

ವರ್ಷದಿಂದ ವರ್ಷಕ್ಕೆ ರಾಜ್ಯದ ಸಾಲ ಹೆಚ್ಚಾಗುತ್ತಿದೆ. ಬಡ್ಡಿ ಹಾಗೂ ಮರುಪಾವತಿ ಕೂಡ ವೆಚ್ಚದಲ್ಲಿ ಸ್ಥಾನ ವಿಸ್ತರಿಸಿಕೊಳ್ಳುತ್ತಿದೆ. ಸಾಲ ಪಡೆಯುವುದು ತಪ್ಪಲ್ಲ, ಕಾನೂನಾತ್ಮಕವಾಗಿಯೂ ಅವಕಾಶವಿದೆ. ಆದರೆ, ಇತಿಮಿತಿ ದಾಟಿದರೆ ಆಪತ್ತು. ಅಂದ ಹಾಗೆ 2025-26ನೇ ಸಾಲಿನ ಆಯವ್ಯಯ ತಯಾರಿ ಕೊನೇ ಹಂತ ತಲುಪಿದ್ದು, ಮುಂದಿನ ಆರ್ಥಿಕ ಸಾಲಿನಲ್ಲಿ ಸಾಲದ ಹೊರೆ ಎಷ್ಟಾಗಲಿದೆ ಎಂಬ ಕುತೂಹಲವಿದೆ.
ಸಾಲದ ಚರ್ಚೆಯ ಮುಂದುವರಿದ ಭಾಗವಾಗಿ ಸರ್ಕಾರ ಹೆಚ್ಚು ಸಾಲ ಮಾಡಿದರೆ ಅದರ ಹೊರೆ ಜನರ ಮೇಲೆ ಎಂಬ ಮಾತು ಕೇಳಿ ಬರುತ್ತದೆ. ಅಂದರೆ ಜನ ತೀರಿಸಬೇಕೆಂದಲ್ಲ, ಜನರ ಮೇಲೆ ಅಷ್ಟು ಹೊರೆ ಎಂಬ ಸಾಮಾನ್ಯ ಅರ್ಥ. ಗುಜರಾತ್ ಸರ್ಕಾರದ ಸಾಲ 3.77 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ, ಅಲ್ಲಿನ ಸರ್ಕಾರ ಪ್ರತಿ ನಾಗರಿಕರ ಮೇಲೂ 66 ಸಾವಿರ ರೂ. ಸಾಲ ಹೊರಿಸಿದೆ ಎಂಬುದು ಚರ್ಚೆಗೆ ಕಾರಣವಾಗಿತ್ತು. ಈ ವಿಷಯದಲ್ಲಿ ಕರ್ನಾಟಕವೇನೂ ಹಿಂದೆ ಬಿದ್ದಿಲ್ಲ. ರಾಜ್ಯದ ಜನಸಂಖ್ಯೆ 6.87 ಕೋಟಿಗೆ ತಲುಪಿದೆ. ಅದೇ ರೀತಿ ಪ್ರತಿಯೊಬ್ಬರ ಮೇಲೆ ಸಾಲದ ಮೊತ್ತ ಒಂದು ಲಕ್ಷ ರೂ.ಇದೆೆ.
