ಕಳೆದ ಆರ್ಥಿಕ ವರ್ಷದಲ್ಲಿ ಡಿಸಿಸಿಬಿಗೆ 36.75 ಕೋಟಿ ರೂ. ಲಾಭ

DCC Bank
Published on

ಶಿವಮೊಗ್ಗ: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ ಈ ಬಾರಿ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ರಾಜ್ಯದ ಉತ್ತಮ ಡಿಸಿಸಿ ಬ್ಯಾಂಕ್ ಪುರಸ್ಕಾರ ಪ್ರದಾನ ಮಾಡಲಾಗಿದೆ. ಇದು ಬ್ಯಾಂಕ್‌ನ ಸದಸ್ಯರು, ಜಿಲ್ಲೆಯ ಗ್ರಾಹಕರಿಗೆ ಸಿಕ್ಕ ಗೌರವ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಎ ದರ್ಜೆ ವರ್ಗೀಕರಣದಲ್ಲಿ ನಮ್ಮ ಬ್ಯಾಂಕ್‌ಗೆ ಈ ಗೌರವ ಸಿಕ್ಕಿದೆ. ಶಿವಮೊಗ್ಗ ಡಿಸಿಸಿ ಬ್ಯಾಂಕ್ 72 ವರ್ಷ ಪೂರೈಸಿದೆ. ಇದೇ ಮೊದಲ ಬಾರಿಗೆ ಕಳೆದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಅತಿ ಹೆಚ್ಚು 36.75 ಕೋಟಿ ರೂ. ಲಾಭ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ 45 ಕೋಟಿ ರೂ. ಲಾಭ ಗಳಿಕೆಯ ಗುರಿ ಹೊಂದಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿವಿಧ ಡಿಸಿಸಿ ಬ್ಯಾಂಕ್‌ಗಳಿಗೆ ಕೆಲ ಸಚಿವರು, ಶಾಸಕರು ಅಧ್ಯಕ್ಷರಾಗಿದ್ದಾರೆ. ಅಲ್ಲಿ ಹೊಸದಾಗಿ ರೈತ ಸದಸ್ಯರಿಗೆ ಕೃಷಿ ಸಾಲ ನೀಡಲಾಗುತ್ತಿಲ್ಲ. ಆದರೆ ನಮ್ಮ ಬ್ಯಾಂಕ್‌ನಿಂದ ಪ್ರತಿ ವರ್ಷ ಹೊಸದಾಗಿ ಕೃಷಿ ಸಾಲ ನೀಡಲಾಗುತ್ತಿದೆ. ರಾಜ್ಯ, ಕೇಂದ್ರ ಸರ್ಕಾರ, ಅಪೆಕ್ಸ್ ಬ್ಯಾಂಕ್ ಸಹಾಯವಿಲ್ಲದೆ ಅತಿ ಹೆಚ್ಚು ಕೃಷಿ ಸಾಲ ನೀಡುತ್ತಿರುವುದು ಬ್ಯಾಂಕ್‌ನ ಹೆಗ್ಗಳಿಕೆ ಎಂದರು.

ಹೈನುಗಾರರಿಗೆ ಪ್ರತಿ ಘಟಕ ನಿರ್ಮಾಣಕ್ಕೆ 60 ಸಾವಿರ ರೂ.ನಂತೆ ಗರಿಷ್ಠ ಎರಡು ಘಟಕ ನಿರ್ಮಾಣಕ್ಕೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ನೀಡಲಾಗುತ್ತದೆ. ಜಾನುವಾರುಗಳ ನಿರ್ವಹಣೆಗೆ ಪ್ರತಿ ವರ್ಷ 18 ಸಾವಿರ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಯೋಜನೆಯಂತೆ ಶೂನ್ಯ ಬಡ್ಡಿ ದರದಲ್ಲಿ ಪಶುಸಂಗೋಪನೆ ಉದ್ದೇಶಕ್ಕಾಗಿ 514 ಸದಸ್ಯರಿಗೆ 1.05 ಕೋಟಿ ರೂ. ಸಾಲ ವಿತರಿಸಲಾಗಿದೆ. ಜತೆಗೆ ವಾಣಿಜ್ಯ, ವಾಹನ, ಕಟ್ಟಡ, ಮನೆ ನಿರ್ಮಾಣಕ್ಕೂ ಸಾಲ ನೀಡಲಾಗುವುದು. ಕೃಷಿ ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಓರ್ವ ರೈತನಿಗೆ ಗರಿಷ್ಠ 60 ಲಕ್ಷ ರೂ. ಸಾಲ ನೀಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಶಿಕ್ಷಣ ಸಾಲವನ್ನೂ ನೀಡುವ ಚಿಂತನೆಯಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಜಿ.ಎನ್.ಸುಧೀರ್, ಕೆ.ಪಿ.ದುಗ್ಗಪ್ಪ ಗೌಡ, ಮಹಾಲಿಂಗಯ್ಯ ಶಾಸ್ತ್ರಿ, ಎಂ.ಎಂ.ಪರಮೇಶ್, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net