ವೇದಿಕೆಯ ಮೇಲೆ ಭಾವುಕರಾಗಿ ಕಣ್ಣೀರು ಹಾಕಿದ್ರು ದೀಪಿಕಾ … ಯಾಕೆ ಗೊತ್ತಾ?

Deepika Padukone 2
Published on

ಮುಂಬೈ: ಶಾರುಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರವು ಬಾಕ್ಸ್​ ಆಫೀಸ್​ ಲೂಟಿ ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಆರು ದಿನಗಳಲ್ಲಿ ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಕೋಟಿ ಗಳಿಕೆ ಮಾಡಿರುವುದಷ್ಟೇ ಅಲ್ಲ, ಹಲವು ದಾಖಲೆಗಳನ್ನು ಸಹ ಪುಡಿ ಮಾಡಿದೆ. ಇದರಿಂದಾಗಿ ಹಿಂದಿನ ಕೆಲವು ಸಿನಿಮಾಗಳಿಂದ ಸತತ ನಷ್ಟ ಕಂಡಿದ್ದ ಯಶ್​ರಾಜ್​ ಸಂಸ್ಥೆಯು ಒಂದಿಷ್ಟು ಹಣ ನೋಡುವಂತಾಗಿದೆ.

ಬರೀ ಯಶ್​ರಾಜ್​ ಫಿಲಂಸ್​ನವರಷ್ಟೇ ಅಲ್ಲ, ಚಿತ್ರತಂಡದವರು ಸಹ ಈ ಯಶಸ್ಸಿನಿಂದ ಬಹಳ ಖುಷಿಯಾಗಿದೆ. ಅದರಲ್ಲೂ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಅವರಂತೂ ಗೆಲುವಿನಿಂದ ಖುಷಿಯಾಗಿ ವೇದಿಕೆಯ ಮೇಲೆಯೇ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ.

'ಪಠಾಣ್​' ಚಿತ್ರ ಗೆದ್ದಿರುವ ಖುಷಿಯಲ್ಲಿ ಚಿತ್ರತಂಡದವರು ಸೋಮವಾರ ಸಂಜೆ ಮುಂಬೈನಲ್ಲೊಂದು ಸಂತೋಷ ಕೂಟ ಆಯೋಜಿಸಿದೆ. ಈ ಗೋಷ್ಠಿಯಲ್ಲಿ ಮಾತನಾಡುವ ಸಂದರ್ಭದಲ್ಲಿ ದೀಪಿಕಾ ಭಾವುಕರಾಗಿದ್ದಾರೆ.

'ಚಿತ್ರ ಬಿಡುಗಡೆಯಾದ ದಿನ, ಚಿತ್ರಮಂದಿರಕ್ಕೆ ಹೋಗಿ ಜನರ ಮಧ್ಯೆ ಕುಳಿತು ಚಿತ್ರ ನೋಡಬೇಕು ಎಂಬ ಆಸೆ ಇತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಜಗತ್ತಿನಲ್ಲಿ ಸಾಕಷ್ಟು ತಲ್ಲಣಗಳಾಗುತ್ತಿವೆ. ಹೀಗಿರುವಾಗ ಚಿತ್ರವೊಂದು ಜನರನ್ನು ಬೆಸೆಯುತ್ತಿರುವುದು, ಒಟ್ಟಿಗೆ ಕುಳಿತು ನೋಡುವಂತೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ಈ ಸಂಭ್ರಮವನ್ನೆಲ್ಲ ನೋಡುತ್ತಿದ್ದರೆ ಹಬ್ಬ ಮಾಡಿದ ಅನುಭವವಾಗುತ್ತಿದೆ' ಎಂದು ಹೇಳಿದ್ದಾರೆ.

ಇನ್ನು ಚಿತ್ರದ ಯಶಸ್ಸಿನ ಬಗ್ಗೆ ಮತ್ತು ಶಾರುಖ್​ ಖಾನ್ ಅವರೊಂದಿಗಿನ ಕೆಮಿಸ್ಟ್ರಿ ಬಗ್ಗೆ ಮಾತನಾಡಿರುವ ದೀಪಿಕಾ, 'ಶಾರುಖ್​ ಇಲ್ಲದಿದ್ದರೆ, ಅವರು ನನ್ನ ಬಗ್ಗೆ ನಂಬಿಕೆ ಇಡದಿದ್ದರೆ, ನಾನು ಇಷ್ಟು ದೂರ ಬರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅವರು ನನಗೆಷ್ಟು ಉತ್ತೇಜನ ಕೊಟ್ಟಿದ್ದಾರೆ, ವಿಶ್ವಾಸ ತುಂಬಿದ್ದಾರೆ ಎಂಬುದು ಅವರಿಗೇ ಗೊತ್ತಿಲ್ಲ' ಎಂದು ದೀಪಿಕಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net