

ಬೆಂಗಳೂರು: ವಿದ್ಯುತ್ ಬೇಡಿಕೆ ಹಾಗೂ ಪೂರೈಕೆ ಸರಿದೂಗಿಸಲು ಜಲ, ಸೌರ, ಪವನ ಮೂಲವೊಂದೇ ಸಾಕಾಗುವುದಿಲ್ಲ. ‘ಹಸಿರು ವಿದ್ಯುತ್’ಗೆ ಆದ್ಯತೆ ನೀಡಿದ್ದರೂ ಶಾಖೋತ್ಪನ್ನ ನೆಲೆಯ ವಿದ್ಯುತ್ ಸ್ಥಾವರಗಳ ಪಾಲು ಗಮನಾರ್ಹವಾಗಿದೆ.
ಉದ್ಯಮ-ವಹಿವಾಟು, ವಾಣಿಜ್ಯ ಚಟá-ವಟಿಕೆಗಳಿಗೆ ಸಮಸ್ಯೆಯಾಗಕೂಡದು. ಎಲ್ಲ ವರ್ಗದ ಗ್ರಾಹಕರಿಗೆ ನಿರಂತರ ಪೂರೈಕೆ ದೃಷ್ಟಿಯಿಂದ ಅಗತ್ಯವಿರುವಷ್ಟು ವಿದ್ಯುತ್ ಉತ್ಪಾದನೆ ಅತ್ಯಗತ್ಯ. ಬೇಡಿಕೆಗೆ ಅನುಗುಣವಾಗಿ ಶಾಖೋತ್ಪನ್ನ ನೆಲೆಯ ವಿದ್ಯುತ್ ಉತ್ಪಾದನೆ ಏರಿಕೆಯಾಗಿದೆ. ಮಳೆಗಾಲ ಪೂರ್ವಸಿದ್ಧತೆ ಗಮನದಲ್ಲಿಟ್ಟುಕೊಂಡು ಕಲ್ಲಿದ್ದಲು ದಾಸ್ತಾನಿಗೆ ಗಮನಹರಿಸಲಾಗಿದೆ. ದೇಶೀಯ ಕಲ್ಲಿದ್ದಲು ಜತೆಗೆ ಅಲ್ಪ ಪ್ರಮಾಣ (ಶೇ.8ರಿಂದ 10)ದಲ್ಲಿ ವಿದೇಶಿ ಕಲ್ಲಿದ್ದಲು ಮಿಶ್ರಣ ಮಾಡಿ ಉರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಈ ಮುಂಚೆ ಶೇ.30 ವಿದೇಶಿ ಕಲ್ಲಿದ್ದಲು ಮಿಶ್ರಣ ಅಗತ್ಯವಾಗಬಹುದು ಎಂದು ಅಂದಾಜಿಸಿತ್ತು. ಆದರೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ವಿನ್ಯಾಸದ ಮಾಹಿತಿ ತಿಳಿದು ಶೇ.10ರವರೆಗೆ ಮಿಶ್ರಣಕ್ಕೆ ನಿರ್ದೇಶಿಸಿದೆ. ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಉಷ್ಣ ವಿದ್ಯುತ್ ಘಟಕಗಳ ಬಾಯ್ಲರ್, ಟರ್ಬೆನ್, ಕಲ್ಲಿದ್ದಲು ಮತ್ತು ಹಾರೋಬೂದಿ ನಿರ್ವಹಣಾ ನೆಲೆಗಳು ಶೇ.10ರವರೆಗೆ ವಿದೇಶಿ ಕಲ್ಲಿದ್ದಲು ಬಳಕೆ ನಿಭಾಯಿಸುತ್ತವೆ. 3 ಸ್ಥಾವರ ಪೂರ್ಣ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದರೆ ಪ್ರತಿದಿನ ಒಂದು ಲಕ್ಷ ಟನ್ ಕಲ್ಲಿದ್ದಲು ಬೇಕಾಗಲಿದ್ದು, ಈ ಪೈಕಿ 10,000 ಟನ್ ವಿದೇಶಿ ಕಲ್ಲಿದ್ದಲು ಬಳಕೆಗೆ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಒಂದು ವರ್ಷದಮಟ್ಟಿಗೆ 6.36 ಲಕ್ಷ ಟನ್ ವಿದೇಶಿ ಕಲ್ಲಿದ್ದಲು ಆಮದಿಗೆ ತೀರ್ವನಿಸಿ, ಟೆಂಡರ್ ಕರೆಯಲಾಗಿದೆ.
ವಿದೇಶಿ ಕಲ್ಲಿದ್ದಲಿನಲ್ಲಿ ದಹನಶಕ್ತಿ ಹೆಚ್ಚಿರುವ ಕಾರಣ ಕ್ಯಾಲೊರಿ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಕಲ್ಲಿದ್ದಲು ಕಾರಣಕ್ಕೆ ವಿದ್ಯುತ್ ಕೊರತೆ ತಲೆದೋರದಂತೆ ಮುನ್ನೆಚ್ಚರಿಕೆ ವಹಿಸಿದ್ದು, ಬೇರೆ ದೇಶಗಳಲ್ಲಿ ಕಲ್ಲಿದ್ದಲು ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಇಲಾಖೆ ಮೂಲಗಳು ಸಮರ್ಥಿಸಿಕೊಂಡಿವೆ. ಕೆಪಿಸಿಎಲ್, ಕೆಪಿಟಿಸಿಎಲ್ ಅಥವಾ ಎಸ್ಕಾಂಗಳಿಗೆ ನಷ್ಟದ ಪ್ರಶ್ನೆಯೇ ಉದ್ಭವಿಸದು. ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಲು ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಹಿರಿಯ ಅಧಿಕಾರಿ.