ಏರಿಕೆಯ ಹಾದಿ: ರಾಜ್ಯ ಸರ್ಕಾರದ ಸಾಲ 2007-8ರಲ್ಲಿ 63,844 ಕೋಟಿ ರೂ., 2011-12ರಲ್ಲಿ 1,06,279, 2014-15ರಲ್ಲಿ 1,59,388, 2016-18 ರಲ್ಲಿ 2,08, 557 ಕೋಟಿ ರೂ.ಗಳಿತ್ತು. ಈ ಕಾರಣಕ್ಕೆ ಹಿಂದಿನ ಸರ್ಕಾರಗಳು ಕಡಿಮೆ ಸಾಲ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದ್ದವು. ನಂತರದ ಚಿತ್ರಣವೇ ಬದಲಾಗಿ ಕೇವಲ 10 ವರ್ಷಗಳ ಅವಧಿಯಲ್ಲಿ ನಾಲ್ಕು ಲಕ್ಷ ಕೋಟಿ ರೂ.ಗಿಂತ ಅಧಿಕ ಸಾಲವಾಗಿದೆ. ಅಂದರೆ 2012-13ರಲ್ಲಿ ಒಂದು ಲಕ್ಷ ಕೋಟಿ ರೂ., 2016-17ರಲ್ಲಿ ಎರಡು, 2019-20ರಲ್ಲಿ ಮೂರು ಲಕ್ಷ ಕೋಟಿ ರೂ.ಗೆ, 2020-21, 22, 23ರಲ್ಲಿ ನಾಲ್ಕು ಲಕ್ಷ ಕೋಟಿ ರೂ.ಗೆ, 2023-24ರಲ್ಲಿ 5.64 ಕೋಟಿ ರೂ.ಗಳಿಗೆ ತಲುಪಿದರೆ, 2024-25ರ ಮಾರ್ಚ್ ಅಂತ್ಯಕ್ಕೆ ಆರೂವರೆ ಲಕ್ಷ ಕೋಟಿ ರೂ.ಗೆ ತಲುಪುವ ಅಂದಾಜಿದೆ.
ಈಗಿನ ಮಾಹಿತಿ ಪ್ರಕಾರ 2025-26ನೇ ಸಾಲಿನ ಮುನ್ನಂದಾಜಿನ ಪ್ರಕಾರ 1.35 ಲಕ್ಷ ಕೋಟಿಯಷ್ಟು ಹೊಸ ಸಾಲ ಮಾಡುವ ಸಾಧ್ಯತೆ ಇದೆ. ಈವರೆಗೂ ಆರ್ಥಿಕ ಶಿಸ್ತು ಪಾಲಿಸಿಕೊಂಡು ಬಂದಿರುವ ಸಿಎಂ ಸಿದ್ದರಾಮಯ್ಯ ಈ ಬಾರಿಯೂ ಮಿತಿ ದಾಟಕೂಡದು ಎಂದು ಹಣಕಾಸು ಇಲಾಖೆಗೆ ಸೂಚನೆ ನೀಡಿರುವುದು ವಿಶೇಷ. 16ನೇ ಬಜೆಟ್ ಮಂಡಿಸುತ್ತಿರುವ ನಾನು ಒಂದು ಪರಂಪರೆ ಹಾಕಿಕೊಂಡು ಬಂದಿದ್ದೇನೆ. ಈ ಪರಂಪರೆ ಮುರಿಯಕೂಡದು ಎಂದು ಇಲಾಖೆಗೆ ತಿಳಿಸಿದ್ದಾರೆ.
ಸರ್ಕಾರದ ವ್ಯವಸ್ಥೆಯಲ್ಲಿ ಯೋಜನೇತರ ವೆಚ್ಚ, ಯೋಜನೆ ಆಧಾರಿತ ಬದ್ಧ ವೆಚ್ಚ ಎಂದು ಎರಡು ವೆಚ್ಚದ ಶೀರ್ಷಿಕೆ ಬರುತ್ತದೆ. ಯೋಜನೇತರ ಬದ್ಧ ವೆಚ್ಚ ಒಂದು ನಿರ್ದಿಷ್ಟ ಕಾರ್ಯಕ್ರಮ ಅಥವಾ ಯೋಜನೆಗಳಿಗೆ ಸಂಬಂಧಿಸಿದ್ದಲ್ಲ. ಆದರೆ, ಸರ್ಕಾರದ ಸಮಗ್ರ ಕಾರ್ಯನಿರ್ವಹಣೆಗೆ ಅಗತ್ಯವಾಗಿರುತ್ತದೆ. ಈ ಶೀರ್ಷಿಕೆಯಲ್ಲಿ ವೇತನ, ಪಿಂಚಣಿ, ಬಡ್ಡಿ ಪಾವತಿ ಮತ್ತು ಆಡಳಿತಾತ್ಮಕ ವೆಚ್ಚ ಒಳಗೊಂಡಿರುತ್ತದೆ. ಯೋಜನೆ ಆಧಾರಿತ ಬದ್ಧ ವೆಚ್ಚದ ಶೀರ್ಷಿಕೆಯಲ್ಲಿ ಸಹಾಯಧನ, ಸಾಮಾಜಿಕ ಭದ್ರತಾ ಪಿಂಚಣಿ, ಆರ್ಥಿಕ ನೆರವು, ಸಹಾಯಾನುದಾನ (ವೇತನೇತರ) ಮತ್ತು ಸ್ಥಳೀಯ ಸಂಸ್ಥೆಗಳಿಗೆ ಅನುದಾನ ವರ್ಗಾವಣೆ ಒಳಗೊಂಡಿದೆ.
