ಇವಿಎಂ ಬಗ್ಗೆ ಡಿಸಿಎಂ ಡಿಕೆಶಿಗೆ ಅನುಮಾನ

DK Shivakumar
Published on

ಬೆಂಗಳೂರು: ಇವಿಎಂ (ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್) ವಿಚಾರವಾಗಿ ನನಗೂ ಕೆಲವು ಅನುಮಾನಗಳಿವೆ. ಈಗ ನಾನು ಆ ಬಗ್ಗೆ ಮಾತನಾಡುವುದಿಲ್ಲ. ನಾನು ಕೆಲವು ಅಂಕಿ ಅಂಶ ಕಲೆಹಾಕುತ್ತಿದ್ದು, ದಾಖಲೆ ಸಿಕ್ಕ ಬಳಿಕ ನಾನು ಈ ವಿಚಾರವಾಗಿ ಚರ್ಚೆ ಮಾಡುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಲೋಕಸಭೆ ಲಿತಾಂಶ ಪ್ರಕಟಗೊಂಡ ಬಳಿಕ ಡಿಸಿಎಂ ಈ ರೀತಿಯ ಅಚ್ಚರಿ ಅಭಿಪ್ರಾಯ ಹೊರಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಸಹೋದರನಿಗೆ ಸೋಲಾಗಿರುವ ಸಂಬಂಧ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ನಾನು ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ. ನಾನು ರಾಜ್ಯ ಸುತ್ತಬೇಕಾದ ಕಾರಣ ಹೆಚ್ಚು ಸಮಯ ಮೀಸಲಿಡಲು ಆಗಿಲ್ಲ. ಇದು ನನ್ನ ವೈಯಕ್ತಿಕ ಸೋಲು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅವರು ಕೂಡ ವಿವಾದರಹಿತ ಅಭ್ಯರ್ಥಿ ಕಣಕ್ಕಿಳಿಸುವ ಮೂಲಕ ಉತ್ತಮ ತಂತ್ರಗಾರಿಕೆ ಮಾಡಿದ್ದಾರೆ ಎಂದರು.
ಜೆಡಿಎಸ್ ಅಭ್ಯರ್ಥಿ ಕಣಕ್ಕೆ ಇಳಿದರೆ ಮತ ಬರುವುದಿಲ್ಲ ಎಂದು ಬಿಜೆಪಿಯಿಂದ ಟಿಕೆಟ್ ನೀಡಲಾಯಿತು. ಜೆಡಿಎಸ್ ಮತಗಳೂ ವರ್ಗಾವಣೆಯಾಗಿದೆ. ನಮ್ಮ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ ಇರಲಿಲ್ಲ. ಈಗ ಸೋಲು ಸೋಲೇ ಅದನ್ನು ಒಪ್ಪಿಕೊಳ್ಳುತ್ತೇವೆ. ಕನಕಪುರದಲ್ಲಿ 50-60 ಸಾವಿರ ಮುನ್ನಡೆ ಪಡೆಯುವ ನಿರೀಕ್ಷೆಯಿತ್ತು. ಮಾಗಡಿ, ಕುಣಿಗಲ್, ರಾಮನಗರದಲ್ಲಿ ನಮಗೆ ಮತ ಬಂದಿವೆ. ನಮಗೆ ಪೆಟ್ಟು ಬಿದ್ದಿದ್ದು ನಗರ ಪ್ರದೇಶದಲ್ಲಿ ಎಂದು ಹೇಳಿದರು.