ಆದಾಯ ವರ್ಗಾವಣೆ: ಮುಕ್ತ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಮಾರಾಟಕ್ಕೆ ಅವಕಾಶವಿದೆ. ಈ ಪ್ರಕ್ರಿಯೆಯಲ್ಲಿ ಪ್ರಸರಣವಾಗುವ ವಿದ್ಯುತ್ ಆವರ್ತನಕ್ಕೆ ಹೊಡೆತ ಬಿದ್ದರೆ ದಂಡ ತೆರುವ ಪರಿಸ್ಥಿತಿ ಬರಬಹುದು. ವಿದ್ಯುತ್ ವಿಕ್ರಯವು ಬೇಡಿಕೆ ಜತೆಗೆ ‘ಸಮಯ ನಿರ್ವಹಣೆ’ ನೈಪುಣ್ಯತೆ ಅವಲಂಬಿಸಿದ್ದು, ಸ್ವಹಿತದ ಲಾಬಿ ಹಿಡಿತದಿಂದ ಈ ವ್ಯವಸ್ಥೆಯನ್ನು ಮುಕ್ತಗೊಳಿಸಲಾಗಿದೆ. ನುರಿತ, ಚಾಣಾಕ್ಷ ಹಾಗೂ ಉತ್ಸಾಹಿ ಯುವ ಉದ್ಯೋಗಿಗಳನ್ನು ಗುರುತಿಸಿ ಮಾರ್ಕೆಟಿಂಗ್ ಶಾಖೆ ಸ್ಥಾಪಿಸಿದ್ದು, ಈ ತಂಡ ಪ್ರತಿ ನಿಮಿಷದ ಬೆಳವಣಿಗೆ ಅವಲೋಕಿಸಿ ಪ್ರತಿ ತಾಸಿಗೊಮ್ಮೆ ಆಸಕ್ತ ಕಂಪನಿಗೆ ವಿದ್ಯುತ್ ಮಾರಾಟ ಸಾಮರ್ಥ್ಯವನ್ನು ಸಾಧಿಸಿದೆ. ವಿದ್ಯುತ್ ಮಾರಾಟದಿಂದ ವಿದೇಶಿ ಕಲ್ಲಿದ್ದಲು ಖರೀದಿ ಹೊರೆಯಾಗದು. ಬಂದ ಆದಾಯವನ್ನು ಯೂನಿಟ್ ದರ ಏರಿಕೆ ನಿಯಂತ್ರಿಸುವ ಮೂಲಕ ಗ್ರಾಹಕರಿಗೆ ವರ್ಗಾಯಿಸಲು ಸಾಧ್ಯವಿದೆ ಎಂದು ಅಧಿಕಾರಿ ವಿವರಿಸಿದರು.
1,500 ಕೋಟಿ ಆದಾಯ
ಪ್ರಸಕ್ತ ಆರ್ಥಿಕ ವರ್ಷ (2022-23)ದ ಜೂ.13ರವರೆಗಿನ ಅಂಕಿ-ಅಂಶಗಳ ಪ್ರಕಾರ, ಪ್ರತಿ ಯೂನಿಟ್ಗೆ 7.68 ರೂ.ನಂತೆ ಒಟ್ಟು 1998.77 ದಶಲಕ್ಷ ಯೂನಿಟ್ ವಿದ್ಯುತ್ ವಿಕ್ರಯವಾಗಿದ್ದು, 1,534.30 ಕೋಟಿ ರೂ. ಆದಾಯ ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗಿದೆ. ದೇಶದಲ್ಲಿ ಕಳೆದ ಎರಡು ತಿಂಗಳು ಚಂಡಮಾರುತ, ಉಷ್ಣ ಮಾರುತ, ಕಲ್ಲಿದ್ದಲು ಕೊರತೆ ಎದುರಾಯಿತು. ಅದೇ ಕಾಲಕ್ಕೆ ರಾಜ್ಯದ ಸೌರ, ಪವನ ಮೂಲ ಮತ್ತು ಕೆಪಿಸಿಎಲ್ ಗರಿಷ್ಠ ಪ್ರಮಾಣದ ವಿದ್ಯುತ್ ಉತ್ಪಾದಿಸಿದ್ದರಿಂದ ಅಲ್ಪಾವಧಿಯಲ್ಲಿ ಅತ್ಯಧಿಕ ವಿದ್ಯುತ್ ಮಾರಾಟ ಸಾಧ್ಯವಾಗಿದೆ. ಕಳೆದ ಹಣಕಾಸು ವರ್ಷ (2021-22) ದಲ್ಲಿ ಪ್ರತಿ ಯೂನಿಟ್ಗೆ 4.31 ರೂ.ನಂತೆ ಒಟ್ಟು 6578 ದಶಲಕ್ಷ ಯೂನಿಟ್ ವಿದ್ಯುತ್ ಮಾರಾಟವಾಗಿದ್ದು, 2,836 ಕೋಟಿ ರೂ. ಆದಾಯ ಖಜಾನೆಗೆ ಜಮೆಯಾಗಿದೆ ಎಂದು ಮೂಲಗಳು ತಿಳಿಸಿವೆ.