ದೇಶದಲ್ಲಿ ಜನರ ವಲಸೆ ಪ್ರಮಾಣ ಕುಸಿತ

ವಿಜಯವಾಣಿ (5)
Published on

ಆರ್ಥಿಕ ಸದೃಢತೆಯ ಸಂಕೇತ | ಕೇಂದ್ರದಿಂದ ಅಂಕಿ ಅಂಶ ಬಿಡುಗಡೆ

ನವದೆಹಲಿ: ದೇಶದಲ್ಲಿ ಸ್ಥಳೀಯ ವಲಸೆಗಾರರ ಸಂಖ್ಯೆಯು 2011 ಮತ್ತು 2023ರ ನಡುವಿನ ಅವಧಿಯಲ್ಲಿ 40.20 ಕೋಟಿಗೆ ಇಳಿದಿದ್ದು ಇದು ಶೇ. 12ರಷ್ಟು ಕುಸಿತ ಎಂದು ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿ (ಇಎಸಿ- ಪಿಎಂ) ವರದಿ ತಿಳಿಸಿದೆ.

ಇದು ದೇಶಾದ್ಯಂತ ಆರ್ಥಿಕ ಅವಕಾಶಗಳ ಪ್ರಮಾಣ ಹೆಚ್ಚಾಗಿರುವುದರ ದ್ಯೋತಕ ಎಂದು ಅದು ಅಭಿಪ್ರಾಯಪಟ್ಟಿದೆ. 2023ರಲ್ಲಿ ಸ್ಥಳೀಯ ವಲಸೆಗಾರರ ಸಂಖ್ಯೆ 40.20 ಕೋಟಿ ಇದೆ. 2011ರ ಜನಗಣತಿಯಲ್ಲಿರುವ ಸಂಖ್ಯೆಗೆ ಹೋಲಿಸಿದರೆ ಇದು ಶೇ. 11.78ರಷ್ಟು ಕಡಿಮೆ. 2011ರಲ್ಲಿ ವಲಸೆಗಾರರ ಸಂಖ್ಯೆ 45.57 ಕೋಟಿಯಷ್ಟಿತ್ತು ಎಂದು ವರದಿ ತಿಳಿಸಿದೆ. 2011ರ ಜನಗಣತಿಯಲ್ಲಿ ವಲಸೆಗಾರರ ಸಂಖ್ಯೆ ಒಟ್ಟಾರೆ ಜನಸಂಖ್ಯೆಯ ಶೇ. 37.64ರಷ್ಟಿತ್ತು. ಅದು 2023ರಲ್ಲಿ 28.88ಕ್ಕೆ ಇಳಿದಿದೆ.

ವಲಸೆಗಾರರನ್ನು ಆಕರ್ಷಿಸುವ ಟಾಪ್ ಐದು ರಾಜ್ಯಗಳೂ ಬದಲಾಗಿವೆ. ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿವೆ. ಆಂಧ್ರಪ್ರದೇಶ ಮತ್ತು ಬಿಹಾರ ಈ ಪಟ್ಟಿಯಲ್ಲಿ ಕೆಳಗಿಳಿದಿವೆ. ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕಕ್ಕೆ ಬರುವ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ಬರುವ ವಲಸೆಗಾರರ ಪ್ರಮಾಣ ಇಳಿಮುಖವಾಗಿದೆ.

ಏಪ್ರಿಲ್​ನಿಂದ ಜೂನ್​ವರೆಗೆ ಅತಿ ಹೆಚ್ಚಿನ ವಲಸೆ ಇರುತ್ತದೆ. ನವೆಂಬರ್, ಡಿಸೆಂಬರ್​ನಲ್ಲೂ ವಲಸೆಯ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಚಳಿಗಾಲದಲ್ಲಿ ವಲಸೆ ಹೆಚ್ಚಿದ್ದು, ಇದಕ್ಕೆ ಹಬ್ಬ ಮತ್ತು ಮದುವೆ ಸೀಸನ್​ಗಳು ಕಾರಣ ಎನ್ನಲಾಗಿದೆ. ಜನವರಿಯಲ್ಲಿ ವಲಸೆ ಪ್ರಮಾಣ ಅತಿ ಕಡಿಮೆ ದಾಖಲಾಗಿದೆ.

2011ರ ಜನಗಣತಿಯಲ್ಲಿ ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಈ ಐದು ರಾಜ್ಯಗಳಿಂದಲೇ ಒಟ್ಟಾರೆ ವಲಸೆಗಾರರ ಪೈಕಿ ಶೇ. 48ರಷ್ಟು ಜನ ವಲಸೆ ಹೋಗಿರುವುದು ದಾಖಲಾಗಿತ್ತು. ಇದರಲ್ಲಿ ಆಯಾ ರಾಜ್ಯಗಳಲ್ಲೇ ವಲಸೆ ಹೋಗಿರುವವರ ಸಂಖ್ಯೆಯೂ ಸೇರಿತ್ತು. ಅದೇ ರೀತಿ ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳು ಒಳಬರುವ ವಲಸೆಗಾರರ ಪೈಕಿ ಶೇ. 48ರಷ್ಟು ಪಾಲನ್ನು ಹೊಂದಿದ್ದವು.

1991ರಿಂದ 2001ರವರೆಗಿನ ಅವಧಿಯಲ್ಲಿ ಶೇ. 2.7ರಷ್ಟಿದ್ದ ಒಟ್ಟಾರೆ ವಲಸೆಗಾರರ ಸಂಖ್ಯೆ 2001ರಿಂದ 2011ರವರೆಗಿನ ಅವಧಿಯಲ್ಲಿ ಶೇ. 3.7ಕ್ಕೆ ಏರಿತ್ತು.

ಎಲ್ಲಿಂದ ಎಲ್ಲಿಗೆ ವಲಸೆ?

ಮುಂಬೈ, ಬೆಂಗಳೂರು ನಗರ, ಹೌರಾ, ಕೇಂದ್ರ ದಿಲ್ಲಿ, ಹೈದರಾಬಾದ್ ಹೆಚ್ಚಿನ ವಲಸೆಗಾರರನ್ನು ಆಕರ್ಷಿಸುತ್ತಿವೆ. ವಲ್ಸದ್, ಚಿತ್ತೂರ್, ಪಶ್ಚಿಮ ಬರ್ಧಮಾನ್, ಆಗ್ರಾ, ಗುಂಟೂರು, ವಿಲ್ಲುಪುರಂ, ಸಹರ್ಸಾದಿಂದ ವಲಸೆ ಹೋಗುವವರ ಸಂಖ್ಯೆ ಅಧಿಕವಾಗಿದೆ.

ಸಮೀಕ್ಷೆ ಮಾಡಿದ್ದು ಹೇಗೆ?

ಭಾರತೀಯ ರೈಲ್ವೆಯ ರಿಸರ್ವೆಶನ್ ರಹಿತ ಟಿಕೆಟ್ ವ್ಯವಸ್ಥೆ, ಮೊಬೈಲ್ ಫೋನ್ ರೋಮಿಂಗ್ ದತ್ತಾಂಶ, ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಮಾಹಿತಿ ಮುಂತಾದವುಗಳನ್ನು ಈ ಸಮೀಕ್ಷೆಗೆ ಬಳಸಿಕೊಳ್ಳಲಾಗಿದೆ. ಬಹುತೇಕ ವಲಸೆಯು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಕೊಲ್ಕತಾ ಮುಂತಾದ ಮಹಾನಗರಗಳತ್ತ ಕೇಂದ್ರಿತವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net