ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ನಿರ್ಧಾರ; ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಅಂಗೀಕಾರ

wester ghats
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಪಶ್ಚಿಮಘಟ್ಟಗಳ ಅಭಿವೃದ್ಧಿ ಕುರಿತು ಡಾ. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸಚಿವ ಸಂಪುಟ ಸಂಪೂರ್ಣವಾಗಿ ತಿರಸ್ಕರಿಸಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿದೆ.

ಕೇಂದ್ರ ಸರ್ಕಾರವು ಪಶ್ಚಿಮಘಟ್ಟಗಳ ಪ್ರದೇಶದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೊಷಿಸಲು 2024ರ ಜು.31ರಂದು 6ನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳು ಮತ್ತು ಸಲಹೆಗಳು ಇದ್ದಲ್ಲಿ 60 ದಿನಗಳೊಳಗೆ ಸಲ್ಲಿಸಲು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಡಾ. ಕೆ. ಕಸ್ತೂರಿ ರಂಗನ್ ವರದಿಯನ್ವಯ ಪರಿಸರ ಸೂಕ್ಷ್ಮ ಪ್ರದೇಶವನ್ನಾಗಿ 20,668 ಚ.ಕಿ.ಮೀ ಪ್ರದೇಶವನ್ನು ಗುರುತಿಸಿದ್ದು, ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶವು 19,252.70 ಚ.ಕೀ.ಮೀ ಆಗುತ್ತದೆ. ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಅಥವಾ ಪರಿಸರ, ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16,036.72 ಚ.ಕಿಮೀ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಉನ್ನತ ಮಟ್ಟದ ಕಾರ್ಯನಿರತ ತಂಡವು ಕೇವಲ ದೂರಸಂವೇದಿ ದತ್ತಾಂಶದ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಪ್ರದೇಶವನ್ನು ನಿಗದಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದರು.

ಶಾಲೆಗಳಿಗೆ ಇಂಟರ್​ನೆಟ್: 189 ಸರ್ಕಾರಿ ಪ್ರೌಢಶಾಲೆಗಳಲ್ಲಿ ಟೆಕ್ನಾಲಜಿ ಅಸಿಸ್ಟೆಡ್ ಲರ್ನಿಂಗ್ ಪ್ರೋಗ್ರಾಂ ಮಾದರಿಯ ಕಂಪ್ಯೂಟರ್ ಲ್ಯಾಬ್ ಮತ್ತು ಇಂಟರ್​ನೆಟ್ ಸೌಲಭ್ಯಗಳನ್ನು 14.97 ಕೋಟಿ ರೂ. ಮೊತ್ತದಲ್ಲಿ ಟೆಂಡರ್ ಮೂಲಕ ಖರೀದಿಸಿ ಅನುಷ್ಠಾನಗೊಳಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು 4,848 ಸರ್ಕಾರಿ ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ 2,521 ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್​ಗಳಿಗೆ ಉಳಿದ 2,327 ಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್ ಮತ್ತು ಯು.ಪಿ.ಎಸ್. ಇಂಟರ್​ನೆಟ್ ಸೌಲಭ್ಯ ನೀಡಲು ಸಚಿವ ಸಂಪುಟ ಸಭೆ ತೀರ್ವನಿಸಿದೆ.

ಆದರ್ಶ ವಿದ್ಯಾಲಯ ಉನ್ನತೀಕರಣ: ರಾಜ್ಯದಲ್ಲಿನ 74 ಆದರ್ಶ ವಿದ್ಯಾಲಯಗಳನ್ನು ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ 40.79 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಈ 74 ಆದರ್ಶ ವಿದ್ಯಾಲಯಗಳಲ್ಲಿ ಗ್ರಾಮಿಣ ಪ್ರದೇಶದ ಆರ್ಥಿಕವಾಗಿ ದುರ್ಬಲವಾಗಿರುವ ಸಾಮಾಜಿಕ ಹಿಂದುಳಿದ ವಿದ್ಯಾರ್ಥಿಗಳು ಹೆಚ್ಚು ವ್ಯಾಸಂಗ ಮಾಡುತ್ತಿದ್ದಾರೆ. ಆದರ್ಶ ವಿದ್ಯಾಲಯಗಳ ಪ್ರತಿ ಘಟಕಕ್ಕೆ 55.13 ಲಕ್ಷ ರೂ. ವೆಚ್ಚ ಮಾಡಲು ತೀರ್ವನಿಸಲಾಗಿದೆ.

