

ನವದೆಹಲಿ: ಆದಾಯ ತೆರಿಗೆ ಪಾವತಿ ಮಾಡುವ ಗಡುವನ್ನು ಕೇಂದ್ರ ಸರ್ಕಾರ ಮೂರನೇ ಬಾರಿಗೆ ವಿಸ್ತರಣೆ ಮಾಡಿದ್ದು, 2019-20ನೇ ಸಾಲಿನ ವೈಯಕ್ತಿಕ ಆದಾಯ ತೆರಿಗೆ ಪಾವತಿ ಗಡುವನ್ನು ಜನವರಿ 10ರವರೆಗೂ ವಿಸ್ತರಿಸಿದೆ.
ಖಾತೆಗಳ ಆಡಿಟ್ ಪಡೆಯಬೇಕಾದ ವೈಯಕ್ತಿಕ ಮತ್ತು ಕಂಪನಿಗಳಿಗೆ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಫೆಬ್ರವರಿ 15ರವರೆಗೆ 15 ದಿನಗಳು ವಿಸ್ತರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಲಾಯ ಪ್ರಕಟಣೆಯಲ್ಲಿ ತಿಳಿಸಿದೆ.
ವೈಯಕ್ತಿಕ ಮತ್ತು ಕಂಪೆನಿಗಳು ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಸಲು ಅಂತಿಮ ದಿನಾಂಕ ಕ್ರಮವಾಗಿ ಡಿಸೆಂಬರ್ 31, 2020 ಮತ್ತು ಜನವರಿ 31, 2021 ಆಗಿದೆ. ಡಿಸೆಂಬರ್ 28ರವರೆಗೂ 4.54 ಕೋಟಿಗೂ ಅಧಿಕ ಐಟಿ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 4.77 ಕೋಟಿ ಸಲ್ಲಿಕೆಯಾಗಿತ್ತು.
ಕರೊನಾ ವೈರಸ್ ಸ್ಪೋಟಗೊಂಡ ಬಳಿಕ ಶಾಸನಬದ್ಧ ಅನುಸರಣೆಗಳನ್ನು ಪೂರೈಸುವಲ್ಲಿ ತೆರಿಗೆದಾರರು ಎದುರಿಸುತ್ತಿರುವ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ಗಡುವನ್ನು ವಿಸ್ತರಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ. (ಏಜೆನ್ಸೀಸ್)