

ಶಿವಾನಂದ ತಗಡೂರು, ಬೆಂಗಳೂರು
ಮಳೆ ಕೈಕೊಟ್ಟಿದ್ದರಿಂದ ಜಲ ವಿದ್ಯುತ್ ಉತ್ಪಾದನೆಯಲ್ಲಿ ಇಳಿಕೆಯಾಗಿದ್ದು, ವಾರ್ಷಿಕ 3 ಸಾವಿರ ದಶಲಕ್ಷ ಯೂನಿಟ್ ವಿದ್ಯುತ್ ಕೊರತೆ ಬಾಧಿಸುತ್ತಿದೆ. ಕಳೆದ ವರ್ಷ 12 ಸಾವಿರ ಮೆಗಾವಾಟ್ ವಿದ್ಯುತ್ ಬೇಡಿಕೆಯೇ ಗರಿಷ್ಠವಾಗಿತ್ತು. ಆದರೆ, ಈ ವರ್ಷ ಜುಲೈನಿಂದ ಡಿಸೆಂಬರ್ ತನಕ ಸರಾಸರಿ ವಿದ್ಯುತ್ ಬೇಡಿಕೆ 16 ಸಾವಿರ ಮೆ.ವಾ. ದಾಟಿರುವುದು ಸಮಸ್ಯೆಗೆ ಮೂಲ ಕಾರಣ. ಪ್ರತಿವರ್ಷ ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ ಬರುತ್ತಿತ್ತು. ಆದರೆ ಈ ವರ್ಷ ಮಳೆಗಾಲದಲ್ಲೇ ವಿದ್ಯುತ್ ಬೇಡಿಕೆ ಗರಿಷ್ಠ ಮಟ್ಟ ದಾಟಿತ್ತು.
ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ತೀವ್ರವಾಗಿ ಕುಸಿದಿರುವುದರಿಂದ ವಿದ್ಯುತ್ ಬೇಡಿಕೆ ನಿಭಾಯಿಸಲು ಇಂಧನ ಇಲಾಖೆ ಹರಸಾಹಸ ಮಾಡುತ್ತಿದೆ. ಬೇಡಿಕೆಯಲ್ಲಿ ಸರಾಸರಿ 2 ರಿಂದ 4 ಸಾವಿರ ಮೆ.ವಾ. ಕೊರತೆ ಎದುರಾಗಿದ್ದು, ಪವರ್ ಕಟ್ ಅನಿವಾರ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ನಿತ್ಯವೂ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿದೆ. ತ್ರೀಫೇಸ್ ಬದಲಿಗೆ ಸಿಂಗಲ್ ಫೇಸ್ ವಿದ್ಯುತ್ ನೀಡಲು ಇಂದನ ಇಲಾಖೆ ಆದ್ಯತೆ ನೀಡಿದೆ.
ಈ ಬಾರಿ ಬಹುತೇಕ ಎಲ್ಲಾ ಜಲಾಶಯಗಳು ಶೇ. 50ರಷ್ಟು ತುಂಬಲಿಲ್ಲ. ಇದು ಬಹುದೊಡ್ಡ ಸಮಸ್ಯೆಯಾಗಿದ್ದು, ಈ ಕೊರತೆ ನಿಭಾಯಿಸುವುದು ಸವಾಲಾಗಿದೆ. ಬಳ್ಳಾರಿ, ರಾಯಚೂರು ಶಾಖೋತ್ಪನ್ನ ಘಟಕಗಳು ನಿರೀಕ್ಷೆಯಷ್ಟು ವಿದ್ಯುತ್ ಉತ್ಪಾದನೆ ಮಾಡಲು ಕಲ್ಲಿದ್ದಲು ಸಮಸ್ಯೆ ಬಾಧಿಸುತ್ತಲೇ ಇದೆ. ಹೆಚ್ಚಿನ ಪ್ರಮಾಣ ದಲ್ಲಿ ಕಲ್ಲಿದ್ದಲು ಪಡೆಯಲು ಕೇಂದ್ರದ ಅನುಮತಿ ಸಿಕ್ಕಿಲ್ಲ. ಇರುವ ಕಲ್ಲಿದ್ದಲು ಸರಬರಾಜಿನಲ್ಲಿಯೇ ಪರಿಸ್ಥಿತಿ ನಿಭಾಯಿಸಬೇಕಾದ ಅನಿವಾರ್ಯತೆ ಇದೆ.
ಸರ್ಕಾರದ ಸಾಹಸ: ವಿದ್ಯುತ್ ಖರೀದಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಉತ್ತರ ಪ್ರದೇಶದಿಂದ ಪ್ರತಿನಿತ್ಯ ಸ್ವಾಪಿಂಗ್ ಮೂಲಕ 300 ರಿಂದ 600 ಮೆವಾ ವಿದ್ಯುತ್ ಪಡೆಯಲಾಗುತ್ತಿದೆ. 1250 ಮೆವಾ ವಿದ್ಯುತ್ ಅನ್ನು ಆರ್ಟಿಸಿ ಆಧಾರದ ಮೇಲೆ, 250 ಮೆವಾ ವಿದ್ಯುತ್ ಅನ್ನು ಆರ್ಟಿಎಂ ಆಧಾರದ ಮೇಲೆ ಖರೀದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಎಸ್ಕಾಂಗಳ ಎಂಡಿಗಳ ಸಮನ್ವಯದೊಂದಿಗೆ ಪ್ರತಿ ಜಿಲ್ಲೆಯಲ್ಲಿ ವಿದ್ಯುತ್ ಸರಬರಾಜನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೇಣಿಯ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.
-ಗೌರವ್ ಗುಪ್ತ,ಐಎಎಸ್, ಅಪರ ಮುಖ್ಯ ಕಾರ್ಯದರ್ಶಿ, ಇಂಧನ ಇಲಾಖೆ