

ಬೆಂಗಳೂರು: ಮುಂಬರುವ ನಗರ-ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗುವಂತೆ ಸಂದೇಶ ನೀಡಲೆಂದು ದಾವಣಗೆರೆಯಲ್ಲಿ ಶೀಘ್ರವೇ ಬೃಹತ್ ಸಮಾವೇಶ ಆಯೋಜಿಸಿ, ಪಕ್ಷದ ಸಂಘಟನಾ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ಬಿಜೆಪಿ ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಬಿ.ಸಿ.ಪಾಟೀಲ್ ಪ್ರಕಟಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು ಬಿ.ವೈ.ವಿಜಯೇಂದ್ರ ಪರವಾಗಿ ಬಲ ಪ್ರದರ್ಶನದ ವೇದಿಕೆಯಲ್ಲ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಅವರ ಕೈಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ. ನಾಲ್ಕೈದು ಜನರು ಸೇರಿಕೊಂಡಿರುವ ಗುಂಪಿಗೆ ವಿರುದ್ಧವಾದ ಪ್ರತ್ಯೇಕ ಗುಂಪೂ ಅಲ್ಲವೆಂದು ಸ್ಪಷ್ಟಪಡಿಸಿದರು.
ಪಕ್ಷದ ಹಾಲಿ-ಮಾಜಿ ಸಂಸದ-ಶಾಸಕರು, ಪಕ್ಷದ ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷರೂ ಇಲ್ಲದ ನಾಲ್ವರ ಗುಂಪಿಗೆ ಮಹತ್ವ ನೀಡಬೇಕಾದ ಅಗತ್ಯವಿಲ್ಲ. ಈ ಗುಂಪಿನ ಚಟುವಟಿಕೆ ನಿಯಂತ್ರಿಸಲು ವಿಜಯೇಂದ್ರ ವಿಲರಾಗಿದ್ದಾರೆ ಎಂದು ಅರ್ಥೈಸಬೇಕಾಗಿಲ್ಲ ಎಂದರು.
ಪಕ್ಷದ ವರಿಷ್ಠರಿಗೆ ಮಾಹಿತಿ ರವಾನೆಯಾಗಿದ್ದು, ಎಲ್ಲವನ್ನೂ ಗಮನಿಸುತ್ತಿದ್ದಾರೆ.ಕಾದು ನೋಡಿ ಸೂಕ್ತ ಕ್ರಮಕೈಗೊಳ್ಳುವುದು ನಿಶ್ಚಿತ. ಪಕ್ಷದಿಂದ ಹೊರ ಹಾಕಲಿ ಎಂಬ ಕಾರಣಕ್ಕೆ ಗುಂಪು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಬಹಿರಂಗ ಹೇಳಿಕೆ, ಟೀಕೆ-ಟಿಪ್ಪಣಿ ನೀಡುತ್ತಿದ್ದಾರೆ. ಇದಕ್ಕೆ ರಾಜ್ಯಾಧ್ಯಕ್ಷರೊಬ್ಬರೇ ಪ್ರತಿಕ್ರಿಯಿಸಬೇಕು ? ಬೇರೆ ಮುಖಂಡರು ಮಾತನಾಡಬಾರದು ಎಂಬ ನಿರ್ಬಂಧವಿಲ್ಲ.
ರಾಷ್ಟ್ರೀಯ ನಾಯಕರು ನೇಮಿಸಿದ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಟೀಕಿಸಿದರೆ, ಪ್ರಧಾನಿ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ನಡ್ಡಾ, ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷರನ್ನು ಕೂಡ ಅಪಮಾನಿಸಿದ್ದಾರೆ ಎಂದೇ ಅರ್ಥವೆಂದು ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ಡು, ಬಿ.ಸಿ.ಪಾಟೀಲ್ ವಿಶ್ಲೇಷಿಸಿದರು.
ವಕ್ಫ್ ಹೆಸರಿನಲ್ಲಿ ಕೈಗೆತ್ತಿಕೊಂಡಿರುವ ಜಾಗೃತಿ ಅಭಿಯಾನಕ್ಕೆ ಪಕ್ಷ ಅನುಮತಿ ನೀಡಿಲ್ಲ. ರಾಷ್ಟ್ರೀಯ ನಾಯಕರು ಒಪ್ಪಿಗೆ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದು, ಅನುಮತಿ ನೀಡಿದ ರಾಷ್ಟ್ರೀಯ ನಾಯಕರು ಯಾರು ? ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಹಿರಂಗಪಡಿಸಲಿ ಎಂಬ ಸವಾಲು ಹಾಕಿದರು.
ಬಿಜೆಪಿಯನ್ನು ದುರ್ಬಲಗೊಳಿಸಬೇಕು, ಜನರ ಗಮನ ಬೇರೆಡೆ ಸೆಳೆಯಬೇಕೆಂಬ ಉದ್ದೇಶದಿಂದ ಈ ಗುಂಪು ಕಾಂಗ್ರೆಸ್ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಅಭಿಯಾನ ನಡೆಸುತ್ತಿದೆ ಎಂದು ನೇರವಾಗಿ ಆರೋಪಿಸಿದರು.
ಇತ್ತೀಚಿನ ಬೆಳವಣಿಗೆಯಿಂದ ನೊಂದು, ಬೇಸತ್ತ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಿ, ಗೊಂದಲ ನಿವಾರಿಸಲು 30 ಜನರ ತಂಡದೊಂದಿಗೆ 29ರಿಂದ ಸಂಘಟನಾ ಪ್ರವಾಸ ಕೈಗೊಳ್ಳುತ್ತೇವೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ದೇವಸ್ಥಾನಕ್ಕೆ 29ರಂದು ತೆರಳಿ ಪೂಜೆ ಸಲ್ಲಿಸುತ್ತೇವೆ.
ನಂತರ 30ರಂದು ಮೈಸೂರು ಚಾಮುಂಡಿ ಬೆಟ್ಟ, ನಂತರ ಮುರುಡೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದೇವೆ. ಪಕ್ಷದ ರಾಜ್ಯಾಧ್ಯಕ್ಷ ರಚಿಸಿರುವ ಮೂರು ತಂಡಗಳ ಸದಸ್ಯರಾಗಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಕಾರ್ಯಕರ್ತರಿಗೆ ಪಕ್ಷ ನಿಮ್ಮ ಜತೆಗಿದೆ ಎಂದು ಧೈರ್ಯ ತುಂಬಲಿದ್ದೇವೆ ಎಂದು ವಿವರಿಸಿದರು.
ಮುಂದಿನ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ವೈಲ್ಯಗಳ ವಿರುದ್ಧ ಪ್ರಬಲ ಹೋರಾಟ ಸಂಘಟಿಸಲು ಪಕ್ಷದ ರಾಜ್ಯಾಧ್ಯಕ್ಷರ ಜತೆಗಿರುತ್ತೇವೆ. ಅಲ್ಲದೆ ಪಕ್ಷದ ಸಂಘಟನೆ ಗಟ್ಟಿಗೊಳಿಸುತ್ತೇವೆ ಎಂದರು.
ಅಗತ್ಯಬಿದ್ದರೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡಿ, ಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ನಾಲ್ಕೈದು ಜನರ ಗುಂಪಿನ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ಮನವಿ ಮಾಡುತ್ತೇವೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು, ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್ ಹೇಳಿದರು.