ಪೊಲೀಸರ ಊಟದಲ್ಲಿ ಸತ್ತ ಇಲಿ; ಯಾರಿಗೆ ಎದುರಾಯಿತು ಸಂಕಷ್ಟ

rat
Published on

ಬೆಂಗಳೂರು: ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬೆಂಗಳೂರು ಬಂದ್‌ಗೆ ಮಂಗಳವಾರ ಬಿಗಿ ಭದ್ರತೆಗೆ ನಿಯೋಜನೆ ಗೊಂಡಿದ್ದ 180 ಪೊಲೀಸರಿಗೆ ವಿತರಿಸಿದ್ದ ಉಪಾಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದೆ. ಜಾಲತಾಣದಲ್ಲಿ ಪೋಟೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 2 ಠಾಣೆಗಳ 180 ಪೊಲೀಸರಿಗೆ ಬೆಳಗ್ಗೆ 7.30ಕ್ಕೆ ಅಶೋಕ ಹೋಟಲ್‌ನಿಂದ ರೈಸ್ ಬಾತ್ ವಿತರಿಸಲಾಗಿತ್ತು. ಅದರಲ್ಲಿ ಯಶವಂತಪುರ ಸಂಚಾರ ಠಾಣೆ ಕಾನ್‌ಸ್ಟೆಬಲ್ ಕೊಟ್ಟಿದ್ದ ಆಹಾರ ಪೊಟ್ಟಣದಲ್ಲಿ ಸತ್ತ ಇಲಿ ಕಂಡು ಬಂದಿದೆ.

ಗಾಬರಿಗೊಂಡ ಕಾನ್‌ಸ್ಟೆಬಲ್ ಕೂಡಲೇ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಪೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದರು. ಜತೆಗೆ ರೈಸ್ ಬಾತ್ ಸೇವಿಸದಂತೆ ಎಚ್ಚರಿಸಿದ್ದರು. ವಿಚಾರ ಗೊತ್ತಾದ ಕೂಡಲೇ ಆಹಾರ ಪೊಟ್ಟಣ ವಿತರಿಸದಂತೆ ಅಧಿಕಾರಿಗಳು ಸೂಚನೆ ಕೊಟ್ಟಿದ್ದರು. ಅಷ್ಟರಲ್ಲಿ ಇಲಿ ಸತ್ತಿರುವ ರೈಸ್ ಬಾತ್ ಪೋಟೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಳಪೆ ಆಹಾರ ನೀಡಿದ ನಗರ ಪೊಲೀಸ್ ಇಲಾಖೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಧಾನ ವ್ಯಕ್ತವಾಗಿತ್ತು.

ಎಚ್ಚೆತ್ತ ನಗರ ಪೊಲೀಸರು, ಕಳಪೆ ಆಹಾರ ಸರಬರಾಜು ಮಾಡಿದ್ದ ಯಶವಂತಪುರ ಮೇಲ್ಸೇತುವೆ ಬಳಿಯ ಅಶೋಕ ಹೋಟೆಲ್‌ಗೆ ಬೀಗ ಹಾಕಿಸಿದ್ದರು. ಆಹಾರ ಪೂರೈಕೆ ಹೊಣೆಗಾರಿಕೆ ಹೊತ್ತಿದ್ದ ಯಶವಂತಪುರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ಜಿ. ಚಿದಾನಂದ್ ವಿರುದ್ದ ಶಿಸ್ತು ಕ್ರಮ ಜರುಗಿಸುವಂತೆ ಜಂಟಿ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

3 ದಿನಗಳ ಹಿಂದೆ ಯಲಹಂಕದಲ್ಲಿ ಗಣೇಶ ವಿಸರ್ಜನೆ ಬಂದೋಬಸ್ತ್‌ಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಕಳಪೆ ಆಹಾರ ಪೂರೈಕೆ ಮಾಡಿದ್ದರು. ಕೇಸರಿಬಾತ್, ಉಪ್ಪಿಟ್ಟು ಮತ್ತು ವಡೆಯಲ್ಲಿ ಅತೀ ಹೆಚ್ಚು ಎಣ್ಣೆ ಇರುವುದನ್ನು ಕಾನ್‌ಸ್ಟೆಬಲ್ ವಿಡಿಯೋ ಮಾಡಿ ತೋರಿಸಿದ್ದ ದೃಶ್ಯಾವಳಿ ಸಹ ಎಲ್ಲೆಡೆ ವೈರಲ್ ಆಗಿತ್ತು. ಇದರ ಬೆನ್ನೆಲ್ಲೆ ರೈಸ್‌ಬಾತ್‌ನಲ್ಲಿ ಸತ್ತ ಇಲಿ ಪತ್ತೆಯಾಗಿದೆ.

ಈ ಸಂಬಂಧ ಅಶೋಕ ಹೋಟೆಲ್‌ಗೆ ಬೀಗ ಜಡಿದು ಮಾಲಿಕನ ವಿರುದ್ಧ ಕಳಪೆ ಆಹಾರ ಪೂರೈಕೆ ಆರೋಪದಡಿ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರು ನಿರ್ಧರಿಸಿದ್ದಾರೆ. ಪ್ರತ್ಯೇಕ ತನಿಖೆ ಸಹ ನಡೆಸಲು ಬಿಬಿಎಂಪಿ ಆಹಾರ ಪರಿವೀಕ್ಷಕ ತಂಡ, ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದೆ. ತಪ್ಪು ಕಂಡುಬಂದರೇ 4 ರಿಂದ 5 ಲಕ್ಷ ರೂ.ದಂಡವನ್ನು ಬಿಬಿಎಂಪಿ ವಿಧಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net