

ಶಿರಾಳಕೊಪ್ಪ: ರಾಜ್ಯದಲ್ಲೇ ಮಾದರಿ ಎನಿಸುವ ಶೈಕ್ಷಣಿಕ ಸವಲತ್ತು ಶಿಕಾರಿಪುರದಲ್ಲಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದರ ಶ್ರಮದಿಂದ ಕಾಲೇಜು 6 ಕೋಟಿ ರೂ. ಅನುದಾನದಲ್ಲಿ ಅವೃದ್ಧಿ ಹೊಂದಿದೆ. ಇದನ್ನು ಉಳಿಸಿ ಬೆಳೆಸಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಶಿವಶರಣೆ ಅಕ್ಕಮಹಾದೇವಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಲ್ಯಾಪ್‌ಟಾಪ್ ವಿತರಣೆ, ವಿದ್ಯಾರ್ಥಿ ಸಂಘ, ಎನ್‌ಎಸ್‌ಎಸ್ ಮತ್ತು ಯುವ ರೆಡ್‌ಕ್ರಾಸ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಯ ಎಂಬುದು ಜೀವನದ ಅಮೂಲ್ಯ ವಸ್ತು. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನಾನು ಶಾಸಕ ಎನ್ನುವುದಕ್ಕಿಂದ ಯಡಿಯೂರಪ್ಪ ಅವರ ಮಗ ಎನಿಸಿಕೊಳ್ಳಲು ಹೆಮ್ಮೆ. ಏಕೆಂದರೆ ಅವರು ಸಮಯ ಪರಿಪಾಲನೆಯಲ್ಲಿ ನನಗೆ ಮಾದರಿ. ಅವರು ಎಲ್ಲಿಯೇ ಹೋದರೂ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಇರುತಿದ್ದರು. ಶೈಕ್ಷಣಿಕ ಸಮಯವನ್ನು ಓದಿಗಾಗಿ ಮೀಸಲಿಡಿ. ನೀಡಿರುವ ಲ್ಯಾಪ್‌ಟಾಪ್ ಅನ್ನು ಸರಿಯಾಗಿ ಬಳಸಿಕೊಳ್ಳಿ. ಜಾಲತಾಣ ಎಂಬುದು ನಮಗೆ ಸ್ನೇಹಿತ ಮತ್ತು ಶತ್ರು ಎರಡೂ ಹೌದು. ಹಾಗಾಗಿ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಶಿಕಾರಿಪುರದಲ್ಲಿ ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಆದ್ದರಿಂದ ಇಂಗ್ಲಿಷ್‌ನಲ್ಲಿ ಸಂವಹನ ಕೌಶಲ ಅಭಿವೃದ್ಧಿಪಡಿಸಿಕೊಳ್ಳಿ. ನಿಮ್ಮ ಯಶಸ್ಸು ನೋಡಿ ಸಂತಸ ಪಡುವವರು ತಂದೆ-ತಾಯಿ, ಶಿಕ್ಷಕರು ಮಾತ್ರ ಎಂಬುದನ್ನು ನೆನಪಿಡಿ ಎಂದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್, ಕೆಎಸ್‌ಡಿಎಲ್ ಮಾಜಿ ನಿರ್ದೇಶಕಿ ನಿವೇದಿತಾ, ಪ್ರಮುಖರಾದ ಅಗಡಿ ಅಶೋಕ್, ಶಿವಾನಂದ್, ತಡಗಣಿ ಮಂಜುನಾಥ್, ತಾಲೂಕು ಬಿಸಿಎಂ ಅಧಿಕಾರಿ ಉಮೇಶ್, ಲೋಕೇಶ್, ಪ್ರಾಚಾರ್ಯ ಡಿ.ಎಸ್.ರವಿಶಂಕರ್, ಕುಲಸಚಿವೆ ನಾಗರತ್ನ, ಕ್ರೀಡಾ ಕಾರ್ಯದರ್ಶಿ ಲೋಹಿತ್ ಬಣಕಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಜಯಪ್ಪ ಇತರರಿದ್ದರು.