀವ ಉಳಿಸುವ ಕರ್ತವ್ಯ. ಅನ್ಯರ ಬದುಕಿಗೆ ಆಶಾಕಿರಣವಾಗುವ ಹೊಣೆ. ಅದೇ ಆಕೆಗೆ ಜೀವಾಮೃತವಾಗಿತ್ತು. ಆದರೆ ಇದೀಗ, ಅವಳ ಬದುಕಿನ ಈ ಕರ್ತವ್ಯಕ್ಕೆ ಅತಿ ದೊಡ್ಡ ಪರೀಕ್ಷೆ ಎದುರಾಗಿತ್ತು. ಅದೇ ನಬೀಲ್. ಅವನನ್ನು ಸೆರೆಹಿಡಿದು, ದೇಹದಾದ್ಯಂತ ತೀವ್ರ ಗಾಯಗಳೊಂದಿಗೆ ಆಸ್ಪತ್ರೆಗೆ ತಂದಾಗ, ದಿಯಾಳ ಎದೆಯೊಳಗೆ ಒಂದು ಯುದ್ಧವೇ ಶುರುವಾಯಿತು. ಇದು ಕೇವಲ ರೋಗಿಯ ಚಿಕಿತ್ಸೆಯಾಗಿರಲಿಲ್ಲ, ತನ್ನ ಆತ್ಮದ ಜೊತೆಗಿನ ಹೋರಾಟವಾಗಿತ್ತು. ತನ್ನ ಕುಟುಂಬವನ್ನು ನಿರ್ದಯವಾಗಿ ನುಂಗಿದ ಬಾಂಬ್ ಹಾಕಿದ ಅದೇ ಜೀವಕ್ಕೆ ಈಗ ತಾನೇ ಚಿಕಿತ್ಸೆ ನೀಡಬೇಕಿತ್ತು!
ಯಾವ ಕೈಗಳು ತನ್ನ ಕುಟುಂಬವನ್ನು ಸರ್ವನಾಶ ಮಾಡಿದವೋ, ಅದೇ ಕೈಗಳಿಗೆ ಔಷಧ ನೀಡಬೇಕಿತ್ತು. ಪ್ರತಿ ಬಾರಿ ಅವನ ಗಾಯದ ಮೇಲೆ ಔಷಧ ಹಾಕಿದಾಗಲೂ, ಆ ಕ್ರೂರ ಘಟನೆ ಕಣ್ಣು ಮುಂದೆ ಮರುಕಳಿಸುತ್ತಿತ್ತು. 'ಈತನನ್ನು ಉಳಿಸುವ ಅಗತ್ಯವಿದೆಯೇ? ಇವನು ಬದುಕಿ ಮತ್ತಷ್ಟು ಜನರನ್ನು ಕೊಲ್ಲಬೇಕೇ?' ಎಂಬಂತಹ ಪ್ರಶ್ನೆಗಳು ಅವಳ ಮನಸ್ಸನ್ನು ಕಾಡುತ್ತಿದ್ದವು. ಮಾನವೀಯತೆ ಮತ್ತು ವೈಯಕ್ತಿಕ ಸೇಡಿನ ನಡುವೆ ಅವಳು ಸಿಕ್ಕಿಹಾಕಿಕೊಂಡಿದ್ದಳು.. ಮೊದಲಿಗೆ ಅವಳ ಕೈ ನಡುಗುತ್ತಿತ್ತು. ಇಂಜೆಕ್ಷನ್ ಹಿಡಿದ ಕೈಯಲ್ಲಿ ಕ್ರೂರ ನೆನಪುಗಳ ಹಸಿರು ಮರಳು ಜಾರುವಂತೆ ಭಾಸವಾಗುತ್ತಿತ್ತು. ಆ ಸೂಜಿ ಇರಿತವು ಅವನ ನೋವಿಗಿಂತ ಹೆಚ್ಚಾಗಿ ಅವಳೊಳಗಿನ ಕೋಪವನ್ನು, ಆಕ್ರೋಶವನ್ನು ಕೆರಳಿಸುತ್ತಿತ್ತು. ಅವನ ಮುಖವನ್ನು ನೋಡಲೂ ಅವಳಿಗೆ ಮನಸ್ಸಾಗುತ್ತಿರಲಿಲ್ಲ.
