ಇದೇ ತಿಂಗಳು ಡಿಸಿಸಿ ಬ್ಯಾಂಕ್ ಮೂರು ಶಾಖೆ ಕಾರ್ಯಾರಂಭ

dcc bank president R.M. Manjunathagowda
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ
Published on

ಶಿವಮೊಗ್ಗ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಮೂರು ನೂತನ ಶಾಖೆಗಳನ್ನು ಡಿಸೆಂಬರ್‌ನಲ್ಲಿ ತೆರೆಯಲಾಗುವುದು. ಡಿ.6ರಂದು ಸೊರಬ ತಾಲೂಕಿನ ಜಡೆ 29ನೇ, 12ರಂದು ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪದಲ್ಲಿ 30ನೇ ಮತ್ತು 18ರಂದು ಭದ್ರಾವತಿ ತಾಲೂಕು ಕಲ್ಲಿಹಾಳ್‌ನಲ್ಲಿ 31ನೇ ನೂತನ ಶಾಖೆ ಕಾರ್ಯಾರಂಭವಾಗಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಜಿಲ್ಲಾದ್ಯಂತ 22 ಶಾಖೆ ತೆರೆಯುವ ಸಂಬಂಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೂರು ಶಾಖೆಗಳಿಗೆ ಅನುಮತಿ ಸಿಕ್ಕಿದೆ. ಉಳಿದವುಗಳಿಗೆ 2025ರಲ್ಲಿ ತೆರೆಯಲು ಅನುಮತಿ ಸಿಗುವ ನಿರೀಕ್ಷೆ ಇದೆ. ಚಳಿಗಾಲದ ಅಧಿವೇಶನದ ಮುಕ್ತಾಯದ ಬಳಿಕ ಮೂರು ಶಾಖೆಗಳನ್ನೂ ಅಧಿಕೃತವಾಗಿ ಉದ್ಘಾಟಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಬಾರ್ಡ್ ನೆರವು ಬೇಕಿಲ್ಲ

ನಬಾರ್ಡ್ ಪುನರ್ಧನ ಸೌಲಭ್ಯ ಕಡಿತದ ಹೊರತಾಗಿಯೂ 20224-25ರಲ್ಲಿ ಶೂನ್ಯ ಬಡ್ಡಿ ದರದಲ್ಲಿ 1.20 ಲಕ್ಷ ರೈತರಿಗೆ 1,200 ಕೋಟಿ ರೂ. ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿಯಿದೆ. ಪ್ರಸ್ತುತ 1,05,500 ರೈತರಿಗೆ 1,180.12 ಕೋಟಿ ರೂ. ಸಾಲ ನೀಡಲಾಗಿದೆ. ಸಾಲ ವಸೂಲಾತಿ ಶೇ.99.07ರಷ್ಟಿದೆ ಎಂದು ಮಂಜುನಾಥ ಗೌಡ ಹೇಳಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ಗೆ ನಬಾರ್ಡ್ ನೆರವು ಬೇಕಿಲ್ಲ. ನಾವೇ 1,180 ಕೋಟಿ ರೂ. ಸಾಲವನ್ನು ರೈತರಿಗೆ ಕೊಟ್ಟಿದ್ದೇವೆ. ನಬಾರ್ಡ್ 135 ಕೋಟಿ ರೂ. ಪುನರ್ಧನ ನೀಡುವುದಾಗಿ ಹೇಳಿ ಕೇವಲ 35 ಕೋಟಿ ರೂ. ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವೇ ಕಳೆದೊಂದು ವರ್ಷದಿಂದ 23 ಕೋಟಿ ರೂ. ಮತ್ತು ಕೇಂದ್ರ ಸರ್ಕಾರ ನಾಲ್ಕೈದು ವರ್ಷಗಳಿಂದ 61 ಕೋಟಿ ರೂ. ಸಹಾಯಧನ ಬಾಕಿ ಉಳಿಸಿಕೊಂಡಿದೆ. ರೈತರ ಬದುಕಿಗೆ ಆರ್ಥಿಕ ನೆರವು ನೀಡಬೇಕಿದ್ದ ನಬಾರ್ಡ್ ಯಾಕೆ ಹಿಂದೆ ಸರಿಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಹೆಚ್ಚಿನ ಅನುದಾನ ಬಿಡುಗಡೆ ಸಂಬಂಧ ಸಿದ್ದರಾಮಯ್ಯ ಸರ್ಕಾರ ಸರಿಯಾದ ಹೆಜ್ಜೆ ಇಟ್ಟಿದೆ ಎಂದರು.

ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಕೆ.ಪಿ.ದುಗ್ಗಪ್ಪ ಗೌಡ, ಮಹಾಲಿಂಗ ಶಾಸ್ತ್ರಿ, ಜಿ.ಎನ್.ಸುಧೀರ್, ಸಿ.ಹನುಮಂತಪ್ಪ, ಟಿ.ಶಿವಶಂಕರಪ್ಪ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ, ಮುಖ್ಯ ಕಾರ್ಯನಿರ್ವಾಹಕಿ ಎಚ್.ಅನ್ನಪೂರ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net