ಸಾಮಾಜಿಕ ನ್ಯಾಯ ದೊರಕಿಸಲು ಗಣತಿಗೆ ನಿರ್ಧಾರ

MUNISWAMY
Published on

ಕೋಲಾರ: ಬಹುವರ್ಷಗಳ ಕಾಲ ದೇಶದಲ್ಲಿ ಆಳ್ವಿಕೆ ನಡೆಸಿ ಕಾಂಗ್ರೆಸ್​ ಜನ ಗಣತಿ ನಡೆಸಲು ಮುಂದಾಗಿಲ್ಲ. ಇದೀಗ ಬಿಜೆಪಿ ಸರ್ಕಾರವು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಿಸುವ ಉದ್ದೇಶದಿಂದ ಜನ ಗಣತಿ ಜತೆಗೆ ಜಾತಿ ಗಣತಿ ನಡೆಸಲು ಮುಂದಾಗಿದೆ ಎಂದು ಮಾಜಿ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ವರ್ಷಗಳ ಕಾಲ ಅಧಿಕಾರ ಮಾಡಿದ ಕಾಂಗ್ರೆಸ್​ ಜಾತಿ ಗಣತಿ ಮಾಡದೇ ಅನ್ಯಾಯ ಮಾಡಿದೆ. ದೇಶದಲ್ಲಿರುವ ಸರ್ವ ಧರ್ಮಿಯರಿಗೂ ಸಮಬಾಳು, ಸಮಪಾಲು ನೀಡಲು ಪ್ರಮುಖವಾಗಿ ಕಾರ್ಯಕ್ರಮ ರೂಪಿಸಿದೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳನ್ನು ದೊರಕಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಜನಗಣತಿ ಜತೆಗೆ ಜಾತಿ ಗಣತಿ ನಡೆಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರು ಇದಕ್ಕೆ ನಾನೇ ಹೇಳಿದ್ದು ಎಂದು ಬೊಬ್ಬೆ ಹೊಡೆಯುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಬಿಜೆಪಿಯಿಂದ ಕೋಲಾರದಲ್ಲಿ ಮೇ 7ರಂದು ಹಮ್ಮಿಕೊಂಡಿರುವ ಜನಾಕ್ರೋಶ ಯಾತ್ರೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗಿಳ್ಳಬೇಕು. ಜನ ವಿರೋಧ ಸರ್ಕಾರದ ವಿರುದ್ಧ ಯಾತ್ರೆ ನಡೆಸುವ ಮೂಲಕ ಜನರನ್ನು ಜಾಗೃತಗೊಳಿಸುವ ಅನಿವಾರ್ಯ ಎದುರಾಗಿದೆ. ನಡು ರಸ್ತೆಯಲ್ಲಿ ಹಿಂದು ಸಂಘಟನೆಯ ಮುಖಂಡನ ಹತ್ಯೆಯಾಗಿ 24 ಗಂಟೆ ಕಳೆದಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ಕೊಲೆ ಹಿಂದೆ ಸರ್ಕಾರವೇ ನಿಂತು ಕೊಲೆ ಮಾಡಲು ಪ್ರೇರೇಪಿಸಿದಂತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್​, ಮುಖಂಡರಾದ ಬಾಲಾಜಿ, ಅಪ್ಪಿ, ಮಾಗೇರಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net