ಪ್ರತಿ ಬಾರಿ ಪ್ಯಾಡ್ ಬದಲಾಯಿಸುವಾಗ ತನ್ನ ತಂಗಿಯ ಕೊನೆಯ ನರಳಾಟ, ಆ ಮುಗ್ಧ ಮುಖ ಕಣ್ಣು ಮುಂದೆ ಮರುಕಳಿಸುತ್ತಿತ್ತು. ಆ ತಂಗಿ ಸಾಯುವ ಮುನ್ನ ತನ್ನ ಕೈ ಹಿಡಿದು ನೋಡಿದ ಕೊನೆಯ ನೋಟ, ಅವಳನ್ನು ಕಾಡುತ್ತಿರುವ ದುಃಸ್ವಪ್ನವಾಗಿತ್ತು. ನಬೀಲ್‌ನ ನರಳಾಟವನ್ನು ನೋಡುವಾಗ, ತನ್ನವರ ನರಳಾಟವೇ ನೆನಪಾಗಿ, ಅವನನ್ನು ಹೆಚ್ಚು ನೋಯಿಸಬೇಕೆಂಬ ಕ್ಷಣಿಕ ಯೋಚನೆಯೂ ಸುಳಿಯುತ್ತಿತ್ತು. ಆದರೆ, ಅವಳೊಳಗಿನ 'ನರ್ಸ್'. ಅವಳ ಮನಃಸಾಕ್ಷಿ, ಅವಳ ಮಾನವೀಯ ಕರ್ತವ್ಯದ ಧರ್ಮವನ್ನು ಎಂದಿಗೂ ಮರೆಯಲಿಲ್ಲ. ಮಾನವೀಯತೆಯ ದೀಪವನ್ನು ಆರದಂತೆ ಕಾಪಾಡಿಕೊಂಡಿತು. ಬೆನ್ನುಮೂಳೆ ಮುರಿದು ನರಳುತ್ತಿದ್ದ ನಬೀಲ್‌ನ ಪ್ರತಿ ಪೆಟ್ಟಿಗೂ, ಪ್ರತಿ ಗಾಯಕ್ಕೂ ಔಷಧ ಹಾಯಿಸುವಾಗಲೂ ಅವಳ ಹೃದಯ ಭಾರವಾಗುತ್ತಿತ್ತು. ಅವಳ ಬಾಯಿಂದ ಒಂದೂ ಶಬ್ದ ಹೊರಡುತ್ತಿರಲಿಲ್ಲ, ಮೌನವೇ ಆವರಣವಾಗಿತ್ತು.
ಕರ್ತವ್ಯ ಮತ್ತು ಕ್ರೌರ್ಯದ ನಡುವಿನ, ಮಾನವೀಯತೆ ಮತ್ತು ಸೇಡಿನ ನಡುವಿನ ಅತಿದೊಡ್ಡ ಮೌನ. ನಬೀಲ್ ಸಹ ಮೊದಲಿಗೆ ಮೌನ. ಬರಿಗಣ್ಣಿನಿಂದ ದಿಯಾರನ್ನು ನೋಡುತ್ತಿರಲಿಲ್ಲ. ತನ್ನ ಪಾಡಿಗೆ ತಾನು ಹಾಸಿಗೆಯ ಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿರುತ್ತಿದ್ದ. ಆ ಮೌನದ ನಡುವೆ ನಿದ್ರೆ, ನಿದ್ರೆಯ ನಡುವೆ ನೋವಿನ ನರಳಾಟ, ನರಳಾಟದ ಮಧ್ಯೆ… "ಅಮ್ಮ..." ಅವನ ಕಣ್ಣುಗಳು ಗಲಿಬಿಲಿಯಲ್ಲಿ ನೋಡಿದಾಗ, ಅದರಲ್ಲಿ ಕಾಣಿಸಿದ್ದು, ಬದುಕಲು ಹೆದರುತ್ತಿದ್ದ, ಮುಗ್ಧ ಮಗುವಿನ ಭೀತಿ. ಅವನ ಧ್ವನಿ ಆಸ್ಪತ್ರೆಯ ಮೌನವನ್ನು ಭೇದಿಸಿ, ದಿಯಾಳ ಹೃದಯವನ್ನು ತಟ್ಟಿತ್ತು. "ಈ ಕ್ರೂರಿಗೂ ಅಮ್ಮನ ನೆನಪಿದೆಯೇ? ಇವನಲ್ಲೂ ಮನುಷ್ಯತ್ವದ ಸಣ್ಣ ಕಿಡಿಯಿದೆಯೇ? ಇವನೂ ಯಾರದೋ ಮಗನೇ?" ಎಂದು ದಿಯಾ ಅಚ್ಚರಿಗೊಂಡಳು. ತನ್ನ ಮನಸ್ಸನ್ನು ಕೊರೆಯುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಂತಾಗಿತ್ತು.
