

ಸಾಗರ: ಮಲೆನಾಡು ರೈತರ ಭೂಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಡಾ. ಎಚ್.ಗಣಪತಿಯಪ್ಪ ಸ್ಥಾಪಿತ ರೈತ ಸಂಘ, ಮಲೆನಾಡು ರೈತ ಹೋರಾಟ ವೇದಿಕೆ ಮತ್ತಿತರ ಸಂಘಟನೆಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಮಂಗಳವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ಮಲೆನಾಡಿನ ಭೂಹಕ್ಕು ವಂಚಿತರ ಪರ ಹೋರಾಟ ಆರಂಭಿಸಿ ಒಂಬತ್ತು ದಿನಗಳಾಗಿವೆ. ಸರ್ಕಾರ ಮಾತುಕತೆಗೆ ಬರಲು ಈತನಕ ಲಿಖಿತವಾಗಿ ಆಹ್ವಾನ ನೀಡಿಲ್ಲ. ರೈತರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯಬೇಕು. ದೆಹಲಿ ಮಾದರಿಯಲ್ಲಿ ವರ್ಷಗಟ್ಟಲೆ ಚಳವಳಿ ನಡೆಸಲು ನಿರ್ಧರಿಸಲಾಗಿದೆ. ಈ ದಿಸೆಯಲ್ಲಿ ರಾಜ್ಯ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ರೈತ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಮಲೆನಾಡು ರೈತರು ತ್ಯಾಗ ಮಾಡದೆ ಹೋಗಿದ್ದರೆ ರಾಜ್ಯಕ್ಕೆ ವಿದ್ಯುತ್ ಜತೆಗೆ ಹೊಸಪೇಟೆವರೆಗೆ ಕೃಷಿ ಕ್ಷೇತ್ರವೂ ಅಭಿವೃದ್ಧಿ ಆಗುತ್ತಿರಲಿಲ್ಲ. ದೇವರಾಜ ಅರಸು, ಕಾಗೋಡು ತಿಮ್ಮಪ್ಪ ಅವರು ವಿತರಿಸಿದ ಹಕ್ಕುಪತ್ರವನ್ನು ರದ್ದುಮಾಡುವಂತೆ ಹಾಲಿ ಅರಣ್ಯ ಸಚಿವರು ನೋಟಿಸ್ ನೀಡಲು ಸೂಚಿಸಿದ್ದಾರೆ ಎಂದು ದೂರಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಲೆನಾಡು ರೈತರನ್ನು ದರೋಡೆಕೋರರು, ಕಳ್ಳರಂತೆ ನೋಡುತ್ತಿದ್ದಾರೆ. ಮಲೆನಾಡು ರೈತರ ಭೂಹಕ್ಕಿನ ಸಮಸ್ಯೆ ಬಗೆಹರಿಸುವ ತನಕ ಕಾಗೋಡು ಚಳವಳಿ ಮಾದರಿಯಲ್ಲಿ ನಮ್ಮ ಹೋರಾಟ ನಿರಂತರವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ತಾಳ್ಮೆ ಪರೀಕ್ಷಿಸದಿರಲಿ ಎಂದು ಎಚ್ಚರಿಸಿದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ನಾಡಿಗೆ ಬೆಳಕು ನೀಡಲು ಸರ್ವಸ್ವ ಕಳೆದುಕೊಳ್ಳುವ ಜತೆಗೆ ತಮ್ಮ ಸಂಸ್ಕೃತಿಯನ್ನೇ ಕಳೆದುಕೊಂಡಿದ್ದಾರೆ. ಏಳು ದಶಕಗಳಿಂದ ಹಕ್ಕುಪತ್ರ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವುದು ದೊಡ್ಡದಲ್ಲ. ಕಾನೂನು ಬದಲಾವಣೆ ಮಾಡುವ ಇಚ್ಛಾಶಕ್ತಿ ಆಳುವವರಿಗೆ ಇಲ್ಲ. ಈ ಹಿನ್ನೆಲೆಯಲ್ಲಿ ರೈತ ಹೋರಾಟಕ್ಕೆ ನಮ್ಮ ಸಂಘ ಸಂಪೂರ್ಣ ಬೆಂಬಲ ನೀಡುತ್ತಿದೆ. ಅನ್ನದಾತರ ಸಮಸ್ಯೆಯನ್ನು ಕೂಡಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.
ಸುಂದರ ಸಿಂಗ್, ಪರಶುರಾಮ್ ಸಿದ್ದಿಹಳ್ಳಿ, ರಾಘವೇಂದ್ರ ಸಂಪಳ್ಳಿ, ರಾಜೇಶ್ ಬುಕ್ಕಿಬರೆ, ಚಕ್ರಪಾಣಿ, ಇಂದ್ರಕುಮಾರ್, ವೀರಣ್ಣ ಗೌಡ, ಜಿ.ಟಿ.ಸತ್ಯನಾರಾಯಣ, ಗಣೇಶ್ ತುಮರಿ ಇತರರಿದ್ದರು.