

ಎಚ್.ಡಿ. ಕೋಟೆ: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಗೋಳೂರು ಹಾಡಿಯಲ್ಲಿ ಕಾಡಾನೆ ದಾಳಿಗೆ ಆದಿವಾಸಿ ವೃದ್ಧರೊಬ್ಬರು ಮಂಗಳವಾರ ಮೃತಪಟ್ಟಿದ್ದಾರೆ. ಹಾಡಿಯ ಕಾಳ (75) ಮೃತ. ಮಂಗಳವಾರ ಬೆಳಗಿನ ಜಾವ ಕಾಳ ಮನೆಯಲ್ಲಿ ಮಲಗಿದ್ದ ವೇಳೆ ಕಾಡಾನೆ ಮನೆ ಮೇಲೆ ದಾಳಿ ಮಾಡಿದೆ. ಈ ಸಂದರ್ಭ ಗಂಭೀರ ಗಾಯಗೊಂಡಿದ್ದ ಕಾಳ ಅವರನ್ನು ಡಿ.ಬಿ ಕುಪ್ಪೆ ವಲಯದ ಆರ್ ಎಫ್‌ಒ ಮಧು ಹಾಗೂ ಸಿಬ್ಬಂದಿ ಎಚ್.ಡಿ. ಕೋಟೆ ಸಾರ್ವಜನಿಕ ಆಸ್ಪತ್ರೆಗೆ, ನಂತರ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಕಾಳ ಬೆಳಗ್ಗೆ 10 ಗಂಟೆಗೆ ಮೃತಪಟ್ಟಿದ್ದಾರೆ. ಅಂತರಸಂತೆ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲಾಖೆಯಿಂದ ಪರಿಹಾರ: ಕಾಳ ಕುಟುಂಬಕ್ಕೆ ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ 15 ಲಕ್ಷ ರೂ. ಪರಿಹಾರ ನೀಡಲಿದ್ದು, ತುರ್ತಾಗಿ 5 ಲಕ್ಷ ರೂ. ಚೆಕ್ ವಿತರಿಸಿದೆ. ಉಳಿದ 10 ಲಕ್ಷ ರೂ. ಪರಿಹಾರವನ್ನು ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ನೀಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.