ಅವಳು ತನ್ನೆಲ್ಲಾ ಒಳತೋಟಿಗಳು, ಹೊಯ್ದಾಟಗಳು, ಧೈರ್ಯ, ಸ್ಥೈರ್ಯಗಳನ್ನು ಒಗ್ಗೂಡಿಸಿಕೊಂಡು ಅವನಿಂದ ದೂರ ಸರಿಯಬೇಕಿತ್ತು. ಆದರೆ ಅವಳ ಕಾಲು ಜಾರಲೇ ಇಲ್ಲ, ಅಲ್ಲಿಯೇ ಸ್ಥಬ್ಧವಾಗಿ ನಿಂತಿತ್ತು. ಕರ್ತವ್ಯ ಎಂಬುದು ಅವಳನ್ನು ಬಂಧಿಸಿತ್ತು. ಅವನ ಗಾಯವಾಗಿರುವ ಕೈಯನ್ನು ಮುಟ್ಟಿದಾಗ, ಹಾ...ಎನ್ನುತ್ತಾ ಅವನು ತನ್ನ ಮುಖವನ್ನು ನೋವಿನಿಂದ ತಿರುಗಿಸಿದ. ಅವನ ಕಣ್ಣುಗಳಿಂದ ಹರಿದಿದ್ದ ಒಂದು ಸಣ್ಣ ಹನಿ ನೀರು, ಅವನ ಹಾಸಿಗೆಯ ಮೇಲೆ ಜಾರಿತು. ಅದು ಕಣ್ಣೀರೋ, ನೋವಿನ ಬೆವರೋ ಗೊತ್ತಿಲ್ಲ- ಆದರೆ ಆ ಹನಿ ದಿಯಾಳ ಮನಸ್ಸಿನಲ್ಲಿ ಒಂದು ಪ್ರಶ್ನೆಯನ್ನು ಹುಟ್ಟುಹಾಕಿತು. "ಬಹುಶಃ ಇವನೂ ಬಲಿಯೇ ಇರಬಹುದೇ? ಯಾವ ಪರಿಸ್ಥಿತಿಗಳು ಇವನನ್ನು ಹೀಗೆ ಮಾಡಿದವು? ಅವನೂ ತನ್ನದೇ ಆದ ಕಥೆಯನ್ನು ಹೊಂದಿರಬಹುದೇ?" ಈ ಪ್ರಶ್ನೆಗಳು ಅವಳೊಳಗಿನ ಕೋಪವನ್ನು ಸಣ್ಣಗೆ ತಗ್ಗಿಸಿದವು. ಅವಳು ನಿತ್ಯವೂ ತಪ್ಪಿಸದೇ ಔಷಧ ಕೊಟ್ಟಳು, ಅವನಿಗೆ ಆಹಾರ, ನೀರು ನೀಡಿದಳು. ಅವನು ಸಣ್ಣದಾಗಿ ಏನೂ ಮಾತಾಡದೆ ತಿಂದನು.
