

ತೀರ್ಥಹಳ್ಳಿ: ಪಟ್ಟಣ ಪಂಚಾಯಿತಿ ಕಾರ್ಯನಿರ್ವಹಣೆಯಲ್ಲಿ ಚುನಾಯಿತ ಸದಸ್ಯರೇ ಭ್ರಷ್ಟಾಚಾರಕ್ಕೆ ಉತ್ತೇಜನ ನೀಡಿದ್ದಾರೆ ಎಂಬ ಬಿಜೆಪಿ ಸದಸ್ಯರ ಆರೋಪಕ್ಕೆ ಸಂಬಂಧಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಉಂಟಾದ ವಾಗ್ವಾದದಿಂದಾಗಿ ಶುಕ್ರವಾರ ನಡೆದ ಪಪಂ ಸಾಮಾನ್ಯ ಸಭೆಯ ಸುಮಾರು ಒಂದು ತಾಸು ಅವಧಿ ವ್ಯರ್ಥವಾಯಿತು.
ಸಭೆ ಆರಂಭದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ರವೀಶ್ ಬಾಬಿ, ಪಪಂ ಸದಸ್ಯರೊಬ್ಬರು ಸಾರ್ವಜನಿಕರೊಬ್ಬರ ಕೆಲಸಕ್ಕೆ ಸಂಬಂಧಿಸಿ ಪಪಂ ಸಿಬ್ಬಂದಿಗೆ ಹಣ ನೀಡುವಂತೆ ಸೂಚಿಸಿದ್ದಾರೆ ಎಂದು ಮಾಹಿತಿ ಇದೆ ಎಂದು ಸಭೆಗೆ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಸಂದೇಶ್ ಜವಳಿ, ಜನರಿಂದ ಆಯ್ಕೆಯಾಗಿರುವ ನಾವುಗಳೇ ಇಂತಹ ಬೆಳವಣಿಗೆಗೆ ಉತ್ತೇಜನ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ಸೇರಿ ಆಡಳಿತ ಪಕ್ಷವಾದ ಕಾಂಗ್ರೆಸ್ ಸದಸ್ಯರು ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ. ಹಿಂದೆಯೂ ಇಂತಹ ವಿಚಾರಗಳು ನಡೆದಿವೆ. ಇದೊಂದು ಆಧಾರವಿಲ್ಲದ ಆರೋಪ ಎಂದು ನಿರಾಕರಿಸಿದರು. ಈ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆಯಿತು.
ಬಿಜೆಪಿ ಸದಸ್ಯ ಸಂದೇಶ್ ಜವಳಿ ಮಾತನಾಡಿ, ರಾಜ್ಯ ಸರ್ಕಾರ ಇ-ಖಾತಾ ತಿದ್ದುಪಡಿಗೆ ಸಂಬಂಧಿಸಿ ಆದೇಶ ನೀಡಿರುವುದನ್ನು ಪ್ರಶಂಸಿಸಿ, ಇದೊಂದು ಮಹತ್ತರ ತೀರ್ಮಾನ. ಈ ಬಗ್ಗೆ ವಿಶೇಷ ಸಭೆ ಕರೆದು ಪಪಂ ಸದಸ್ಯರಿಗೆ ಕಾರ್ಯಾಗಾರದ ಮೂಲಕ ಮಾಹಿತಿ ನೀಡಬೇಕಿತ್ತು ಎಂದು ಹೇಳಿದರು.
ಪಪಂನ ಹಲವಾರು ಕಾಮಗಾರಿಗಳನ್ನು ಗುತ್ತಿಗೆ ಪಡೆದು ಯಾವ ಕಾಮಗಾರಿಯನ್ನೂ ಕ್ರಮಬದ್ಧವಾಗಿ ಮಾಡದಿರುವ ಮತ್ತು ಪಪಂನ ಸಂಪರ್ಕಕ್ಕೂ ಸಿಗದಿರುವ ಗುತ್ತಿಗೆದಾರ ಅನಿಲ್‌ಕುಮಾರ್ ಅವರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಲು ತೀರ್ಮಾನಿಸಲಾಯಿತು. ಪಪಂನಿಂದ ವಿಶ್ವ ಮಹಿಳಾ ದಿನಾಚರಣೆ ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು.
ಪಪಂ ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್ ಮತ್ತಿತರರಿದ್ದರು.