ಜಾನುವಾರು ಸಂಖ್ಯೆ ಇಳಿಕೆ, ಹಾಲು ಉತ್ಪಾದನೆ ಏರಿಕೆ!

ವಿಜಯವಾಣಿ-32
Published on

ಹೈನುಗಾರಿಕೆ ಮೇಲೆ ಕೈಗಾರಿಕೀಕರಣ ಪ್ರಭಾವ | ಬೆಲೆ ಹೆಚ್ಚಳದಿಂದ ಹಸು ಸಾಕುವುದನ್ನೇ ಬಿಡುತ್ತಿದ್ದಾರೆ ರೈತರು

ಶಿವರಾಜ.ಎಂ, ಬೆಂಗಳೂರು ಗ್ರಾಮಾಂತರ: ಕೃಷಿ ಪ್ರಧಾನವಾದ ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷದ ಅವಧಿಯಲ್ಲಿ ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಆಘಾತಕಾರಿ ಅಂಶ ಹೊರಬಿದ್ದಿರುವ ನಡುವೆಯೇ ಶೇ.3 ಹಾಲಿನ ಉತ್ಪಾದನೆ ಹೆಚ್ಚಿರುವ ಸಂತಸದ ಸುದ್ದಿಯೂ ಕೇಳಿಬರುತ್ತಿದೆ. ಹೌದು! ಇತ್ತೀಚಿಗೆ ದೇವನಹಳ್ಳಿ ತಾಲೂಕು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಇಂಥಹದ್ದೊಂದು ವಿಷಯ ಪ್ರಸ್ತಾಪವಾಗಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.

ರಾಗಿ ಪ್ರಧಾನವಾಗಿರುವ ಜಿಲ್ಲೆಯಲ್ಲಿ ದಶಕಗಳಿಂದ ಹೈನುಗಾರಿಕೆಯೂ ಮುಂಚೂಣಿಗೆ ಬಂದಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಹೈನೋದ್ಯಮ ನಂಬಿಕೊಂಡಿರುವ ಲಕ್ಷಾಂತರ ರೈತರಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜಾನುವಾರು ಸಾಕಣೆಯಿಂದ ರೈತರು ವಿಮುಕ್ತರಾಗುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಆದರೆ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಸರಾಸರಿ ಲೆಕ್ಕದಲ್ಲಿ ಶೇ.3ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಹಾಲು ಡೇರಿ ಸೇರುತ್ತಿದೆ ಎಂಬ ಅಂಶ ಅಚ್ಚರಿಯಾದರೂ ಇದಕ್ಕೆ ಅಧಿಕಾರಿಗಳು ಸಮರ್ಪಕ ಕಾರಣ ನೀಡಿದ್ದಾರೆ.

ಕೈಗಾರಿಕೀಕರಣ ಎಫೆಕ್ಟ್: ನೆಲಮಂಗಲ ತಾಲೂಕು ವ್ಯಾಪ್ತಿಯ ದಾಬಸ್​ಪೇಟೆ, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ, ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿ ಹಾಗೂ ಹೊಸಕೋಟೆಯ ಕೈಗಾರಿಕಾ ಪ್ರದೇಶಗಳು ದಶಕಗಳಿಂದೀಚಿಗೆ ಸಾಕಷ್ಟು ವಿಸ್ತರಣೆಯಾಗಿದೆ, ಕೆಐಎಡಿಬಿ ಕೈಗಾರಿಕಾ ವಲಯಕ್ಕಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಇದರಿಂದ ಕೃಷಿ ಜಮೀನುಗಳು ಮಾಯವಾಗುತ್ತಿದ್ದು, ಇವುಗಳನ್ನು ಕೈಗಾರಿಕೆಗಳು ಆವರಿಸಿಕೊಳ್ಳುತ್ತಿವೆ. ಇದರಿಂದ ಹೈನುಗಾರಿಕೆಗೆ ದೊಡ್ಡಪೆಟ್ಟು ಬೀಳುವಂತಾಗಿದೆ, ಇದರ ಜತೆಗೆ ರಾಸುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳು, ಪಶು ಆಹಾರ ದರ ಏರಿಕೆ, ಉದ್ಯೋಗ ಅರಸಿ ಪಟ್ಟಣಗಳತ್ತ ಗುಳೆ ಹೊರಟಿರುವುದು ಸೇರಿ ನಾನಾಕಾರಣಗಳಿಂದ ಜಾನುವಾರು ಸಾಕುವವರ ಸಂಖ್ಯೆ ಕ್ಷೀಣಿಸತೊಡಗಿದೆ.

