

ಶ್ರೀರಂಗಪಟ್ಟಣ: ಪಟ್ಟಣದ ತಾಲೂಕು ಕಚೇರಿಗೆ ಧಿಡೀರನೆ ಜಿಲ್ಲಾಧಿಕಾರಿ ಡಾ.ಕುಮಾರ ಭೇಟಿ ನೀಡಿ ಕಡತಗಳ ಪರಿಶೀಲನೆಯೊಂದಿಗೆ ಸ್ಥಳದಲ್ಲಿ ನೆರೆದಿದ್ದ ಸಾರ್ವಜನಿಕರ ಮನವಿ ಆಲಿಸಿ ಅಹವಾಲು ಸ್ವೀಕರಿಸಿದರು. ಅಲ್ಲದೆ ಶೀಘ್ರವೇ ಸ್ವೀಕೃತ ಅಹವಾಲುಗಳ ಇತ್ಯರ್ಥಪಡಿಸುವಂತೆ ತಹಸೀಲ್ದಾರ್ ಚೇತನಾ ಯಾದವ್ ಅವರಿಗೆ ಸೂಚನೆ ನೀಡಿದರು.
ತಾಲೂಕು ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅವರು ಟಪಾಲು ವಿಭಾಗದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಇ-ಆಫೀಸ್ ಮೂಲಕವೇ ನಿರ್ವಹಿಸಬೇಕು ಎಂದು ತಾಕೀತು ಮಾಡಿದ ಅವರು, ಪ್ರಸ್ತುತ ಕಚೇರಿಯಲ್ಲಿ ಒಟ್ಟು 118 ಅರ್ಜಿಗಳು ಉಳಿದಿದ್ದು, ಅವುಗಳಲ್ಲಿ 42 ಅರ್ಜಿಗಳು 30 ದಿನಗಳ ಮೇಲ್ಪಟ್ಟಿದ್ದ ಹಿನ್ನೆಲೆಯಲ್ಲಿ ಅಂತಹ ಅರ್ಜಿಗಳನ್ನು ಸಂಬಂಧಪಟ್ಟ ವಿಷಯ ನಿರ್ವಾಹಕರಿಗೆ ನೀಡುವಂತೆ ಹಾಗೂ ಕಡತಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗುವಲ್ಲಿ ಕ್ರಮವಹಿಸುವಂತೆ ತಹಸೀಲ್ದಾರ್ ಹಾಗೂ ಸಂಬಂಧಿಸಿದ ವಿಭಾಗದ ಶಿರಸ್ತೇದಾರ್ ಅವರಿಗೆ ಸೂಚನೆ ನೀಡಿದರು.
ನಂತರ ಕಚೇರಿಯ ಎಲ್ಲ್ಲ ಶಾಖೆಗಳಿಗೂ ಭೇಟಿ ನೀಡಿದ ಅವರು ಅರ್ಜಿ ಹಾಗೂ ಕಡತಗಳನ್ನು ಇ-ಆಫೀಸ್ ನಲ್ಲಿಯೇ ನಿಗದಿತ ಕಾಲ ಮಿತಿಯೊಳಗೆ ಮಂಡಿಸಿ ಇತ್ಯರ್ಥಪಡಿಸುವಲ್ಲಿ ಕ್ರಮವಹಿಸುವಂತೆ ನೌಕರರಿಗೆ ಸೂಚಿಸಿದರು.
ಮೇಲ್ಮಹಡಿಯಲ್ಲಿದ್ದ ತಾಲೂಕಿನ ಉಪ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿದ ಅವರು ಸ್ವೀಕೃತವಾದ ಅರ್ಜಿಗಳಿಗೆ ನಿಯಮಿತ ಕಾಲಾವಧಿಯಲ್ಲಿ, ಸಾರ್ವಜನಿಕರನ್ನು ಪದೇ ಪದೆ ಕಚೇರಿಗೆ ಅಲೆಯದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಉಪ ನೋಂದಣಾಧಿಕಾರಿಗೆ ಸೂಚನೆ ನೀಡಿದರು. ಸಾರ್ವಜನಿಕರ ಅನಗತ್ಯ ಅಲೆದಾಟಕ್ಕೆ ಆಸ್ಪದ ನೀಡದೆ, ತುರ್ತಾಗಿ ಅರ್ಜಿಗಳ ವಿಲೇವಾರಿಯಲ್ಲಿ ಕ್ರಮವಹಿಸುವಂತೆ ಕಚೇರಿ ಅಧಿಕಾರಿ, ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ರಾಜಸ್ವ ನೀರಿಕ್ಷಕ ರೇವಣ್ಣ, ಸಿಬ್ಬಂದಿ ಸೋಮು ಹಾಜರಿದ್ದರು.