

ತಿ.ನರಸೀಪುರ : ಪುರಸಭಾ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಸಾಮಾನ್ಯ ಸಭೆ ಸರ್ವಮತದಿಂದ ತೀರ್ಮಾನಿಸಲಾಯಿತು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಅಧ್ಯಕ್ಷತೆ ನಡೆದ ಸಾಮಾನ್ಯ ಸಭೆಯಲ್ಲಿ ಬೆಳೆಯುತ್ತಿರುವ ಪಟ್ಟಣ ಅಭಿವೃದ್ಧಿಗೊಂಡತೆ ರಸ್ತೆಗಳಲ್ಲಿ ವಾಹನದಟ್ಟಣೆ, ಜನಸಂದಣಿ ಹೆಚ್ಚುತ್ತಿರುವುದರಿಂದ ಅಪಘಾತಗಳು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಂತಹ ಚಟುವಟಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯ 23ವಾರ್ಡ್‌ಗಳಲ್ಲಿಯೂ ಸಿಸಿ ಕ್ಯಾಮರಾಗಳ ಕಣ್ಗಾವಲು ಇಡಲು ತೀರ್ಮಾನಿಸಲಾಯಿತು.
ಪಟ್ಟಣದ ಲಿಂಕ್ ರಸ್ತೆ ಸೇರಿದಂತೆ ಮಾರ್ಕೆಟ್ ರಸ್ತೆ, ಸಾರ್ವಜನಿಕ ಆಸ್ಪತ್ರೆ ರಸ್ತೆ, ಹೊಸ ತಿರುಮಕೂಡಲು ಕಾಲೇಜು ಜೋಡಿ ರಸ್ತೆ, ತಾಲೂಕು ಕಚೇರಿ ರಸ್ತೆ ಹಾಗೂ ಇನ್ನಿತರ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲು, ಅಲ್ಲದೆ 2025-26 ನೇ ಸಾಲಿನ ಎಸ್‌ಎಫ್‌ಸಿ ಯೋಜನೆಯಲ್ಲಿ ಎಂಬಿಬಿಎಸ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲು ನಿರ್ಣಯಿಸಲಾಯಿತು.
ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎನ್.ಸೋಮಣ್ಣ ಮಾತನಾಡಿ, ಪುರಸಭೆ ವತಿಯಿಂದ ಪಟ್ಟಣದ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳನ್ನು ನಿರ್ಮಿಸಬೇಕು. ಕಳೆದ ಸಭೆಗಳಲ್ಲಿ ಚರ್ಚಿಸಿ ತೀರ್ಮಾನಿಸಿದರೂ ಇಲ್ಲಿಯವರೆಗೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಪಟ್ಟಣದಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಹಾಗೂ ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿವೆ. ಇದರ ಬಗ್ಗೆಯೂ ದೂರುಗಳಿರುವ ಹಿನ್ನೆಲೆಯಲ್ಲಿ ಬೀದಿನಾಯಿಗಳನ್ನು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಕ್ರಮ ಕೈಗೊಳಬೇಕು ಎಂದರು.
ವರ್ಷಕ್ಕೆ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಪೆಟ್ರೋಲ್ ಬಿಲ್ 4 ಲಕ್ಷ ರೂ. ಮಾಡಿದ್ದೀರಿ, ನಗರೋತ್ಥಾನ ಯೋಜನೆಯಲ್ಲಿ ಬಳಕೆಯಾಗಬೇಕಿದ್ದ 2 ಕೋಟಿ ರೂ. ಬದಲು 1 ಕೋಟಿ ರೂ. ಖರ್ಚು ಮಾಡಿದ್ದೀರಿ. ಇನ್ನುಳಿದ ಹಣ ಯಾವ ಅಭಿವೃದ್ಧಿ ಕೆಲಸಕ್ಕೆ ಖರ್ಚು ಮಾಡಿದ್ದೀರಿ ಎಂದು ಸದಸ್ಯ ಎಸ್.ಕೆ. ಕಿರಣ್ ಪ್ರಶ್ನಿಸಿದರು. ಇದಕ್ಕೆ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಕೆಲವು ದಿನಗಳ ಹಿಂದೆಯಷ್ಟೇ ತಿ.ನರಸೀಪುರ ಪುರಸಭೆ ಕಚೇರಿ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸದಸ್ಯರು ಕಾಲಾವಕಾಶ ನೀಡಿದರೆ ಮಾಹಿತಿ ನೀಡುತ್ತೇನೆ ಎಂದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಪ್ರಕಾಶ್, ಸದಸ್ಯರಾದ ಮಂಜು(ಬಾದಾಮಿ), ಆರ್.ನಾಗರಾಜು, ಎಲ್.ಮಂಜುನಾಥ್, ಆರ್.ಅರ್ಜುನ್, ಎಸ್.ಮದನ್ ರಾಜ್, ರೂಪಶ್ರೀಪರಮೇಶ್, ರೂಪಾ ಕರಿಯಪ್ಪ, ನಾಗರತ್ನಾ ಮಾದೇಶ್, ಮಹದೇವಮ್ಮ, ಬೇಬಿ ಹೇಮಂತ್ ಕುಮಾರ್, ತೇಜಸ್ವಿನಿ ರಾಜು, ನಾಮ ನಿರ್ದೇಶಿತ ಸದಸ್ಯರಾದ ಗುರುಸ್ವಾಮಿ, ಕೆ.ಗಣೇಶ್, ಆರ್.ಚೇತನ್, ಸಬೀಲ್ ಖಾನ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಕೆ.ಸಿ.ತ್ರಿವೇಣಿ, ವ್ಯವಸ್ಥಾಪಕ ಮಹೇಂದ್ರ, ಅಕೌಂಟೆಂಟ್ ವಿನಯಕುಮಾರ್ ಇದ್ದರು.