ವಲಸೆ ಕಾರ್ಮಿಕರ ಮೇಲೆ ನಿಗಾವಹಿಸಲು ನಿರ್ಧಾರ: ಸಚಿವ ಸಂತೋಷ ಲಾಡ್ | Special act soon

Labour meeting
Published on

ಬೆಂಗಳೂರು: ಹೊರ ರಾಜ್ಯಗಳಿಂದ ವಲಸೆ ಬರುತ್ತಿರುವ ಕಾರ್ಮಿಕರ ಮೇಲೆ ನಿಗಾವಹಿಸಲು ಎಲ್ಲ ಇಲಾಖೆಗಳ ಸಹಕಾರದೊಂದಿಗೆ ವಿಶೇಷ ಕಾಯ್ದೆ ತರಲು ತೀರ್ಮಾನಿಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಹಿತಿ ನೀಡಿದರು.

ವಿಕಾಸಸೌಧದಲ್ಲಿ ಮಾನವ ಸಂಪನ್ಮೂಲ, ಉದ್ಯೋಗದಾತರು, ಕಾರ್ಮಿಕರು, ಕಾರ್ಮಿಕ ಸಂಘಟನೆಗಳು, ಕೈಗಾರಿಕೆಗಳ ಉನ್ನತ ಅಧಿಕಾರಿಗಳು ಮತ್ತು ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ಮಂಗಳವಾರ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕಾರ್ಮಿಕರ ಉದ್ಯೋಗ, ಯೋಗಕ್ಷೇಮ, ಕನಿಷ್ಠ ಕೂಲಿ ಜತೆಗೆ ಸುರಕ್ಷತಾ ಕ್ರಮಗಳಿಗೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಹೊರ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರನ್ನು ಮೇಲೆ ನಿಗಾವಹಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಒಂದೇ ಇಲಾಖೆ ವ್ಯಾಪ್ತಿಯಡಿ ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ನಿಯಂತ್ರಣ ಸಾಧ್ಯವಿಲ್ಲ. ಎಲ್ಲ ಇಲಾಖೆಗಳ ಸಮನ್ವಯ, ಸಹಕಾರ ಅಗತ್ಯವಿದೆ. ವಲಸೆ ಕಾರ್ಮಿಕರ ಮೇಲೆ ನಿಗಾವಹಿಸಲು ಆರಂಭಿಕವಾಗಿ ಸೂಚನೆ ನೀಡಲಾಗಿದೆ ಎಂದರು.

ಪೂರ್ವಾಪರ ಮಾಹಿತಿ ಸಂಗ್ರಹಕ್ಕೆ ಸೂಚನೆ

ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರ ಕುರಿತು ಮಾಹಿತಿ ಪಡೆಯಲು ಸಭೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಿಳಿಸಲಾಗಿದೆ. ನೋಂದಾಯಿತ ಮತ್ತು ನೋಂದಾಯಿತವಲ್ಲ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಇಲಾಖೆ ತೀರ್ಮಾನಿಸಿದೆ ಎಂದು ಸಂತೋಷ ಲಾಡ್ ಹೇಳಿದರು.

ಸೂಕ್ತ ಕಾನೂನಿನ ಮೂಲಕ ಹೊರ ರಾಜ್ಯದ ಕಾರ್ಮಿಕರ ಮೇಲೆ ನಿಗಾವಹಿಸಲು ನಿರ್ಧರಿಸಿದ್ದು, ಈ ಸಂಬಂಧ ವಿವಿಧ ಇಲಾಖೆಗಳ ಜತೆಗೂಡಿ ಕಾಯ್ದೆ ಕರಡು ಪ್ರಸ್ತಾವನೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

ಕೆಲಸ ಮಾಡುತ್ತಿರುವ ಕಾರ್ಮಿಕರ ಪೂರ್ವಾಪರಗಳನ್ನು ತಕ್ಷಣವೇ ತಿಳಿದುಕೊಳ್ಳಬೇಕು. ಅವರ ವಿವರಗಳನ್ನು ದಾಖಲಿಸಿಕೊಂಡು ಜತನ ಮಾಡಲು ಕೈಗಾರಿಕೆಗಳು, ಉದ್ಯೋಗದಾತರ, ಮಾನವ ಸಂಪನ್ಮೂಲ ವಿಭಾಗದ ಪ್ರತಿನಿಧಿಗಳಿಗೆ ಸಲಹೆ ನೀಡಲಾಗಿದೆ ಎಂದು ಸಂತೋಷ ಲಾಡ್ ಮಾಹಿತಿ ಹಂಚಿಕೊಂಡರು.

ವಲಸೆ ಕಾರ್ಮಿಕರ ಬಗ್ಗೆ ಅಲರ್ಟ್

ಹುಬ್ಬಳ್ಳಿಯ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಹತ್ಯೆ ಪ್ರಕರಣದ ನಂತರ ವಲಸೆ ಕಾರ್ಮಿಕರ ಬಗ್ಗೆ ಕಾರ್ಮಿಕ ಇಲಾಖೆ ಅಲರ್ಟ್ ಆಗಿದೆ. ಸಚಿವ ಸಂತೋಷ ಲಾಡ್ ಸೂಚನೆಯಂತೆ ತ್ವರಿತವಾಗಿ ಜಂಟಿ ಸಭೆ ಕರೆದು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿತು.

ಚರ್ಚೆಯಲ್ಲಿ ಪಾಲ್ಗೊಂಡ ಸಂಘಟನೆಗಳ ಮುಖಂಡರು, ಕೈಗಾರಿಕೆಗಳ ಪ್ರತಿನಿಧಿಗಳು ಕಾರ್ಮಿಕರ ಲಭ್ಯತೆ, ವಲಸೆ ಕಾರ್ಮಿಕರ ಅನಿವಾರ್ಯತೆ, ಪಶ್ಚಿಮಬಂಗಾಳ, ಒಡಿಶಾ, ಮಧ್ಯಪ್ರದೇಶ, ಬಿಹಾರ ಜತೆಗೆ ಈಶಾನ್ಯ ರಾಜ್ಯಗಳಿಂದ ಬರುವ ಕಾರ್ಮಿಕರ ಸಂಖ್ಯೆಯೂ ಹೆಚ್ಚಿರುವುದು ಪ್ರಸ್ತಾಪವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net