

ಬನ್ನೂರು : ಮಾದಿಗ ಸಮುದಾಯದ ಸ್ಮಶಾನಕ್ಕೆ ರಸ್ತೆ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪಟ್ಟಣದ ಕಾವೇರಿ ವೃತ್ತದಲ್ಲಿ ಸಮುದಾಯದವರು ವ್ಯಕ್ತಿಯೊಬ್ಬರ ಶವವಿಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.
ಮಾದಿಗ ಜನಾಂಗಕ್ಕೆ ಸರ್ಕಾರ ಹಲವಾರು ಸೌಲಭ್ಯ ನೀಡುತ್ತಿದೆ ಎಂದು ಓಲೈಸುತ್ತಾರೆ. ನಮ್ಮ ಜನಾಂಗವನ್ನು ಬಳಸಿಕೊಳ್ಳುತ್ತಾರೆಯೇ ವಿನಾ ಯಾವುದೇ ಸೌಲಭ್ಯ ನೀಡುವುದಿಲ್ಲ. ಮಾದಿಗ ಸಮುದಾಯಕ್ಕೆ ಶವ ಹೂಳಲು ಸ್ಮಶಾನಕ್ಕೆ ತೆರಳಲು ರಸ್ತೆ ಇಲ್ಲದೆ ಗದ್ದೆ ಬಯಲಲ್ಲಿ ಹೋಗಿ ಸಂಸ್ಕಾರ ಮಾಡಬೇಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾರ ಬಳಿ ಹೇಳಿದರೂ 40 ವರ್ಷಗಳಿಂದ ಸಮಸ್ಯೆ ಬಗೆಹರಿದಿಲ್ಲ. ನಾನೊಬ್ಬ ಪುರಸಭಾ ಸದಸ್ಯನಾದರೂ ಸಮಸ್ಯೆ ಸರಿಪಡಿಸಲು ಆಗಿಲ್ಲ ಎಂದು ಪುರಸಭಾ ಸದಸ್ಯ ಶಿವಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ನಮ್ಮ ಜನಾಂಗದ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಲೇ ಇದ್ದು, ಹಲವಾರು ವರ್ಷದಿಂದ ಸ್ಮಶಾನಕ್ಕೆ ಹೋಗಲು ಜಾಗವಿಲ್ಲದೇ ಗದ್ದೆ ಬಯಲಲ್ಲಿ ಹೊತ್ತು ಸಾಗುತ್ತಿದ್ದೆವು. ಸ್ಥಳೀಯರು ಇದನ್ನು ಕಂಡು ರಸ್ತೆಗೆ ಜಾಗ ನೀಡಿದರು. ಆದರೆ ಜಿಲ್ಲಾಡಳಿತದಿಂದ ಆಗಬೇಕಾಗಿರುವ ಕೆಲಸ ಆಗದೇ ನಮ್ಮ ಪರಿಸ್ಥಿತಿ ಶೋಚನೀಯವಾಗಿದೆ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ರಂಗೇಗೌಡ ಅವರು ಪ್ರತಿಭಟನಾಕಾರರ ಮನವಿ ಆಲಿಸಿದರು. ಬಳಿಕ ಮಾತನಾಡಿ, ಸ್ಮಶಾನಕ್ಕೆ ರಸ್ತೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. ಮುಖಂಡರಾದ ಗಿರಿಯಪ್ಪ, ಮರಿಯಪ್ಪ, ಶಿವಪ್ರಕಾಶ್, ಚನ್ನಪ್ಪ, ರಮೇಶ್, ಕುಮಾರ್, ಜಯರಾಮು, ಶಿವಣ್ಣ, ಮಹದೇವ, ಪ್ರಕಾಶ್, ಸುರೇಶ್, ಸಂದೀಪ್, ನಿತಿನ್, ರಾಜು, ಚಂದನ್, ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.