ಈ ಹಿಂದಿನ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ 1,87,646 ಜಾನುವಾರುಗಳ ಅಂಕಿ ಸಂಖ್ಯೆ ಲಭ್ಯವಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಪಶುಪಾಲನಾ ಇಲಾಖೆ ಲಸಿಕಾ ಆಂದೋಲನದಲ್ಲಿ 1,56,330 ರಾಸುಗಳ ಅಂಕಿ ಸಂಖ್ಯೆ ದಾಖಲಾಗಿದೆ. ಇದರ ಆಧಾರದ ಮೇಲೆ ಸುಮಾರು 20 ಸಾವಿರ ಜಾನುವಾರುಗಳ ಸಂಖ್ಯೆ ತಗ್ಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮುಂದಿನ ಸಾಲಿನಲ್ಲಿ ಜಾನುವಾರು ಗಣತಿ ನಡೆಯಲಿದ್ದು ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ನಿಖರವಾಗಿ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಪಶುಪಾಲನಾ ಇಲಾಖೆಯ ಲಸಿಕಾ ಅಭಿಯಾನದಲ್ಲಿ ರಾಸುಗಳ ಸಂಖ್ಯೆ ದಾಖಲಾಗುತ್ತದೆ ಇದರ ಆಧಾರದ ಮೇಲೆ ಸುಮಾರು 20 ಸಾವಿರಷ್ಟು ಜಾನುವಾರುಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಆದರೆ ರಾಸುಗಳ ಸಂಖ್ಯೆಯಲ್ಲಿ ಇಳಿಮುಖವಾದರೂ ಜರ್ಮನ್ ತಳಿಯ ಹಸುಗಳ ಸಾಕಣೆ ಹಾಗೂ ಗುಣಮಟ್ಟದ ಪಶು ಆಹಾರ ಪೂರೈಕೆ ಫಲವಾಗಿ ಹಾಲಿನ ಉತ್ಪಾದನೆಯಲ್ಲಿ ಶೇ.3 ಹೆಚ್ಚಳವಾಗಿರುವುದು ಕಂಡುಬಂದಿದೆ.

| ಡಾ.ಜಗದೀಶ್ ಉಪನಿರ್ದೇಶಕ ಪಶುಪಾಲನಾ ಇಲಾಖೆ ಬೆಂ.ಗ್ರಾಮಾಂತರಶೇ.92 ಹೆಣ್ಣು ಕರುಗಳಿಗೆ ಜನ್ಮ!

ಪಶುಗಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳುತ್ತಿರುವುದು ಜತೆಗೆ ಪೌಷ್ಟಿಕಾಂಶವುಳ್ಳ ಅಪ್​ಡೇಟ್ ಆಗಿರುವ ಆಹಾರ ಪೂರೈಕೆಯಾಗುತ್ತಿರುವುದರಿಂದ ಈ ಹಿಂದಿನ ಹಸುಗಳಿಗೆ ಹೋಲಿಸಿದರೆ ಇತ್ತೀಚಿಗೆ ಹಸುಗಳು ನೀಡುತ್ತಿರುವ ಹಾಲಿನ ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲೂ ಜರ್ಮನ್ ತಳಿಯ ಹಸುಗಳ ಸಾಕಣೆಯಿಂದ ಹೈನುಗಾರರು ಗಣನೀಯ ಪ್ರಮಾಣದಲ್ಲಿ ಹಾಲು ಪಡೆಯಲು ಸಾಧ್ಯವಾಗಿದೆ. ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ತಳಿಗಳು ಶೇ.92 ಹೆಣ್ಣು ಕರುಗಳಿಗೇ ಜನ್ಮ ನೀಡುತ್ತವೆ ಎನ್ನಲಾಗಿದೆ.

ಕೆಎಂಎಫ್ ನೇರವಾಗಿ ಹಾಲು ಖರೀದಿಸುತ್ತಿರುವುದರಿಂದ ಆರ್ಥಿಕವಾಗಿಯೂ ಹೈನುಗಾರರಿಗೆ ಲಾಭದಾಯವಾಗಿದೆ. ಈ ಹಿಂದಿನ ಹಾಲಿನಲ್ಲಿನ ಫ್ಯಾಟ್​ಗೆ ಹೋಲಿಸಿದರೆ ಇತ್ತೀಚಿನ ದಿನಗಳಲ್ಲಿ 4.3 ರಷ್ಟು ಫ್ಯಾಟ್ ಹೆಚ್ಚಿರುವುದು ದಾಖಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೈನುಗಾರಿಕೆಯಲ್ಲಿ ಹೊಸಕೋಟೆ ಮುಂಚೂಣಿಯಲ್ಲಿದೆ. ಇದರೊಂದಿಗೆ ಕೊಳವೆಬಾವಿ ಆಶ್ರಿತ ರೈತರು ಸರ್ಕಾರ ವಿತರಿಸಿದ ಮೇವಿನ ಕಿಟ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಹುಲ್ಲು ಬೆಳೆದಿದ್ದಾರೆ. ಇದರಿಂದಾಗಿಯೂ ಹಾಲಿನ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net