

ಕೋಲಾರ: ಜಿಲ್ಲಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಧಾನಗತಿಯಲ್ಲಿ ಸಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ದೂರುಗಳು ಬಂದಿದ್ದು, ಗುತ್ತಿಗೆದಾರರು ಕಾಮಗಾರಿಗೆ ವೇಗ ನೀಡಿ ಕೆಲಸ ಮುಗಿಸಬೇಕು ಎಂದು ಸಂಸದ ಎಂ.ಮಲ್ಲೇಶ್ ಬಾಬು ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸೇತುವೆ, ಸರ್ವೀಸ್ ರಸ್ತೆ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ. ವರ್ಷಗಳು ಕಳೆದು ಕೆಲಸ ಮಾತ್ರ ಪೂರ್ಣಗೊಂಡಿಲ್ಲ ಏಕೆ ಎಂದು ಗುತ್ತಿಗೆದಾರರನ್ನು ಪ್ರಶ್ನಿಸಿದರು.
ಬೆಂಗಳೂರು&ಚೆನ್ನೆ$ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇದಿನೆ ವಾಹನಗಳ ಸಂಚಾರ ಹೆಚ್ಚಾಗುತ್ತಿದೆ. ನಂಗಲಿ, ಮುಳಬಾಗಲು, ತಂಬಿಹಳ್ಳಿ, ನರಸಾಪುರ ಸಮೀಪ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಕೊಳತೂರು ಜಂಕ್ಷನ್ನಿಂದ ನಂಗಲಿ ನಡುವೆ ಸುಗಮ ಸಂಚಾರಕ್ಕೆ ಹೆದ್ದಾರಿ ಕಾಮಗಾರಿ ವಿಳಂಬವಾಗಿದ್ದು, ತೊಂದರೆ ತಂದೊಡ್ಡಿದೆ. 2026ರ ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಜಯಕುಮಾರ್ ಸೂಚಿಸಿದರು.
ನಗರದ ಉದ್ದಕ್ಕೂ ಸುಮಾರು 19 ಕಿ.ಮೀ. ಹೆದ್ದಾರಿ ಹಾದು ಹೋಗಿದ್ದು, 16 ಹಳ್ಳಿಗಳ ಮೂಲಕ ಹಾದು ಹೋಗಲಿದೆ. ಸ್ಥಳಿಯರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರವಹಿಸಬೇಕು. ನರಸಾಪುರ, ಮುಳಬಾಗಿಲು, ಕೋಲಾರ ಸೇರಿ ಹಲವು ಕಡೆ ಬೆಳಕಿನ ವ್ಯವಸ್ಥೆಯಿಲ್ಲ. ಸೂಚನಾ ಲಕಗಳನ್ನು ಅಳವಡಿಸಬೇಕು. ಈಗಾಗಲೇ 36 ಕಡೆ ಬ್ಲಾಕ್ಸ್ಪಾಟ್ ಗುರುತಿಸಿದ್ದು, ಬೆಳಕಿನ ವ್ಯವಸ್ಥೆ, ಎಚ್ಚರಿಕೆ ಫಲಕ, ಪೇಂಟಿಂಗ್ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಅಪಘಾತ ಸಂದರ್ಭದಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಬೆಳ್ಳೂರು, ನರಸಾಪುರ, ಎಪಿಎಂಸಿ, ವಡಗೂರು, ತಂಬಿಹಳ್ಳಿ, ನರಸಿಂಹ ತೀರ್ಥ, ವಡ್ಡಹಳ್ಳಿವರೆಗಿನ ಕಾಮಗಾರಿಗಳನ್ನು ೆಬ್ರವರಿ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ವಿದ್ಯುತ್, ಸಿಸಿ ಟಿವಿ, ರಸ್ತೆ ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು, ಗುತ್ತಿಗೆದಾರರು ಸಬೂಬು ಹೇಳಬಾರದು ಕೆಲಸ ಮಾಡಿ ತೋರಿಸಬೇಕು. ಈ ಬಗ್ಗೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆ ನಡೆಸಿ ರಸ್ತೆ ಅಭಿವೃದ್ಧಿ, ಅಪಘಾತ ತಡೆಗಟ್ಟುವ ವಿಚಾರದ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುತ್ತಿದೆ. ಹೆಚ್ಚಾಗಿ ಮಳೆಯಾಗುತ್ತಿರುವುದರಿಂದ ಕೆಲ ಕಡೆ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣ ಆಗಿದ್ದು, ಅದನ್ನು ಮುಚ್ಚಿ ಪ್ರಾಣ ಹಾನಿ ಸಂಭವಿಸದಂತೆ ಎಚ್ಚರವಹಿಸಲು ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿಲಾಸ್ ಬ್ರಹ್ಮಾಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಇದ್ದರು.
* ಸರ್ವೀಸ್ ರಸ್ತೆ ವಿಸ್ತರಿಸಿ
ಬೆಂಗಳೂರು&ಚೆನ್ನೆ$ ಕಾರಿಡಾರ್ ಹೊರ ಜಿಲ್ಲೆ, ಹೊರ ರಾಜ್ಯಕ್ಕೂ ಸಂಪರ್ಕ ಕಲ್ಪಿಸುತ್ತದೆ. ಕೋಲಾರ ಭಾಗದಲ್ಲಿ ಹಾದು ಹೋಗಿರುವ ರಸ್ತೆ ಹದಗೆಟ್ಟಿದ್ದು, ಬಹುತೇಕ ಕಡೆ ಸರ್ವೀಸ್ ರಸ್ತೆಯಿಲ್ಲವಾಗಿದ್ದು, ಕೂಡಲೇ ವ್ಯವಸ್ಥೆ ಮಾಡಬೇಕು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್ ಒತ್ತಾಯಿಸಿದರು. ಕೋಲಾರ&-ತಿರುಪತಿ ಮಾರ್ಗದಲ್ಲಿ ಮುಳಬಾಗಿಲು ಸಮೀಪ ಅಪಘಾತಗಳು ಸಂಭವಿಸಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ತಡೆಯಲು ಸಂಬಂಧಿಸಿದ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ನಗರ ಪ್ರವೇಶ ಮಾಡಬೇಕಾಗಿರುವು ಹೆದ್ದಾರಿಯಿಂದಲೇ. ವೈಜ್ಞಾನಿಕ ಸರ್ವೀಸ್ ರಸ್ತೆಯಿಲ್ಲ, ವಿಸ್ತರಣೆ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹೀಗೆ ನಿತ್ಯ ಜನ ಸಮಸ್ಯೆ ಎದುರಿಸುತ್ತಲೇ ಇರಬೇಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.