ಡಿಸೆಂಬರ್ ಕೊನೆಯಲ್ಲಿ ಪೌರಕಾರ್ಮಿಕರ ಅದಾಲತ್: ಡಿಸಿ ಸೆಲ್ವಮಣಿ

7 smg 8
Published on

ಶಿವಮೊಗ್ಗ: ಜಿಲ್ಲೆಯ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ವಿವಿಧ ಸಮಸ್ಯೆಗಳ ಪರಿಹಾರ ಕ್ರಮಕ್ಕಾಗಿ ಡಿಸೆಂಬರ್ ಕೊನೆಯ ವಾರದಲ್ಲಿ ಪೌರಕಾರ್ಮಿಕರ ಅದಾಲತ್ ಏರ್ಪಡಿಸುವಂತೆ ಡಿಸಿ ಡಾ. ಆರ್.ಸೆಲ್ವಮಣಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್‌ ವೃತ್ತಿ ನಿಷೇಧ ಮತ್ತು ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ನಗರ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರ ವೇತನ, ಪಿಎಫ್, ಇಎಸ್‌ಐ, 10-15 ವರ್ಷ ಟೈಂಬಾಂಡ್ ವೇತನ ಬಡ್ತಿ, ವೈದ್ಯಕೀಯ ವೆಚ್ಚ ಸೇರಿ ವಿವಿಧ ರೀತಿ ಸೌಲಭ್ಯಗಳ ಬಗ್ಗೆ ಪೌರಕಾರ್ಮಿಕರಿಗೆ ತಿಳಿದಿಲ್ಲ. ಈ ಕುರಿತು ಅರಿವು ಮೂಡಿಸಬೇಕು ಎಂದರು.

ಪೌರ ಕಾರ್ಮಿಕರ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಎಲ್ಲ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಂದ ಪೌರಕಾರ್ಮಿಕರ ಸಮಸ್ಯೆಗಳ ಪಟ್ಟಿ ಪಡೆಯಬೇಕು ಎಂದು ಹೇಳಿದರು.

ಸಮಿತಿ ಸದಸ್ಯ ಚಿನ್ನಯ್ಯ ಅವರು ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮತ್ತು ಇನ್ನಿತರೆಡೆ ಪೌರಕಾರ್ಮಿಕರು ನೇರವಾಗಿ ಮ್ಯಾನ್‌ಹೋಲ್‌ಗೆ ಇಳಿಯುತ್ತಿದ್ದಾರೆಂಬ ದೂರಿನ ಕುರಿತು ಪ್ರತಿಕ್ರಿಯಿಸಿದ ಡಿಸಿ, ಈಗಾಗಲೇ ಈ ಕುರಿತು ಪರಿಶೀಲಿಸಲಾಗಿದೆ. ಮತ್ತೊಮ್ಮೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಈ ಬಗ್ಗೆ ಪರಿಶೀಲಿಸಿ ಆ ರೀತಿ ನಡೆಯುತ್ತಿದ್ದರೆ ಸಂಬಂಧಿಸಿದ ಮೇಲ್ವಿಚಾರಕರು ಮತ್ತು ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ತೆಗೆದುಹಾಕಿದ ಸಂಬಂಧ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಸತ್ಯತೆ ಪರಿಶೀಲಿಸಿ ವರದಿ ನೀಡುವಂತೆ ಹೇಳಿದ ಡಿಸಿ, ನಗರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭೇಟಿ ನೀಡಿ ಗುತ್ತಿಗೆ ಆಧಾರದ ಪೌರ ಕಾರ್ಮಿಕರಿಗೆ ಪಾವತಿಸುತ್ತಿರುವ ಪಿಎಫ್, ಇಎಸ್‌ಐ ಮತ್ತು ವೇತನದ ಕುರಿತು ಪರಿಶೀಲಿಸುವಂತೆ ತಿಳಿಸಿದರು.

ಸಮಿತಿ ಸದಸ್ಯರಾದ ಚಿನ್ನಯ್ಯ, ಶಾಂತಕುಮಾರಿ, ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮಮ್ಮ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮೂಕಪ್ಪ ಕರಭೀಮಣ್ಣನವರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ಶ್ರೀನಿವಾಸ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಅಜ್ಜಪ್ಪ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net