ದಿನಗಳು ಉರುಳಿದಂತೆ, ನಬೀಲ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದನು. ದಿಯಾ ತನ್ನ ವಾರ್ಡ್ಗೆ ಬಂದಿದ್ದ ಪತ್ರಿಕೆಗಳನ್ನು, ಪುಸ್ತಕಗಳನ್ನು ಕುಳಿತು ಓದುತ್ತಿದ್ದಾಗ, ಅವನು ಕಣ್ಣಾರೆ ಅವಳನ್ನೇ ಕುಳಿತ. ಆ ಮೌನದಲ್ಲಿ, ಆ ನೋವಿನಲ್ಲಿ, ಅವರಿಬ್ಬರ ನಡುವೆ ಒಂದು ವಿಚಿತ್ರ, ಮಾತು ಮೀರಿದ ಬಾಂಧವ್ಯ ಬೆಳೆಯತೊಡಗಿತು. ಹಗಲು ಮೌನ. ರಾತ್ರಿ ಮೌನ. ಆದರೆ ಅವರ ಮನಸ್ಸುಗಳು ಮಾತ್ರ ಮೌನವಾಗಿರಲಿಲ್ಲ. ಒಳಗೊಳಗೇ ಮಾತಾಡಿಕೊಳ್ಳುತ್ತಿದ್ದವು, ತಮ್ಮ ನೋವು, ಭೀತಿ, ಪಾಪಪ್ರಜ್ಞೆಗಳನ್ನು ಹಂಚಿಕೊಳ್ಳುತ್ತಿದ್ದವು. ದಿಯಾ ಅವನ ಕಣ್ಣುಗಳಲ್ಲಿ ಕಂಡಿದ್ದು ಕೇವಲ ಕ್ರೌರ್ಯವಲ್ಲ, ಒಂದು ರೀತಿಯ ಅಸಹಾಯಕತೆ ಮತ್ತು ಪಶ್ಚಾತ್ತಾಪದ ಛಾಯೆ. ನಬೀಲ್‌ನ ಕಣ್ಣುಗಳಲ್ಲಿ ದಿಯಾರ ಬಗ್ಗೆ ಒಂದು ಗೌರವ ಮೂಡಿಬಂದಿತ್ತು.. ದೀಪಾವಳಿ ಹತ್ತಿರವಾಗುತ್ತಿತ್ತು. ಆಸ್ಪತ್ರೆಯ ಬಾಗಿಲಿಗೆ ದೀಪಮಾಲೆ ಕಟ್ಟುತ್ತಿದ್ದರು, ಬಣ್ಣ ಬಣ್ಣದ ದೀಪಗಳು ಮಿಂಚುತ್ತಿದ್ದವು.
ಹೊರಗೆ ಹಬ್ಬದ ವಾತಾವರಣ, ಎಲ್ಲೆಲ್ಲೂ ಪಟಾಕಿಗಳ ಸದ್ದು. ಆದರೆ ಆ ಬೆಳಕಿನ ಮಧ್ಯೆಯೂ ದಿಯಾಳ ಮನಸ್ಸು ಕತ್ತಲಲ್ಲಿತ್ತು. ಅವಳ ಪಾಲಿಗೆ ಆ ಬೆಳಕಿಗೆ ಅರ್ಥವೇಯಿರಲಿಲ್ಲ. ಯಾವ ದೀಪಕ್ಕೂ ಕೈಹಾಕಲು ಅವಳಿಗೆ ಮನಸ್ಸು ಬರಲಿಲ್ಲ. ಹಬ್ಬದ ವಾತಾವರಣ ಅವಳ ದುಃಖವನ್ನು ಮತ್ತಷ್ಟು ಹೆಚ್ಚಿಸಿತು, ತನ್ನವರು ಇಲ್ಲದ ಶೂನ್ಯತೆ ಕಾಡಿತು. ಅವಳು ದೀಪಗಳನ್ನು ಆರಿಸಿಕೊಂಡು ತನ್ನ ವಾರ್ಡ್‌ನ ಮೌನದಲ್ಲಿ ಕುಳಿತಳು. ಆ ದಿನ ಸಂಜೆ, ದೀಪಾವಳಿಯ ಪಟಾಕಿಗಳ ಸದ್ದು ದೂರದಿಂದ ಕೇಳಿಸುತ್ತಿದ್ದವು. ನಬೀಲ್‌ನ ಉಸಿರಾಟ ತೀವ್ರವಾಗಿ ಕಡಿಮೆಯಾಯಿತು. ತಕ್ಷಣ ಆಕ್ಸಿಜನ್ ಯುನಿಟ್ ಇರುವ ಐಸಿಯುಗೆ ಸೇರಿಸಲಾಯಿತು. ಎಲ್ಲಾ ವೈದ್ಯರು, ನರ್ಸ್ ಗಳಿಗೂ ಅದು ಶಾಂತಿಯ, ಭಯದ ನಡುವಿನ ಕ್ಷಣವಾಗಿತ್ತು. ದಿಯಾ, ಅವನ ತಲೆಯ ಬಳಿ ಕುಳಿತಳು.
