

ಮುಂಬೈ: ಕೇರಳದ ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿರುವ ಪೈಲಟ್ ಕ್ಯಾಪ್ಟನ್ ದೀಪಕ್ ಸಾಠೆ ಅವರು ಭಾರತೀಯ ವಾಯುಪಡೆ ಯೋಧರಾಗಿದ್ದರು ಎಂಬುದು ಈಗಾಗಲೆ ತಿಳಿದಿರುವ ಸಂಗತಿ. ಆದರೆ, ಅವರು ಚಾಲನೆ ಮಾಡುತ್ತಿದ್ದ ವಾಯುಪಡೆ ವಿಮಾನ ಅಪಘಾತವಾಗಿ ಅವರ ತಲೆಬುರುಡೆ ಸೀಳುಬಿಟ್ಟಿತ್ತು. ಆದರೆ, ಸೋಲೊಪ್ಪಿಕೊಳ್ಳದ ಮನೋಭಾವದ ಅವರು, ಗಾಯಗಳೆಲ್ಲವೂ ಗುಣವಾದ ಬಳಿಕ ಎದ್ದುಬಂದು ತಮ್ಮ ಫಿಟ್ನೆಸ್ ಸಾಬೀತುಪಡಿಸಿ ಮತ್ತೆ ಕಾಕ್ಪಿಟ್ನಲ್ಲಿ ಕುಳಿತಿದ್ದರು.
ಇದು ದೀಪಕ್ ಸಾಠೆ ಅವರ ಸಹೋದರ ಸಂಬಂಧಿ ನೀಲೇಶ್ ಸಾಠೆ ಅವರು ತಿಳಿಸಿರುವ ವಿಷಯ. ನೀಲೇಶ್ ಸಾಠೆ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಆರ್ಥಿಕ ಸಲಹೆಗಾರರಾಗಿದ್ದಾರೆ. ಕೋಳಿಕ್ಕೋಡ್ ವಿಮಾನ ದುರಂತದಲ್ಲಿ ಮೃತಪಟ್ಟ ದೀಪಕ್ ಸಾಠೆ ಅವರಿಗೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಾ ಈ ವಿಷಯ ತಿಳಿಸಿದ್ದಾರೆ.
90ರ ದಶಕದ ಆರಂಭದಲ್ಲಿ ದೀಪಕ್ ಸಾಠೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರಿದ್ದ ವಿಮಾನ ಅಪಘಾತಕ್ಕೀಡಾಗಿ ಅವರ ತಲೆಬುರುಡೆ ಸೀಳುಬಿಟ್ಟಿತ್ತು. ಅವರ ಸ್ಥಿತಿಯನ್ನು ಕಂಡು ಅವರು ಮತ್ತೊಮ್ಮೆ ಕಾಕ್ಪಿಟ್ನಲ್ಲಿ ಕೂರುವ ಸಾಧ್ಯತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಗಟ್ಟಿಯಾದ ಆತ್ಮಬಲ ಮತ್ತು ವಿಮಾನ ಚಾಲನೆ ಮಾಡುವ ಕೆಲಸದ ಮೇಲಿನ ಪ್ರೀತಿಯಿಂದಾಗಿ ಅವರು ಎದ್ದುಬಂದಿದ್ದರು. ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿ ಮತ್ತೊಮ್ಮೆ ಕಾಕ್ಪಿಟ್ನಲ್ಲಿ ಕುಳಿತಿದ್ದರು. ಅದನ್ನು ಕಂಡವರು ಇದೊಂದು ಚಮತ್ಕಾವೇ ಸರಿ ಎಂದು ಉದ್ಗರಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅರೆಕ್ಷಣದಲ್ಲಿ ನಡೆದ ದುರಂತ ನರಕವನ್ನೇ ಸೃಷ್ಟಿಸಿತು..
ದೀಪಕ್ ಸಾಠೆ, ನನ್ನ ಸಹೋದರ ಸಂಬಂಧಿ ಎನ್ನುವುದಕ್ಕಿಂತಲೂ ಹೆಚ್ಚಿನದಾಗಿ ನನಗೆ ಅವರು ಆಪ್ತಸ್ನೇಹಿತರಾಗಿದ್ದರು. ಇಂಥವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ನಂಬಲೇ ಆಗುತ್ತಿಲ್ಲ. ವಂದೇ ಭಾರತ್ ಮಿಷನ್ನಡಿ ದುಬೈನಲ್ಲಿ ಸಿಲುಕಿದ್ದ ಭಾರತೀಯರನ್ನು ತವರಿಗೆ ಕರೆತರುವ ಕೆಲಸದಲ್ಲಿ ತೊಡಗಿದ್ದರು. ದುರದೃಷ್ಟವಶಾತ್ ಅವರು ಚಾಲನೆ ಮಾಡುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಶುಕ್ರವಾರ ರಾತ್ರಿ ಕೋಳಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಜಾರಿ ಪ್ರಪಾತಕ್ಕೆ ಬಿದ್ದಿದೆ ಎಂದು ಹೇಳಿದ್ದಾರೆ.
ದೀಪಕ್ ಅವರು ತುಂಬಾ ಅನುಭವಿ ಪೈಲಟ್ ಆಗಿದ್ದರು. 36 ವರ್ಷಗಳ ವಿಮಾನ ಚಾಲನೆಯ ಅನುಭವ ಅವರಿಗಿತ್ತು. ಎನ್ಡಿಎನ 58ನೇ ಕೋರ್ಸ್ನ ಟಾಪರ್ ಆಗಿ, ಸ್ವಾರ್ಡ್ ಆಫ್ ಹಾನರ್ ಪಡೆದುಕೊಂಡಿದ್ದರು. 21 ವರ್ಷ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ, 2005ರಲ್ಲಿ ಕಮರ್ಷಿಯಲ್ ಪೈಲಟ್ ಆಗಿ ಏರ್ ಇಂಡಿಯಾ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು ಎಂದು ನೆನಪಿಸಿಕೊಂಡಿದ್ದಾರೆ.