ಬೆಣ್ಣೆಹಳ್ಳ ನೀರಿನ ಸದ್ಬಳಕೆಗೆ -200 ಕೋಟಿ ರೂ. ವೆಚ್ಚ: ರಾಜ್ಯ ವಿಪತ್ತು ಉಪಶಮನ ನಿಧಿ ಅಡಿಯಲ್ಲಿ ಬೆಣ್ಣೆಹಳ್ಳ ಪ್ರವಾಹ ನಿಯಂತ್ರಣ/ ಶಾಶ್ವತ ಪರಿಹಾರ ಹಾಗೂ ಪೋಲಾಗಿ ಹರಿದು ಹೋಗುವ ನೀರಿನ ಸದ್ಬಳಕೆ ಯೋಜನೆಯ 200 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದು ಹಳ್ಳ ಎಂದರೂ ಸಹಿತ 16 ಟಿಎಂಸಿ ನೀರಿದೆ. ಕಪ್ಪು ಮಣ್ಣಿನ ಸಮತಟ್ಟಾದ ಭೂಮಿಯಲ್ಲಿ ನೀರು ಹರಿದು ಹೋಗುತ್ತದೆ. ಈ ನೀರು ನಿಲುಗಡೆ ಮಾಡಲು ಹೋದರೆ 2 ಲಕ್ಷ ಎಕರೆ ಬೆಳೆ ಹಾನಿಗೀಡಾಗುತ್ತದೆ. ಶಿಗ್ಗಾಂವಿ, ಕುಂದಗೋಳ, ನವಲಗುಂದ, ಹುಬ್ಬಳ್ಳಿ, ನಗರಗುಂದ ತಾಲೂಕು ವ್ಯಾಪ್ತಿಯಲ್ಲಿ ಈ ಹಳ್ಳ ಹರಿಯುತ್ತಿದೆ. ಈ ನೀರಿನ ಸದ್ಬಳಕೆಗೆ ಯೋಜನೆ ರೂಪಿಸಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸುವ ತೀರ್ವನವನ್ನು ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದು ಅದಕ್ಕಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇವೆ. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಪದೇಪದೆ ಕರಡು ಅಧಿಸೂಚನೆ ಹೊರಡಿಸುತ್ತಿರುವುದು ಮಲೆನಾಡು, ಕರಾವಳಿ ಜನರ ನಿದ್ದೆಗೇಡಿಸಿದೆ. ಕಳೆದ ಬಾರಿ ಕೇಂದ್ರ ಪರಿಸರ ಇಲಾಖೆ ಕರೆದ ಸಭೆಗೆ ಈ ಭಾಗದ ಯಾವ ಸಂಸದರು ಭಾಗವಹಿಸದೆ ಇರುವುದು ವಿಪರ್ಯಾಸ. ಮಲೆನಾಡು, ಕರಾವಳಿ ಭಾಗಗಳಲ್ಲಿ ತಂತಮ್ಮ ಲೋಕಸಭಾ ಕ್ಷೇತ್ರದ ಕಾಳಜಿ ಇಲ್ಲದ ಸಂಸದರನ್ನು ಹಲವು ವರ್ಷಗಳಿಂದ ಆಯ್ಕೆ ಮಾಡುತ್ತಿರುವ ಪರಿಣಾಮ ನಮ್ಮನ್ನೆಲ್ಲ ಸಂಕಷ್ಟಕ್ಕೆ ದೂಡುತ್ತಿದ್ದಾರೆ. | ಅನಿಲ್ ಹೊಸಕೊಪ್ಪ ರಾಜ್ಯ ಸಂಚಾಲಕ, ಮಲೆನಾಡು ಕರಾವಳಿ ಜನಪರ ಒಕ್ಕೂಟ

ಮುಖ್ಯಾಂಶಗಳು

1. ರಾಜ್ಯ ವಿಧಾನ ಪರಿಷತ್ತಿಗೆ ರಾಜ್ಯಪಾಲರಿಂದ ಇಬ್ಬರು ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವ ಬಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕಾರ.

2. ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ರಾಣೇಬೆನ್ನೂರು ತಹಸೀಲ್ದಾರ್ ಆಗಿದ್ದ ರಾಮಮೂರ್ತಿ ವಿರುದ್ಧದ ಇಲಾಖಾ ವಿಚಾರಣೆಯನ್ನು ಕೈಬಿಡಲು ನಿರ್ಣಯ.

3. ಸಚಿವಾಲಯದ ಸರ್ಕಾರದ ವಿಶೇಷ ಕಾರ್ಯದರ್ಶಿ ಚಂದ್ರಶೇಖರ್ ವಿರುದ್ಧ ಉಪ ಲೋಕಾಯುಕ್ತರು ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(3)ರಡಿ ಇಲಾಖಾ ವಿಚಾರಣೆ ವಹಿಸಲು ಮಾಡಿರುವ ಶಿಫಾರಸು ಕೈಬಿಡಲು ತೀರ್ವನ.

4. ದಕ್ಷಿಣ ಕನ್ನಡ ಜಿಲ್ಲೆಯ ಹ್ಯಾಟ್-ಹಿಲ್​ನಲ್ಲಿ ನಿರ್ವಿುಸಿರುವ ನ್ಯಾಯಾಂಗ ಅಧಿಕಾರಿಗಳ ವಸತಿನಿಲಯ ಕಟ್ಟಡಗಳ ನಿರ್ವಣದ 11.70 ಕೋಟಿ ರೂ. ಪರಿಷ್ಕೃತ ಅಂದಾಜಿಗೆ ಒಪ್ಪಿಗೆ. ಅನುಮೋದಿತ ಅಂದಾಜಿಗಿಂತ ರೂ.1.72 ಕೋಟಿ ವೆಚ್ಚವನ್ನು ಹೆಚ್ಚುವರಿಯಾಗಿ ಸೇರಿಸಲು ಪರಿಷ್ಕರಣೆ.

5. ಡಿಯೋಸಿಸ್ ಎಜುಕೇಶನ್ ಸೊಸೈಟಿ ಕಾರವಾರ ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಸ.ನಂ.53ರಲ್ಲಿ ಫ್ಲಾಟ್ ನಂಬರ್ 210, 211, 212 ರಲ್ಲಿನ 5 ಎಕರೆ 12 ಗುಂಟೆ 09 ಆಣೆ ಜಮೀನನ್ನು ಕಾಯಂ ಆಗಿ ಮಂಜೂರು ಮಾಡುವವರೆಗೆ ಮುಂದುವರೆಸಲು ಜಮೀನಿನ ಪ್ರಚಲಿತ ಮೌಲ್ಯದ ಶೇ.10 ಇನ್ನಿತರ ಶಾಸನಬದ್ಧ ಶುಲ್ಕ ವಿಧಿಸಿ ಮಂಜೂರು ಮಾಡಲು ನಿರ್ಣಯ.

6. ಪಶು ಸಂಗೋಪನೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪಶುವೈದ್ಯ ಸಂಸ್ಥೆ ಜಾನುವಾರು ಚಿಕಿತ್ಸೆಗೆ ಅವಶ್ಯ ಔಷಧ ರಾಸಾಯನಿಕ ಸರಬರಾಜು ಮಾಡಲು 72.29 ಕೋಟಿ ರೂ. ಟೆಂಡರ್ ಆಹ್ವಾನಿಸಲು ಆಡಳಿತಾತ್ಮಕ ಒಪ್ಪಿಗೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net