ಅಭಿವೃದ್ಧಿ ಸಹಿಸದೆ ಪಟ್ಟಭದ್ರರಿಂದ ಅಪಪ್ರಚಾರ: ಡಿಸಿಸಿ ಬ್ಯಾಂಕ್ ನಿರ್ದೇಶಕ ಅನಿಲ್‌ಕುಮಾರ್ ಹೇಳಿಕೆ

Published on

ಕೋಲಾರ: ರೈತರು, ಮಹಿಳೆಯರ ಆರ್ಥಿಕ ಸದೃಢತೆಗೆ ಸಂಕಲ್ಪ ತೊಟ್ಟಿರುವ ಡಿಸಿಸಿ ಬ್ಯಾಂಕ್ ಅಭಿವೃದ್ಧಿ ಸಹಿಸಲಾಗದೆ ಅಪಪ್ರಚಾರ ನಡೆಸುತ್ತಿರುವ ಪಟ್ಟಭದ್ರ ಹಿತಾಸಕ್ತರಿಗೆ ಪಾಠ ಕಲಿಸಲು ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಹೇಳಿದರು.

ಬ್ಯಾಂಕಿನ ನಗರ ಶಾಖೆ ಆವರಣದಲ್ಲಿ ತಾಲೂಕು ವ್ಯಾಪ್ತಿಯ 15 ಮಹಿಳಾ ಸ್ವಸಹಾಯ ಸಂಘಗಳಿಗೆ ಗುರುವಾರ 75 ಲಕ್ಷ ರೂ. ಬಡ್ಡಿರಹಿತ ಸಾಲದ ಚೆಕ್ ವಿತರಿಸಿ ಮಾತನಾಡಿ, ದೇಶದಲ್ಲೇ ಅತಿ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡುವ ಮೂಲಕ ಮೀಟರ್ ಬಡ್ಡಿ ದಂಧೆಯಿಂದ ಪಾರು ಮಾಡಿದ ಹೆಗ್ಗಳಿಕೆ ಡಿಸಿಸಿ ಬ್ಯಾಂಕಿನದ್ದು. ಆದರೆ ಇದನ್ನು ಸಹಿಸಲು ಕೆಲವರಿಗೆ ಸಾಧ್ಯವಾಗುತ್ತಿಲ್ಲ, ಇಂತಹವರಿಗೆ ಮಹಿಳೆಯರು ಪಾಠ ಕಲಿಸಬೇಕು ಎಂದರು.

6 ವರ್ಷಗಳ ಹಿಂದೆ ಡಿಸಿಸಿ ಬ್ಯಾಂಕ್ ದಿವಾಳಿಯಾಗಿ ಅಸ್ತಿತ್ವ ಕಳೆದುಕೊಂಡು ಬೆಂಗಳೂರು ಡಿಸಿಸಿ ಬ್ಯಾಂಕಿನಲ್ಲಿ ವಿಲೀನಗೊಳ್ಳುವ ಮಟ್ಟಕ್ಕೆ ಹೋಗಿತ್ತು. ಅಂತಹ ಸಂದರ್ಭದಲ್ಲಿ ಬ್ಯಾಂಕಿಗೆ ಮರುಜೀವ ನೀಡಿದ ಬ್ಯಾಲಹಳ್ಳಿ ಗೋವಿಂದಗೌಡ ಅಧ್ಯಕ್ಷರಾದ ಮೇಲೆ ಯಾವುದೇ ಕಪ್ಪು ಚುಕ್ಕೆ ಬರದಂತೆ ಎಚ್ಚರಿಕೆಯಿಂದ ಆಡಳಿತ ನಿರ್ವಹಿಸುವ ಮೂಲಕ ರಾಜ್ಯದಲ್ಲಿ ನಂ 1 ಸ್ಥಾನ ಪಡೆದಿದೆ ಎಂದರು.

ಮಹಿಳೆಯರೇ ಬ್ಯಾಂಕಿನ ಶಕ್ತಿ. ಅವರ ವಿಶ್ವಾಸದಿಂದ 350 ಕೋಟಿ ರೂ. ಠೇವಣಿ ಹರಿದು ಬಂದಿದೆ. ನಬಾರ್ಡ್ ನೆರವಿನಿಂದ 6 ಲಕ್ಷ ಮಹಿಳೆಯರಿಗೆ 1000 ಕೋಟಿ ರೂ. ಸಾಲ ನೀಡಲಾಗಿದೆ. ಠೇವಣಿ ಹಣವು 350 ರಿಂದ 500 ಕೋಟಿ ರೂ.ವರೆಗೆ ಏರಿಕೆಯಾಗಬೇಕು. ಅದಕ್ಕಾಗಿ ಮಹಿಳೆಯರು ಉಳಿತಾಯ ಖಾತೆಗಳನ್ನು ಡಿಸಿಸಿ ಬ್ಯಾಂಕಿನಲ್ಲೇ ಇಡಬೇಕು ಎಂದರು.

ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಪಡೆದ ಸಾಲವು ನಿಮ್ಮ ಮನೆಗಳಲ್ಲಿ ಮತ್ತಷ್ಟು ಸಂತೃಪ್ತಿ, ಸ್ವಾವಲಂಬಿ ಬದುಕಿಗೆ ಆಸರೆಯಾಗಲಿ. ಮಹಿಳೆಯರು ಸಂಘದಲ್ಲಿನ ಉಳಿತಾಯದ ಜತೆಗೆ ಕುಟುಂಬದ ಎಲ್ಲ ವಹಿವಾಟುಗಳನ್ನು ಇದೇ ಬ್ಯಾಂಕಿನಲ್ಲಿ ಮುಂದುವರಿಸಿದರೆ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಕಸಬಾ ಸೊಸೈಟಿ ಅಧ್ಯಕ್ಷ ಚೋಳಘಟ್ಟ ಶ್ರೀನಿವಾಸ್, ವಡಗೂರು ಸೊಸೈಟಿಯ ರಮೇಶ್, ಉತ್ತನೂರು ನಾರಾಯಣಸ್ವಾಮಿ, ನಗರ ಶಾಖೆ ವ್ಯವಸ್ಥಾಪಕ ಅಂಬರೀಷ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net