

ಬೆಂಗಳೂರು: ಎಟಿಎಂ ಬೂತ್‌ಗೆ ಬರುವ ವಯಸ್ಸಾದವರಿಗೆ ಸಹಾಯದ ನೆಪದಲ್ಲಿ ಹೋಗಿ ಡೆಬಿಟ್ ಕಾರ್ಡ್, ಪಿನ್ ನಂಬರ್ ಕದ್ದು ಹಣ ಲಪಟಾಯಿಸುತ್ತಿದ್ದ ಆರೋಪಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಮೂಲದ ಸಾಗರ್ ಅಲಿಯಾಸ್ ದಿಲೀಪ್‌ಕುಮಾರ್ (32) ಎಂಬಾತನನ್ನು ಬೇಗೂರು ಪೊಲೀಸರು ಬಂಧಿಸಿ 32 ಎಟಿಎಂ ಕಾರ್ಡ್ ಮತ್ತು 4 ಸಾವಿರ ರೂ. ಜಪ್ತಿ ಮಾಡಿದ್ದಾರೆ. ವಿಚಾರಣೆ ವೇಳೆ ಚಂದ್ರಾ ಲೇಔಟ್ ಮತ್ತು ಉಪ್ಪಾರಪೇಟೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಗರ್ 10ನೇ ತರಗತಿ ವ್ಯಾಸಂಗ ಅರ್ಧಕ್ಕೆ ಬಿಟ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ಬ್ಯಾಂಕ್ ಮತ್ತು ಎಟಿಎಂ ಬೂತ್ ಬಳಿ ಸುತ್ತಾಡುತ್ತಿದ್ದ. ಹಣ ಡ್ರಾ ಮಾಡಲು ವಯಸ್ಸಾದವರು ಅಥವಾ ಅಮಾಯಕರು ಬಂದಾಗ ಸಹಾಯ ನೆಪದಲ್ಲಿ ಹತ್ತಿರ ಹೋಗುತ್ತಿದ್ದ. ಹಣ ಡ್ರಾ ಮಾಡಿಕೊಡುವಂತೆ ಎಟಿಎಂ ಕಾರ್ಡ್ ಅನ್ನು ಕೊಟ್ಟಾಗ ಅವರಿಗೆ ತಿಳಿಯದಂತೆ ತನ್ನ ಬಳಿ ಇರುವ ಕಾರ್ಡ್ ಬದಲಾಯಿಸಿ ಮಷಿನ್ ಒಳಗೆ ಹಾಕುತ್ತಿದ್ದ. ಕಾರ್ಡ್ ಕೊಟ್ಟವರು ಹೇಳುತ್ತಿದ್ದ ಪಿನ್ ನಂಬರ್ ನಮೂದು ಮಾಡಿದಾಗ ಡಿಕ್ಲೇನ್ ಎಂದು ತೋರಿಸಿ ಸ್ಲಿಪ್ ಬರುತ್ತಿತ್ತು. ಮಷಿನ್ ಸರಿ ಇಲ್ಲ ಬೇರೆ ಬೂತ್‌ನಲ್ಲಿ ಪ್ರಯತ್ನ ಮಾಡುವಂತೆ ಸಾಗರ್ ಹೇಳಿ ಕಳುಹಿಸುತ್ತಿದ್ದ. ನಂತರ ಸಂತ್ರಸ್ತರ ಕಾರ್ಡ್ ಮತ್ತು ಪಿನ್ ನಂಬರ್ ಬಳಸಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ.
ಇದೇ ರೀತಿಯಾಗಿ ಬೇಗೂರು ಮುಖ್ಯ ರಸ್ತೆಯಲ್ಲಿ ಎಚ್‌ಡಿಎ್ಸಿ ಬ್ಯಾಂಕ್ ಎಟಿಎಂ ಬಳಿಗೆ ಹಣ ಡ್ರಾ ಮಾಡಲು ಬಂದ ವ್ಯಕ್ತಿಯೊಬ್ಬರು, ಸಾಗರ್ ಕೈಗೆ ಕಾರ್ಡ್ ಕೊಟ್ಟು ಸಹಾಯ ಕೋರಿದ್ದರು. ಅವರು ಕೊಟ್ಟ ಕಾರ್ಡ್ ಉಪಯೋಗಿಸದೆ ಬೇರೆ ಕಾರ್ಡ್ ಬಳಸಿ ಅಲ್ಲಿಂದ ಕಳುಹಿಸಿದ್ದನು. ನಂತರ 61 ಸಾವಿರ ರೂ. ಡ್ರಾ ಮಾಡಿಕೊಂಡಿದ್ದ.
ಈ ಬಗ್ಗೆ ಬೇಗೂರು ಠಾಣೆಗೆ ಸಂತ್ರಸ್ತರು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಎಟಿಎಂ ಬೂತ್‌ನಲ್ಲಿ ಸೆರೆಯಾಗಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಪಡೆದು ತಮ್ಮ ವ್ಯಾಪ್ತಿಯ ಬ್ಯಾಂಕ್, ಎಟಿಎಂ ಬೂತ್‌ಗಳ ಮೇಲೆ ನಿಗಾವಹಿಸಿದ್ದರು. ಇತ್ತೀಚೆಗೆ ಸಾಗರ್ ಕೃತ್ಯ ಎಸಗಲು ಬಂದಾಗ ಪೊಲೀಸರು ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿವಿಧ ಬ್ಯಾಂಕ್‌ಗಳ 32 ಕಾರ್ಡ್‌ಗಳು ಪತ್ತೆಯಾಗಿವೆ.