ರೋಗಿಯ ಅಂತ್ಯಕ್ರಿಯೆಯ ಏಳನೇ ದಿನಕ್ಕೆ ಬಂತೊಂದು ಮೆಸೇಜ್​: ಇಡೀ ಕುಟುಂಬವೇ ಶಾಕ್​!

smsweb
Published on

ಅಹಮದಾಬಾದ್: ಕರೊನಾ ಸೋಂಕು ಎನ್ನುವುದು ಇಡೀ ವಿಶ್ವವನ್ನೇ ತಲ್ಲಣಿಸಿರುವ ಬೆನ್ನಲ್ಲೇ ಕೆಲವು ಆಸ್ಪತ್ರೆಗಳಲ್ಲಿ ಎಡವಟ್ಟುಗಳು ಆಗುತ್ತಿವೆ. ಒಂದೆಡೆ ಹೊಸ ಹೊಸ ಸೋಂಕಿತರು, ಇನ್ನೊಂದೆಡೆ ಸೋಂಕಿನಿಂದ ಮೃತರಾಗುತ್ತಿರುವವರು, ಮತ್ತೊಂದೆಡೆ ಒಂದೇ ಹೆಸರಿನ ಅನೇಕ ಮಂದಿ... ಈ ಎಲ್ಲಾ ಕಾರಣಗಳಿಂದ ಆಸ್ಪತ್ರೆಗಳಲ್ಲಿ ಎಡವಟ್ಟುಗಳು ನಡೆಯುತ್ತಲೇ ಇವೆ.

ಇಂಥದ್ದೇ ಒಂದು ಎಡವಟ್ಟು ಇದೀಗ ಭಾರಿ ವೈರಲ್​ ಆಗಿದ್ದು, ಆಸ್ಪತ್ರೆಗಳ ವಿರುದ್ಧ ವಾಗ್ದಾಳಿ ಶುರುವಾಗಿದೆ.

ಇದು ನಡೆದಿರುವುದು : ಗುಜರಾತ್‌ನಲ್ಲಿ ಆಸ್ಪತ್ರೆಯಲ್ಲಿ. ದರೀಯಾಪುರದಲ್ಲಿ ಟ್ಯೂಷನ್ ಟೀಚರ್ ಆಗಿರುವ ಸಾಗರ್ ಷಾ ಎನ್ನುವವರ ತಂದೆ ಕಿಶೋರ್‌ಭಾಯ್ ಹೀರಾಲಾಲ್ ಷಾರನ್ನು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಇಲ್ಲಿಯ ಸಿಜಿಆರ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರ ತಂದೆ ಮೃತಪಟ್ಟರು.

ತಂದೆಯ ಶವವನ್ನು ಪಡೆದುಕೊಂಡು ಬಂದ ಸಾಗರ್​ ಅವರು, ಅಂತ್ಯಕ್ರಿಯೆಯನ್ನೂ ನೆರವೇರಿಸಿದರು. ಅದಾದ ವಾರದ ನಂತರ ಅವರ ಮೊಬೈಲ್​ಗೆ ಒಂದು ಸಂದೇಶ ಬಂತು. ಅದರಲ್ಲಿ, ಕಿಶೋರ್‌ಭಾಯ್ ಹೀರಾಲಾಲ್ ಷಾ ಅವರನ್ನು ಮೇ.30ರಂದು 6.38ಕ್ಕೆ ಅಸರ್ವಾದಲ್ಲಿರುವ ಜಿಸಿಆರ್ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬರೆಯಲಾಗಿತ್ತು.

ಇದನ್ನು ನೋಡಿದ ಇಡೀ ಕುಟುಂಬಕ್ಕೇ ಶಾಕ್​ ಆಯಿತು. ಏಕೆಂದರೆ ಮೇ 16ರಂದೇ ಮೃತರಾಗಿದ್ದ ತಂದೆಯವರ ಅಂತ್ಯಕ್ರಿಯೆಯನ್ನೂ ನಡೆಸಲಾಗಿತ್ತು. ಈಗ ನೋಡಿದರೆ ಅವರನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ಬರೆಯಲಾಗಿತ್ತು!

ಈ ಸಂದೇಶ ನೋಡಿದ ಸಾಗರ್ ಅವರು ಆಸ್ಪತ್ರೆಯ ಬೇಜವಾಬ್ದಾರಿತನವನ್ನು ಟೀಕಿಸಿದ್ದಾರೆ. ಜತೆಗೆ, ಆಸ್ಪತ್ರೆಯಿಂದ ಅಪ್ಪನ ಮೃತದೇಹ ಪಡೆಯಲು ತಾವು ಪಟ್ಟ ಕಷ್ಟವನ್ನು ಅವರು ವಿಡಿಯೋದಲ್ಲಿ ತಿಳಿಸಿದ್ದು ಅದನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ. ತಂದೆಯ ದೇಹದ ಮೇಲಿದ್ದ ಚಿನ್ನಾಭರಣ ಹಾಗೂ ಜೇಬಲ್ಲಿದ್ದ 10 ಸಾವಿರ ರೂಪಾಯಿ ಕೂಡ ಕಳುವಾಗಿದೆ ಎಂದಿದ್ದಾರೆ. ಈ ಕುರಿತು ಪೊಲೀಸ್ ಠಾಣೆಗೆ ಹೋಗಿ ಎಫ್‌ಐಆರ್ ದಾಖಲು ಮಾಡಿದ್ದೇನೆ ಎಂದಿದ್ದಾರೆ.

ಇವರು ಮಾಡಿರುವ ವಿಡಿಯೋ ಭಾರಿ ವೈರಲ್​ ಆಗಿದೆ. ಇದಕ್ಕೆ ಸ್ಪಷ್ಟನೆ ನೀಡಿರುವ ಆಸ್ಪತ್ರೆಯ ಆರ್‌ಎಂಒ ಡಾ. ಸಂಜಯ್ ಕಪಾಡಿಯಾ ಮಾತನಾಡಿದ್ದು 'ಆಸ್ಪತ್ರೆಯಲ್ಲಿ ಒಂದೇ ಹೆಸರಿನ ಇಬ್ಬರು ರೋಗಿಗಳಿದ್ದರು. ಹಾಗಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net