

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಭವಿಷ್ಯದಲ್ಲಿ ಇದರದೇ ಜಮಾನಾ...!
ಕೃಷಿ, ಬ್ಯಾಂಕಿಂಗ್, ಐಟಿ, ಇ-ಕಾಮರ್ಸ್ ಮುಂತಾದ ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜನ್ಸ್ (ಎಐ) ಈಗಾಗಲೇ ಬಳಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಣೆಯಾಗಲಿದೆ. ದಿನ ಬಳಕೆ ಉತ್ಪನ್ನ, ರಿಟೇಲ್, ಹೆಲ್ತ್ ಕೇರ್, ಸಾರಿಗೆ, ಶಿಕ್ಷಣ, ಉತ್ಪಾದನಾ ವಲಯ, ಆನ್ಲೈನ್ ಶಾಪಿಂಗ್, ಕಮ್ಯುನಿಕೇಶನ್, ಮಾಧ್ಯಮ, ಏರೋಸ್ಪೇಸ್... ಹೀಗೆ ನೂರಾರು ಕ್ಷೇತ್ರಗಳಿಗೆ ಭವಿಷ್ಯದಲ್ಲಿ ಎಐ ಲಗ್ಗೆ ಇಡಲಿದೆ. ಅದರಲ್ಲೂ ಜನಸಂಖ್ಯೆ ಹೆಚ್ಚಿರುವ ಭಾರತದಂತಹ ದೇಶದಲ್ಲಿ ಇದಕ್ಕೆ ಪ್ರಾಮುಖ್ಯತೆ ಹೆಚ್ಚು. ನೂರೆಂಟು ಹೊಸ ಉದ್ಯಮ, ಉದ್ಯೋಗ ಸೃಷ್ಟಿಯೂ ಇದರಿಂದ ಸಾಧ್ಯ. ರೋಬೊಟಿಕ್ ಪ್ರೊಸೆಸ್ ಆಟೋಮೇಷನ್ನಲ್ಲಿ ಇದು ಪರಿಣಾಮಕಾರಿ. ಮಾನವ ಹಸ್ತಕ್ಷೇಪವಿಲ್ಲದೆ ವೇಗ, ನಿಖರತೆ, ವೆಚ್ಚ ನಿಯಂತ್ರಣ ಇದರ ಪ್ಲಸ್ ಪಾಯಿಂಟ್ಸ್. ವಾಹನಗಳ ಸೆಲ್ಪ್ ಡ್ರೖೆವಿಂಗ್, ಲಾಜಿಸ್ಟಿಕ್ ಮತ್ತು ಡೆಲಿವರಿ ಕ್ಷೇತ್ರದಲ್ಲಿನ ಸಪ್ಲೈ ಚೈನ್ ಮ್ಯಾನೇಜ್ವೆುಂಟ್, ಡಿಮ್ಯಾಂಡ್ ಪ್ರಿಡಿಕ್ಷನ್, ನೆಟ್ವರ್ಕ್ ಮ್ಯಾನೇಜ್ವೆುಂಟ್, ಗ್ರಾಹಕಸೇವೆಯ ಹೊಸ ವಿಧಾನವಾದ ಚಾಕ್ ಬೂಟ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎಐ ಪಾರಮ್ಯ ಮೆರೆಯಲಿದೆ. ಇದು ಭವಿಷ್ಯದ ಚಿತ್ರಣವನ್ನೇ ಬದಲಿಸಬಲ್ಲ ಕ್ಷೇತ್ರ. ಹೀಗಾಗಿ ಈ ಕ್ಷೇತ್ರದಲ್ಲಿ ಶಿಕ್ಷಣ-ತರಬೇತಿ ಪಡೆದು, ಇದಕ್ಕೆ ಸಂಬಂಧಿಸಿದ ಉದ್ಯಮಗಳಲ್ಲಿ ಹೂಡಿಕೆ ಮಾಡುವುದು ಅತ್ಯಂತ ಲಾಭದಾಯಕ. ಉದ್ಯೋಗಾವಕಾಶಗಳೂ ಇದರಲ್ಲಿ ಹೆಚ್ಚು.
| ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಮುಖ್ಯಮಂತ್ರಿ