ಈ ಪೈಕಿ ವೇತನ, ಪಿಂಚಣಿ, ಬಡ್ಡಿ ಪಾವತಿ, ಮತ್ತು ಆಡಳಿತಾತ್ಮಕ ವೆಚ್ಚಗಳು ವರ್ಷಕ್ಕೆ ಗಣನೀಯವಾಗಿ ಹೆಚ್ಚಾಗುತ್ತಲೇ ಇವೆ. ಅದರಲ್ಲಿ ಸಾಲದ ಮೇಲಿನ ಬಡ್ಡಿ ಮರುಪಾವತಿ ಸವಾಲಾಗುವಂತೆ ತೋರುತ್ತಿದೆ. 2024-25ನೇ ಸಾಲಿನ ಬಜೆಟ್ ಗಾತ್ರದಲ್ಲಿ ಶೇ.26 ಇದೇ ವೆಚ್ಚದ ಪಾಲಿದೆ.
2022-23- ಶೇ.48
2023-24- ಶೇ.56
2024-25- ಶೇ.61
ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 2024-25ನೇ ಸಾಲಿನ ಎರಡನೇ ಬಜೆಟ್ನಲ್ಲಿ ‘ರಾಜಸ್ವ ಕೊರತೆಯಲ್ಲಿ ಹೆಚ್ಚಳವಾದರೂ, ಅಭಿವೃದ್ಧಿಯ ಫಲಗಳು ಬಡ ಜನತೆಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಅಂತಹ ಕಲ್ಯಾಣ ವೆಚ್ಚಗಳು ಅವಶ್ಯಕ. ಈ ಆಯವ್ಯಯವು ಕರ್ನಾಟಕ ಮಾದರಿ ಅಭಿವೃದ್ಧಿಯ ಹೊಸ ದೃಷ್ಟಾಂತ ರೂಪಿಸಲಿದೆ’ ಎಂದು ಹೇಳಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಸಿದ್ದರಾಮಯ್ಯ ಅವರ ದಶಕದ ಹಿಂದಿನ ಹಾಗೂ ಚಾಲ್ತಿ ವರ್ಷದ ಬಜೆಟ್ ಭಾಷಣಕ್ಕೂ ಇರುವ ವ್ಯತ್ಯಾಸದಂತೆ ರಾಜ್ಯದ ಆರ್ಥಿಕ ಬೆಳವಣಿಗೆಯಿದೆ. ಸುಧಾರಣೆಯತ್ತ ಹೆಜ್ಜೆ, ಕಲ್ಯಾಣ ಕಾರ್ಯಕ್ರಮ, ದೂರಗಾಮಿ ಯೋಜನೆಗಳು, ಜನರನ್ನು ಒಳಗೊಂಡ ಅಭಿವೃದ್ಧಿಗೆ ಆದ್ಯತೆ ನೀಡುವುದು ಮಾದರಿಯಾಗಬಲ್ಲದು ಎಂದು ಆರ್ಥಿಕ ನಿಪುಣರು ವಿಶ್ಲೇಷಿಸುತ್ತಾರೆ.
2024-25ರಲ್ಲಿ ಅಂದಾಜು 39,234 ಕೋಟಿ ರೂ. ಬಡ್ಡಿ ಪಾವತಿ ಮಾಡಲಾಗುತ್ತಿದೆ. ಬಡ್ಡಿ ಪಾವತಿ ಮತ್ತು ರಾಜಸ್ವ ಸ್ವೀಕೃತಿಗಳ ಅನುಪಾತ 2021-22ರಲ್ಲಿ ಶೇ.11.7ರಿಂದ 2024-25ರ ಆಯವ್ಯಯ ಅಂದಾಜಿನಲ್ಲಿ ಶೇ.14.9ಕ್ಕೆ ಏರಿಕೆಯಾಗಿದೆ.