ಕೆಂಪೇಗೌಡ ಬಡಾವಣೆಗೆ ಡಿಸಿಎಂ ಭೇಟಿ: ಮೂಲಸೌಕರ್ಯ ಕಲ್ಪಿಸದ ಬಿಡಿಎ ಕಾರ್ಯವೈಖರಿಗೆ ಅತೃಪ್ತಿ

dcm visit
Published on

ಬೆಂಗಳೂರು: ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲಸೌಕರ್ಯ ಕೊರತೆ ಉಂಟಾಗಿರುವ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರಾಧಿಕಾರದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಲೇಔಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಬಿಡಿಎ ಅಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದ ವೇಳೆ ಡಿಸಿಎಂಗೆ ಅಲ್ಲಿನ ವಾಸ್ತವ ಸ್ಥಿತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ಆದರೆ, ಹಾಲಿ ನಡೆದಿರುವ ಕಾಮಗಾರಿಯಿಂದ ಸೈಟ್ ಹಂಚಿಕೆದಾರರು, ಭೂಮಾಲೀಕರಿಗೆ ಹೆಚ್ಚಿನ ಅನುಕೂಲ ಆಗಿಲ್ಲ. ಇಲ್ಲಿನ ವ್ಯವಸ್ಥೆ ಬಗ್ಗೆ ನನಗಂತೂ ಸಮಾಧಾನ ಇಲ್ಲ ಎಂದು ಡಿಸಿಎಂ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಲೇಔಟ್‌ನಲ್ಲಿ ಸರ್ಕಾರದಿಂದ ಕೇವಲ ಶೇ.60 ಭೂಮಿ ಸ್ವಾಧೀನ ಆಗಿದೆ. ಪರಿಹಾರ ಕ್ರಮದ ಬಗ್ಗೆ ಕಂದಾಯ ಇಲಾಖೆ ಹಾಗೂ ಕಾನೂನು ತಜ್ಞರ ಜತೆ ಚರ್ಚೆ ಮಾಡಲಾಗುವುದು. ಸ್ಥಳೀಯ ಶಾಸಕರು ಕೂಡ ಅನೇಕ ಸಮಸ್ಯೆ ಹೇಳಿದ್ದಾರೆ. ಈ ಭಾಗದಲ್ಲಿ ವಿದ್ಯುತ್ ಸಂಪರ್ಕ, ಚರಂಡಿ, ಕುಡಿಯುವ ನೀರು ಪೂರೈಕೆ ಸೌಲಭ್ಯ ನೀಡಬೇಕೆಂದು ಕೇಳಿದ್ದಾರೆ. ನಿವೇಶನದಾರರು ಕೂಡ ಮೂಲಸೌಕರ್ಯ ಕೊರತೆಯಿಂದ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ ಎಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಮ್ಮದೇ ಆದ ಉತ್ತರ ನೀಡಿದ್ದರೂ, ಕಾಲಮಿತಿಯೊಳಗೆ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿರುವೆ ಎಂದರು.

ಕೆಂಪೇಗೌಡ ಲೇಔಟ್‌ನಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವಂತೆ ಜನರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಡಾವಣೆಗೆ ಭೇಟಿ ನೀಡಿದ್ದೇನೆ. ಇಲ್ಲಿನ ಜನರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಭೂಮಿ ಕಳೆದುಕೊಂಡವರು, ಅಪಾರ್ಟ್‌ಮೆಂಟ್, ನಿವೇಶನದಾರರು ಎಲ್ಲರಿಗೂ ನ್ಯಾಯ ಒದಗಿಸಿಕೊಡಬೇಕಿದೆ. ಸ್ಥಳವೀಕ್ಷಣೆ ಬಳಿಕ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುವುದು ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

ಇದೇ ವೇಳೆ ಕೆಂಪೇಗೌಡ ಬಡಾವಣೆ ಮಧ್ಯೆ ಹಾದುಹೋಗಲಿರುವ ಮುಖ್ಯ ಆರ್ಟಿರಿಯಲ್ ರಸ್ತೆ (ಎಂಎಆರ್) ಕಾಮಗಾರಿಯನ್ನು ಡಿಸಿಎಂ ವೀಕ್ಷಿಸಿದರು. ಲೇಔಟ್‌ಗೆ ಜಮೀನು ಬಿಟ್ಟುಕೊಟ್ಟಿರುವ ರೈತರು ಹಾಗೂ ಸೈಟ್ ಹಂಚಿಕೆದಾರರು ಡಿಸಿಎಂಗೆ ಮನವಿ ಸಲ್ಲಿಸಿ ಸಮಸ್ಯೆಗಳಿಗೆ ಪರಿಹಾರ ಕೋರಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಎಸ್.ಟಿ. ಸೋಮಶೇಖರ್, ನಗರಾಭಿವೃದ್ಧಿ ಇಲಾಖೆಯ ಎಸಿಎಸ್ ರಾಕೇಶ್ ಸಿಂಗ್, ಬಿಡಿಎ ಆಯುಕ್ತ ಜಿ. ಕುಮಾರ ನಾಯಕ್, ಅಭಿಯಂತರ ಸದಸ್ಯ ಡಾ.ಶಾಂತರಾಜಣ್ಣ, ಕಾರ್ಯದರ್ಶಿ ವೈ.ಬಿ. ಶಾಂತರಾಜು ಹಾಗೂ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕ್ಷೇತ್ರದ ಅಭಿವೃದ್ಧಿಗೆ ನೆರವಿನ ಭರವಸೆ:
ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಡಿಸಿಎಂ, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವತಿಯಿಂದ ಏನೆಲ್ಲಾ ಸಹಕಾರ ನೀಡಬೇಕೋ ಅದಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಭರವಸೆ ನೀಡಿದರು.

ಕೊಮ್ಮಘಟ್ಟ ಫ್ಲಾಟ್ಸ್​​​ ವೀಕ್ಷಣೆ:
ಕೆಂಪೇಗೌಡ ಲೇಔಟ್‌ಗೆ ಹೊಂದಿಕೊಂಡಿರುವ ಕೊಮ್ಮಘಟ್ಟದಲ್ಲಿ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ವೀಕ್ಷಿಸಿದರು. ನಾಗರಿಕರಿಗೆ ಕಡಿಮೆ ಬೆಲೆಗೆ ಫ್ಲಾಟ್ಸ್​​ ವಿತರಿಸಲಾಗುತ್ತಿದೆಯೆ ಅಥವಾ ಇಲ್ಲವೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net