

ಬೆಂಗಳೂರು: ಕರೊನಾ ಸೋಂಕಿತರ ಮೇಲೆ ನಿಗಾವಹಿಸುವ ಕುರಿತಂತೆ ಏನಾದರೂ ಲೋಪಗಳಾದರೆ ಆ ವಲಯದ ಡಿಸಿಪಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಸಿದ್ದಾರೆ. ಸೀಲ್ಡೌನ್ ಪ್ರದೇಶ ದಲ್ಲಿ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ ದಂತೆ ಗೃಹ ಇಲಾಖೆ, ಬಿಬಿಎಂಪಿ, ಗೃಹರಕ್ಷಕ ದಳದ ಅಧಿಕಾರಿಗಳ ಜತೆ ಬುಧವಾರ ಮಹತ್ವದ ಸಭೆ ನಡೆಸಿದರು.
ಸಭೆಯಲ್ಲಿನ ನಿರ್ಣಯಗಳು ಜನದಟ್ಟಣೆ ಪ್ರದೇಶಕ್ಕೆ ಪೊಲೀಸರ ನಿಯೋಜನೆ ಹೋಂ ಕ್ವಾರಂಟೈನ್ ಮೇಲೆ ನಿಗಾ ಎನ್ಜಿಒಗಳಿಗೆ ಹೆಚ್ಚಿನ ಜವಾಬ್ದಾರಿ ಕಂಟೇನ್ವೆುಂಟ್ಗಳಲ್ಲಿ ಹಣ್ಣು, ಹಾಲು, ತರಕಾರಿ, ಔಷಧ ಸರಬರಾಜು ಅಬಾಧಿತ ಆಪ್ ಮೂಲಕ ಸಂಪರ್ಕ ರಾತ್ರಿ ಕರ್ಪ್ಯೂ ವೇಳೆ ಬಿಗಿ ಬಂದೋಬಸ್ತ್
ಮುಂದಿನ ದಿನಗಳಲ್ಲಿ ಹೋಂ ಕ್ವಾರಂಟೈನ್ ಮುಖ್ಯವಾಗುವುದರಿಂದ ಸಮಾಜವನ್ನು ಸೇರಿಸಿ ಕೊಂಡು ದೊಡ್ಡ ಪ್ರಮಾಣದಲ್ಲಿ ಮಾಡಲು ನಿರ್ಧರಿಸ ಲಾಗಿದೆ. ಸೀಲ್ಡೌನ್ ಪ್ರದೇಶದಲ್ಲಿ ಆಯಾ ಠಾಣೆಯ ಅಧಿಕಾರಿ ಮೇಲುಸ್ತುವಾರಿ ನಡೆಸಬೇಕು, ಅದಕ್ಕೆ ಗೃಹರಕ್ಷಕ ಸಿಬ್ಬಂದಿ, ಪಾಲಿಕೆ ಸಿಬ್ಬಂದಿ ಹಾಗೂ ಆಯಾ ಪ್ರದೇಶದ ನಾಗರಿಕರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಭೆಯ ನಂತರ ಸುದ್ದಿಗಾರರಿಗೆ ಸಚಿವರು ತಿಳಿಸಿದರು.
ವಿದೇಶದಿಂದ ಬರುವವರನ್ನು ಹೇಗೆ ಕ್ವಾರಂಟೈನ್ ಮಾಡಲಾಗಿತ್ತೋ ಅದೇ ರೀತಿಯಲ್ಲಿ ಈಗಲೂ ಬಿಗಿಯಾದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಕ್ವಾರಂಟೈನ್ಗೆ ಒಳಗಾದ ವ್ಯಕ್ತಿಯ ಮಾಹಿತಿ ಪೊಲೀಸ್, ಗೃಹರಕ್ಷಕ, ಸ್ಥಳೀಯ ಸಂಸ್ಥೆಗಳು, ಸ್ಥಳೀಯ ನಾಗರಿಕ ಸಂಘಟನೆಗಳಿಗೆ ಸಿಗುವಂತೆ ಮಾಡಲಾಗುತ್ತದೆ. ಈ ವ್ಯಕ್ತಿ ಅನಗತ್ಯವಾಗಿ ಓಡಾಡಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಕೆಲವೊಂದು ಆಪ್ ತರಲಾಗಿದೆ. ಅವುಗಳ ಮೂಲಕ ರೋಗಿಗೆ ಎಲ್ಲ ಸಹಕಾರ ನೀಡಲಾಗುತ್ತದೆ. ಆಸ್ಪತ್ರೆಗೆ ಸೇರಿಸುವುದು, ನಿಗಾ ವಹಿಸುವುದು, ಸೀಲ್ಡೌನ್ ಪ್ರದೇಶಕ್ಕೆ ಅಗತ್ಯ ಪೂರೈಕೆ ಜವಾಬ್ದಾರಿ ಈ ತಂಡದ ಮೇಲಿರುತ್ತದೆ ಎಂದು ಬೊಮ್ಮಾಯಿ ಹೇಳಿದರು.
ಕಟ್ಟುನಿಟ್ಟಾಗಿ ರಾತ್ರಿ ಕರ್ಪ್ಯೂ ಜಾರಿಗೆ ತರಲಾಗುತ್ತದೆ. ವ್ಯಾಪಕವಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗುತ್ತದೆ. 600 ಆಟೋಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ರಾತ್ರಿ 8 ಗಂಟೆಯ ನಂತರ ಓಡಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
60 ಸಾವಿರ ಜನ ನೋಂದಣಿ: ಸರ್ಕಾರದ ಜತೆ ಕೈಜೋಡಿಸಲು ಈಗಾಗಲೇ 60 ಸಾವಿರ ಜನ ಹೆಸರು ನೋಂದಣಿ ಮಾಡಿಸಿದ್ದಾರೆ. 13 ಸಾವಿರ ಸಿವಿಲ್ ಡಿಫೆನ್ಸ್ ಸಿಬ್ಬಂದಿಯನ್ನೂ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಬೊಮ್ಮಾಯಿ ತಿಳಿಸಿದರು. ಪೊಲೀಸ್ ಆಯುಕ್ತ ಭಾಸ್ಕರರಾವ್, ಬಿಬಿಎಂಪಿ ಆಯುಕ್ತ ಅನಿಲ್ಕುಮಾರ್, ಹಿರಿಯ ಅಧಿಕಾರಿಗಳಾದ ಸುನಿಲ್ ಅಗರವಾಲ್, ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.