ಅವನ ಜೀವನದ ಕೊನೆಯ ಕ್ಷಣಗಳು ಸಮೀಪಿಸುತ್ತಿದೆಯೇನೋ ಎಂದು ಇವಳಿಗೆ ಅನಿಸತೊಡಗಿತ್ತು. ಅವನು ತೀರ ಸಣ್ಣ ಧ್ವನಿಯಲ್ಲಿ, ಅಷ್ಟೇ ದುರ್ಬಲವಾಗಿ, ಬಹುಶಃ ತನ್ನ ಕೊನೆಯ ಶಕ್ತಿಗಳನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೇಳಿದ. “ನನ್ನನ್ನು ಕ್ಷಮಿಸಿ... ಅಮ್ಮ.” ಅವನ ಧ್ವನಿ ಒಡೆದು ಹೋದ ಮಗುವಿನ ಅಳುವಿನಂತಿತ್ತು. ಆ ಕರೆಯು ದಿಯಾಳೊಳಗಿನ ಕೋಪದ ಗೋಡೆಯನ್ನು ಒಡೆದುಹಾಕಿ, ಕರುಣೆಯ ಬುಗ್ಗೆಯನ್ನು ಚಿಮ್ಮಿಸಿತು. ಸೇಡಿನ ಜಾಗದಲ್ಲಿ ಕ್ಷಮೆಯ ಭಾವ ಮೂಡಿತು. ದಿಯಾ ಕಣ್ಣೀರು ತಡೆದಳು. ಅವನ ಜೀವ ಅಳಿದು ಹೋಗುತ್ತಿರುವ ಸಂದರ್ಭದಲ್ಲಿಯೂ, ಅವಳೊಳಗಿನ ನರ್ಸ್ ಜಾಗೃತವಾಗಿತ್ತು. ಅವನ ಕೈಯನ್ನು ತನ್ನ ಕೈ ಹತ್ತಿರ ಇಟ್ಟುಕೊಂಡಳು, ಒಂದು ಮಾನವೀಯ ಅನುಕಂಪದಿಂದ. ಅವನ ತಲೆ ನೇವರಿಸಿದಳು. ಒಂದು ತಾಯಿ ಮಗುವನ್ನು ಸಮಾಧಾನಪಡಿಸುವಂತೆ. ಆ ಕ್ಷಣದಲ್ಲಿ ದಿಯಾಳಿಗೆ, ನಬೀಲ್ ಕೇವಲ ಉಗ್ರಗಾಮಿಯಾಗಿರಲಿಲ್ಲ, ಬದಲಿಗೆ ಸಾವಿನ ಅಂಚಿನಲ್ಲಿರುವ, ತನ್ನ ಪಾಪಗಳಿಗೆ ಪಶ್ಚಾತ್ತಾಪಪಡುತ್ತಿರುವ ಒಬ್ಬ ಮನುಷ್ಯನಂತೆ ಕಂಡನು.
ಪ್ರತಿಯೊಬ್ಬ ಕ್ರೂರಿಯೊಳಗೂ ಒಬ್ಬ ಮುಗ್ಧ ಮನುಷ್ಯ ಇರಬಹುದು ಎಂಬ ಸತ್ಯ ದಿಯಾಳಿಗೆ ಮನವರಿಕೆಯಾಯಿತು.