ಮೈತ್ರಿ ಮೂಲಕ ಒಕ್ಕಲಿಗ ಹಾಗೂ ಲಿಂಗಾಯತ ಮತಗಳು ಒಗ್ಗೂಡಿವೆಯೇ ಎಂದು ಕೇಳಿದಾಗ, ಕಾಂಗ್ರೆಸ್ ವಿರೋಧಿ ಮತಗಳು ಒಂದಾಗಲಿವೆ ಎಂಬ ನಿರೀಕ್ಷೆ ಇತ್ತು ಎಂದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದಾಗ, ನಾವು ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನಾವು ಇನ್ನು ಸೋಲಿನ ದುಃಖದಿಂದ ಹೊರಬಂದಿಲ್ಲ. ಸಧ್ಯಕ್ಕೆ ಆ ಕ್ಷೇತ್ರದ ಜನ ನಮಗೆ ಕೊಟ್ಟಿರುವ ಮುನ್ನಡೆಗೆ ಧನ್ಯವಾದ ಅರ್ಪಿಸುತ್ತೇನೆ. ಸುರೇಶ್ ಅವರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುವ ಆತುರವಿಲ್ಲ. ಅಲ್ಲಿ ಅನೇಕ ಕಾರ್ಯಕರ್ತರಿದ್ದು, ಮುಂದೆ ನೋಡೋಣ ಎಂದು ಹೇಳಿದರು.
ದೇವೇಗೌಡರ ಕುಟುಂಬ ಹಾಗೂ ನಿಮ್ಮ ನಡುವಿನ ಪೈಪೋಟಿಯಲ್ಲಿ ಈ ಬಾರಿ ನಿಗಮೆ ಸೋಲಾಗಿದೆ, ಮುಂದೇನು ನಿಮ್ಮ ಕಾರ್ಯತಂತ್ರ ಎಂದು ಪ್ರಶ್ನಿಸಿದಾಗ, ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ, ಅನಿತಕ್ಕ, ನಿಖಿಲ್ ಎಲ್ಲರೂ ಸೋತಿದ್ದರು. ಈಗ ಸುರೇಶ್ ಸೋತಿದ್ದಾರೆ ಅಷ್ಟೇ ಎಂದರು.
ರಾಹುಲ್ ಗಾಂಧಿ ಅವರು ನ್ಯಾಯಾಲಯ ಹಾಗೂ ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಬಿಜೆಪಿ ನಾಯಕರಾದ ಯತ್ನಾಳ್ ಅವರೇ ಸಿಎಂ ಹುದ್ದೆಗೆ 2,500 ಕೋಟಿ ಹಾಗೂ ಮಾಧ್ಯಮಗಳಲ್ಲಿ ಬಂದಿದ್ದ ವರದಿ ಅನುಸಾರ ಸರ್ಕಾರಿ ಹುದ್ದೆಗೆ ಹಿಂದಿನ ಸರ್ಕಾರದ ರೇಟ್ ಕಾಡ್‌ರ್ಅನ್ನು ಜಾಹೀರಾತು ರೂಪದಲ್ಲಿ ಕೊಟ್ಟಿದ್ದೆವು. ಈ ವಿಚಾರದಲ್ಲಿ ರಾಹುಲ್ ಗಾಂಧಿ ಅವರಿಗೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಆದರೂ ಉದ್ದೇಶಪೂರ್ವಕವಾಗಿ ಅವರನ್ನು ಎಳೆದುತರಲಾಗಿದೆ ಎಂದು ಹೇಳಿದರು.
ಬಿಜೆಪಿಯವರಲ್ಲಿ ದ್ವೇಷ ಹಾಗೂ ಸೇಡು ತುಂಬಿ ತುಳುಕುತ್ತಿದೆ. ಹೀಗಾಗಿ ಸುಳ್ಳು ಪ್ರಕರಣ ದಾಖಲಿಸಿದ್ದು, ಅದಕ್ಕೆ ಈ ಪ್ರಕರಣವೇ ಉದಾಹರಣೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಆಗಮಿಸಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ. ಡಿ.ಕೆ. ಸುರೇಶ್ ಜಾಮೀನು ನೀಡಿದ್ದಾರೆ. ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬಂದು ಬೆಂಬಲ ನೀಡಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net