ಚಿತೆಗೆ ಹಾಕುವ ಕೆಲವೇ ಕ್ಷಣಗಳಲ್ಲಿ ಉಸಿರುಬಿಟ್ಟ ಮೃತ ಯುವಕ! ನಂತರ ನಡೆದಿದ್ದು ಅಚ್ಚರಿ

ವಿಜಯವಾಣಿ - 2024-11-22T141727.863
Published on

ಜೈಪುರ: ಇಂತಹ ಚಿತ್ರ-ವಿಚಿತ್ರ ಘಟನೆಗಳು ಆಗಾಗ್ಗೆ ಮಾಧ್ಯಮ, ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬರುತ್ತಿರುತ್ತವೆ. ಸತ್ತು ಹೋದ ವ್ಯಕ್ತಿ ಮತ್ತೆ ಎದ್ದು ಬಂದಿದ್ದು ಚರಿತ್ರೆಯಲ್ಲಿಯೇ ಇಲ್ಲ ಎನ್ನುವ ಮಾತು ಆಗ ಹೆಚ್ಚು ಪ್ರಚಲಿತದಲ್ಲಿತ್ತು. ಆದರೆ, ಇಂದು ಅದು ಹಳೆಯದಾಗಿದೆ. ಉಸಿರು ನಿಂತು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ ಮೃತದೇಹಗಳು ಜೀವಂತವಾಗಿ ಎದ್ದುನಿಂತ ಶಾಕಿಂಗ್ ಘಟನೆಗಳು ಜನರನ್ನು ಬೆಚ್ಚಿಬೀಳಿಸಿವೆ. ಕೆಲವರು ಇದನ್ನೆಲ್ಲ ಪವಾಡ ಎಂದರೆ, ಇನ್ನೂ ಕೆಲವರು ಸರಿಯಾಗಿ ಪರಿಶೀಲಿಸದೆ, ತಪ್ಪಾಗಿ ನಿರ್ಧರಿಸುತ್ತಾರೆ ಎಂದು ಹೇಳುತ್ತಾರೆ. ಸದ್ಯ ಈ ಘಟನೆ ಕೂಡ ಅದೇ ಸಾಲಿಗೆ ಸೇರಿದೆ.

ರಾಜಸ್ಥಾನದ ಜೈಪುರ ಯುವಕನೊಬ್ಬ ಅನಾರೋಗ್ಯದ ಸಮಸ್ಯೆಯಿಂದ ಗುರುವಾರ (ನ.21) ಮಧ್ಯಾಹ್ನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ವೇಳೆ ಚಿಕಿತ್ಸೆ ನೀಡಬೇಕಿದ್ದ ವೈದ್ಯರು, ಸಂಜೆ ಹೊತ್ತಿಗೆ ಆತ ಮೃತಪಟ್ಟಿರುವುದಾಗಿ ದೃಢಪಡಿಸಿ, ಶವಗಾರದಲ್ಲಿ ಇರಿಸಿದ್ದಾರೆ. ಮನೆ ಮಗ ಸಾವಿಗೀಡಾದ ಸುದ್ದಿ ತಿಳಿದು, ಕಣ್ಣೀರಿಟ್ಟ ಕುಟುಂಬಸ್ಥರು, ಆಸ್ಪತ್ರೆಯಲ್ಲಿದ್ದ ಆ್ಯಂಬುಲೆನ್ಸ್ ಸಹಾಯದಿಂದ ಸಮಾಧಿ ಮಾಡಲು ಚಿತಗಾರಕ್ಕೆ ತೆರಳಿದ್ದಾರೆ.

ಇಂದು ಬೆಳಗ್ಗೆ ಸಾವು

ಧ್ವನಿ ಕೇಳಿಸದ ಮತ್ತು ಮಾತು ಬಾರದ 25 ವರ್ಷದ ಮೃತ ಯುವಕನನ್ನು ರೋಹಿತಾಶ್‌ ಎಂದು ಗುರುತಿಸಲಾಗಿದೆ. ಇನ್ನೇನು ಅಂತಿಮ ವಿಧಿವಿಧಾನ ಈಡೇರಿಸಿ, ಚಿತೆಗೆ ಹಾಕಬೇಕು ಎನ್ನುವಷ್ಟರಲ್ಲಿ ಪೆಟ್ಟಿಗೆ ಅಲುಗಾಡಿದೆ. ಮೊದ ಮೊದಲು ಗಾಬರಿಯಾದರೂ ನಂತರದಲ್ಲಿ ಬಾಕ್ಸ್​ ತೆರೆದು ನೋಡಿದ ಕುಟುಂಬಸ್ಥರಿಗೆ ಯುವಕ ಉಸಿರಾಡುತ್ತಿರುವುದು ಗೊತ್ತಾಗಿದೆ. ಅಚ್ಚರಿಯ ನಡುವೆಯೇ ಆತನನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಾವು ಗೆದ್ದು ಬರುವಲ್ಲಿ ವಿಫಲವಾದ ಯುವಕ, ಚಿಕಿತ್ಸೆ ಫಲಿಸದೆ ಇಂದು (ನ.22) ಬೆಳಗ್ಗೆ ಮೃತಪಟ್ಟಿದ್ದಾನೆ.

ತನಿಖೆಗೆ ಆದೇಶ

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಯುವಕನನ್ನು ಪರಿಶೀಲಿಸಿ, ತಪ್ಪು ವರದಿ ನೀಡಿದ ಮೂವರು ವೈದ್ಯರನ್ನು ಇದೀಗ ಪೊಲೀಸರು ಬಂಧಿಸಿದ್ದು, ತಪ್ಪಿತಸ್ಥರ ವಿರುದ್ಧ ತನಿಖೆ ಕೈಗೊಳ್ಳಲು ರಾಜಸ್ಥಾನ ಸರ್ಕಾರ ಆದೇಶಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net