ಆಗಲೇ, ಹಠಾತ್ ಆಗಿ ಅವನು ಏಳಲು ಯತ್ನಿಸಿದ. ಅವನ ಕೈ ಅವಳ ಹೊಟ್ಟೆ ಭಾಗದತ್ತ ಉದ್ದೇಶವಿಲ್ಲದೆ ಚಾಚಿದ. ಏನನ್ನೋ ತೋರಿಸಲು ಪ್ರಯತ್ನಿಸುತ್ತಿದ್ದ. ಬಹುಶಃ ತನ್ನ ಕೊನೆಯ ಕೃತಜ್ಞತೆಯೋ, ತನ್ನ ಪಾಪಗಳಿಗಾಗಿ ಕ್ಷಮೆಯಾಚನೆಯೋ, ಇನ್ನೇನೋ ಹೇಳಲಾಗದ ಅಸ್ಪಷ್ಟ ಭಾವನೆಯೋ. ಅವನ ಕಣ್ಣುಗಳಲ್ಲಿ ಕೃತಜ್ಞತೆ ಮತ್ತು ನೆಮ್ಮದಿ ಮೂಡಿದ್ದವು. ತಾಯಿಯ ಮಡಿಲಿನಲ್ಲಿ ಮಗುವು ಕೊನೆಯ ಕ್ಷಣಗಳಿಗಾಗಿ ಹಂಬಲಿಸುವಂತೆ ಹತ್ತಿರವಾದ...ಅವಳ ಕಣ್ಣೂ ಮಂಜಾಗಿದ್ದವು.
“ಢಿಮೀಲ್”... “ ಢಿಮೀಲ್” ಎಂಬ ಶಬ್ದ ಅನತಿ ದೂರದಲ್ಲೇ ಕೇಳಿ ಬಂತು. ಈ ಗುಂಡಿನ ಸದ್ದು ಆಸ್ಪತ್ರೆಯ ಮೌನವನ್ನು ಛಿದ್ರಗೊಳಿಸಿತು. ನಬೀಲ್‌ನ ದೇಹ ನೆಲಕ್ಕೆ ಕುಸಿಯಿತು. ಅವನ ಕಣ್ಣುಗಳಲ್ಲಿ ಕೊನೆಯ ಬಾರಿಗೆ ಮೂಡಿದ ಆಶ್ಚರ್ಯ, ಆ ಅನಿರೀಕ್ಷಿತ ಅಂತ್ಯ. ಅದು ನೋವಿನ ಅಥವಾ ಮುಕ್ತಿಯ ಅಚ್ಚರಿಯೋ ಸ್ಪಷ್ಟವಾಗಿರಲಿಲ್ಲ. ಬೆನ್ನಿನಿಂದ ರಕ್ತ ಚಿಮ್ಮಿತು, ಇಡೀ ನೆಲ ಕೆಂಪಾಯಿತು. ದಿಯಾ ಒಂದು ಕ್ಷಣ ಹೆಪ್ಪುಗಟ್ಟಿ ನಿಂತಳು. ಎದುರಿಗೆ ಇದ್ದ ನಬೀಲ್ ಭೂವಶವಾಗಿದ್ದ...ಅವನ ಹಿಂದೆಯೇ ಇದ್ದ ಒಬ್ಬ ಸೈನ್ಯಾಧಿಕಾರಿ “ ಜೈಹಿಂದ್ ದಿಯಾಜೀ. ಅವನು ನಿಗೆ ಅಪಾಯಕರವಾಗಿ ಹತ್ತಿರದಲ್ಲಿದ್ದ ಅದಕ್ಕೇ ಗುಂಡು ಹಾರಿಸಿದೆ. ನೀವಿನ್ನು ಧೈರ್ಯವಾಗಿರಿ ಜೈಹಿಂದ್” ಎಂದು ಹೊರಟೇ ಹೋದ. ದಿಯಾ ನಕ್ಕಳು, ಒಂದು ಕಹಿಯಾದ, ಹತಾಶೆಯ ನಗು. ಆದರೆ ಕಣ್ಣೀರು ಮಾತ್ರ ತಡೆದುಕೊಳ್ಳಲಾಗಲಿಲ್ಲ.
