

ರಾಮನಗರ : ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 200-250 ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದು, ಹಿಂದಿನ ದಿನಗಳಿಗೆ ಹೋಲಿಕೆ ಮಾಡಿದರೆ ಸೋಂಕು ಇಳಿಮುಖವಾಗಿರುತ್ತದೆ. ಆದರೆ ಸೋಂಕು ಸಂಪೂರ್ಣವಾಗಿ ಹೋಗಿಲ್ಲ. ಯಾವ ಸಮಯದಲ್ಲೂ ಬೇಕಾದರೂ ಹೆಚ್ಚಳವಾಗಬಹುದು. ಸಾರ್ವಜನಿಕರು ಮರೆಯದೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಜರ್ ಬಳಸುವುದನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಜೂ.7ವರೆಗೆ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿದಿನ 1600-1700 ಕೋವಿಡ್ ಪರೀಕ್ಷೆ : ಜಿಲ್ಲೆಯಲ್ಲಿ ಪ್ರತಿದಿನ 1600-1700 ಕೋವಿಡ್ ಪರೀಕ್ಷೆ ನಡೆಸಿ 16ರಿಂದ 18 ಗಂಟೆಯೊಳಗೆ ವರದಿ ನೀಡಲಾಗುತ್ತಿದೆ. ಕೋವಿಡ್ ಪರೀಕ್ಷೆಗೆ ಸಂಬಂಧಿಸಿದಂತೆ ವೈದ್ಯಕೀಯ ಪರಿಕರ ಹಾಗೂ ಸಿಬ್ಬಂದಿ ಸಮಸ್ಯೆ ಇಲ್ಲ. ಶೇ.30ರಷ್ಟು ಮಾತ್ರ ರ‌್ಯಾಪಿಡ್ ಆ್ಯಂಟಿಜನ್ ಪರೀಕ್ಷೆ ಮಾಡಲಾಗುತ್ತಿದೆ ಎಂದು ರಾಕೇಶ್‌ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ಕಡಿಮೆ ಮಾಡಲಾಗಿದ್ದು, ಕೋವಿಡ್ ಕೇರ್ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಪ್ರತಿ ತಾಲೂಕಿನಲ್ಲಿ 4-5 ಕೋವಿಡ್ ಕೇಂದ್ರಗಳನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ದಾನಿಗಳೂ ಆಹಾರ ಒದಗಿಸುತ್ತಿದ್ದಾರೆ. ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಿಂದ ಜಿಲ್ಲೆಗೆ 44 ಔಟ್ ಸರ್ಜನ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರ ಸೇವೆ ಪಡೆದು ಗ್ರಾಮಗಳಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತಿದೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾನ್ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
9 ಬ್ಲಾಕ್ ಂಗಸ್ ಪ್ರಕರಣ: ಜಿಲ್ಲೆಯಲ್ಲಿ 9 ಬ್ಲಾಕ್ ಂಗಸ್ ಪ್ರಕರಣ ವರದಿಯಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ 2, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ 2, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 4 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬರು ಗುಣಮುಖರಾಗಿದ್ದಾರೆ ಎಂದರು.
ಜಿಪಂ ಸಿಇಒ ಇಕ್ರಂ, ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್ ಹಾಗೂ ಆರ್‌ಸಿಎಚ್‌ಒ ಡಾ.ಪದ್ಮಾ ಉಪಸ್ಥಿತರಿದ್ದರು.
ಬೆಡ್, ಲಸಿಕೆ ಕೊರತೆ ಇಲ್ಲ : ಹೊಸ ಜಿಲ್ಲಾಸ್ಪತ್ರೆಯಲ್ಲಿ 125 ಆಕ್ಸಿಜನೇಟರ್ ಬೆಡ್ ವ್ಯವಸ್ಥೆ ಇದ್ದು, ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಂದಾಯ ಭವನದಲ್ಲಿರುವ ಕೋವಿಡ್ ರೆಫರಲ್ ಆಸ್ಪತ್ರೆಯಲ್ಲಿ 165 ಬೆಡ್‌ಗಳಿವೆ. ಕೆಲವು ವೈದ್ಯಕೀಯ ಸಲಕರಣೆಗಳು ಸರಬರಾಜು ಆಗಬೇಕಿದ್ದು, ತಕ್ಷಣದಲ್ಲೇ ಪ್ರಾರಂಭಿಸಲಾಗುವುದು ಜಿಲ್ಲೆಯಲ್ಲಿ 26 ಐಸಿಯು ಹಾಗೂ 16 ವೆಂಟಿಲೇಟರ್ ಬೆಡ್‌ಗಳು ಖಾಲಿ ಇದ್ದು, ಬೆಡ್‌ಗಳ ಸಮಸ್ಯೆ ಇಲ್ಲ ಎಂದರು. ಜಿಲ್ಲೆಯಲ್ಲಿ ಲಸಿಕೆಯ ಕೊರತೆ ಇಲ್ಲ ಕೋವ್ಯಾಕ್ಸಿನ್ ಲಸಿಕೆಯನ್ನು ಎರಡನೇ ಡೋಸ್‌ಗೆ ಮಾತ್ರ ಉಪಯೋಗಿಸಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳು, ವಾಹನ ಚಾಲಕರು, ಕಟ್ಟಡ ಕಾರ್ಮಿಕರು ಮುಂತಾದ ಆದ್ಯತಾ ವಲಯದ 18ರಿಂದ 44 ವರ್ಷದೊಳಗಿನವರಿಗೆ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತಿದೆ ಎಂದು ರಾಕೇಶ್ ಕುಮಾರ್ ತಿಳಿಸಿದರು.