ಅವನು ತನ್ನ ಕುಟುಂಬವನ್ನು ಕೊಂದವನು ಎಂಬುದು ಸತ್ಯ. ಕೊನೆಗೆ ತನ್ನ ಜೀವವನ್ನುಳಿಸಿಕೊಂಡು, ಮಾನವೀಯತೆಯ ಸ್ಪರ್ಶದಿಂದ ಬದಲಾಗಲು ಪ್ರಯತ್ನಿಸಿದವನು. ಆದರೆ ಕೊನೆಯ ಕ್ಷಣದಲ್ಲಿ ಅವನ ಜೀವ ಉಳಿಸಲು ತಾನು ಏನೂ ಮಾಡಲಾಗಲಿಲ್ಲವಲ್ಲ ಎಂಬ ಅಸಹಾಯಕತೆ ಅವಳನ್ನು ಕಾಡಿತು. ತನ್ನ ಕರ್ತವ್ಯದ ಕೈಗಳು, ಜೀವ ಉಳಿಸುವ ಕೈಗಳು ಏನೂ ಮಾಡಲಾಗದೆ ನಿಂತಿದ್ದವು. ತಾನು ಒಬ್ಬ ವ್ಯಕ್ತಿಯ ಮನಸ್ಸನ್ನಾದರೂ ಬದಲಾಯಿಸಲು ಪ್ರಯತ್ನಿಸಿದೆ, ಮಾನವೀಯತೆಯನ್ನು ಅರಸಿದೆ. ಆದರೆ ಹೊರಗಿನ ಸಮಾಜ ಮಾತ್ರ ಇನ್ನೂ ಬದಲಾಗಿರಲಿಲ್ಲ. ಅದರ ಕ್ರೌರ್ಯ ಮುಂದುವರೆದಿತ್ತು. ಮಾನವೀಯ ಮೌಲ್ಯಗಳು, ಕರುಣೆಯ ಕಲ್ಪನೆಗಳು ಇನ್ನೂ ಗೆಲ್ಲಲು ಕಾಯಬೇಕಿತ್ತು.
ಆ ದೀಪಾವಳಿ ರಾತ್ರಿ, ಆಸ್ಪತ್ರೆಯ ಮುಂಭಾಗದಲ್ಲಿ ಉಳಿದ ದೀಪಗಳ ನಡುವೆ ಒಂದು ಸಣ್ಣ ದೀಪ ಮೌನವಾಗಿ ಹೊಳೆಯುತ್ತಿತ್ತು. ಅದು ಪ್ರಕಾಶಮಾನವಾಗಿ ಬೆಳಗಲಿಲ್ಲ,. ಅದು ಮೌನದ ದೀಪ.
ಅವನಿಗೂ, ಅವಳಿಗೂ, ಸತ್ತವರಿಗೂ, ಬದುಕಿದವರಿಗೂ, ಮತ್ತು ಎಲ್ಲದಕ್ಕಿಂತ ಮುಖ್ಯವಾಗಿ, ಎಂದಿಗೂ ಮರೆಯಾಗಬಾರದ ಮನುಷ್ಯತ್ವಕ್ಕೂ. ಅದು ಆರಿಸಿದ ಕಥೆಯಲ್ಲ, ಅಡಗಿದ ಬದುಕಿನ ಅರ್ಥ, ಮಾನವೀಯತೆಯ ಸಾರ್ವತ್ರಿಕ ಭರವಸೆಯ ಕಿಡಿ. "ಮೂಕತೆಯ ಹಿಂದೆ ಮಾತಿದೆ. ದೀಪವಿಲ್ಲದೇ ಒಳಗಿನ ಬೆಳಕು ಕೂಡ ಹೊತ್ತಿಕೊಳ್ಳಬಹುದು – ಅದು ಮೌನದ ದೀಪ, ಮನುಷ್ಯತ್ವದ ಪ್ರತೀಕ."