

ಮಂಡ್ಯ: ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 85 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಅಂತೆಯೇ 62 ಬಾಲ್ಯವಿವಾಹ ನಡೆದಿದ್ದು, ಇದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಕ್ಷರತೆ ಪ್ರಮಾಣ ಹೆಚ್ಚಿರುವ ಜಿಲ್ಲೆಯಲ್ಲೂ ಬಾಲ್ಯವಿವಾಹ ಪ್ರಕರಣಗಳು ಕಂಡು ಬರುತ್ತಿರುವುದು ಯೋಚಿಸುವ ಸಂಗತಿಯಾಗಿದೆ. ಆದ್ದರಿಂದ ಜಾಥಾ, ಜಾಗೃತಿ ಕಾರ್ಯಕ್ರಮಗಳ ಜೊತೆಯಲ್ಲಿ ಬಾಲ್ಯವಿವಾಹ ತಡೆಗಟ್ಟಲು ಹೊಸ ತಂತ್ರ ರೂಪಿಸಬೇಕಿದೆ ಎಂದರು.
ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಚಿಕಿತ್ಸೆ ನೀಡುವ ಎನ್‌ಆರ್‌ಸಿ(ಪೌಷ್ಟಿಕ ಪುನಶ್ಚೇತನ ಕೇಂದ್ರ) ಜಿಲ್ಲಾ ಮಟ್ಟದಲ್ಲಿದೆ. ಇದರಿಂದಾಗಿ ದೂರದ ತಾಲೂಕಿನಲ್ಲಿರುವವರು ಜಿಲ್ಲಾ ಕೇಂದ್ರಕ್ಕೆ ಬರುವುದು ಕಷ್ಟಕರವಾಗಿದೆ. ಆದ್ದರಿಂದ ತಾಲೂಕು ಕೇಂದ್ರದಲ್ಲಿಯೇ ಎನ್‌ಆರ್‌ಸಿ ಕೇಂದ್ರ ತೆರೆಯಬೇಕು. ತೀವ್ರ ಅಪೌಷ್ಟಿಕತೆಗೆ ಒಳಗಾದ ಮಕ್ಕಳು ಕಡ್ಡಾಯವಾಗಿ ಎನ್‌ಆರ್‌ಸಿ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಜಿಲ್ಲೆಯಲ್ಲಿ 2023ರ ಜನವರಿಯಿಂದ ಜೂನ್‌ವರೆಗೆ 99 ತೀವ್ರ ಅಪೌಷ್ಟಿಕ ಮಕ್ಕಳು, 1465 ಸಾಧಾರಣ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ ನಿಯಮಿತವಾಗಿ ತೂಕ ಮತ್ತು ಸ್ಕ್ರೀನಿಂಗ್ ಮಾಡುವಂತೆ ತಿಳಿಸಿದರು.
ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಪುಷ್ಠಿ ಪೌಡರ್‌ನ ಉಪಯುಕ್ತತೆ ಬಗ್ಗೆ ಪಾಲಕರಿಗೆ ತಿಳಿಸಿ. ಪುಷ್ಠಿ ಪೌಡರ್ ಅನ್ನು ಮಕ್ಕಳಿಗೆ ನೀಡದೇ ಬೇರೆ ಅವರು ಉಪಯೋಗಿಸದಂತೆ ನೋಡಿಕೊಳ್ಳಿ. ಕಾಂಪೌಂಡ್ ಇರುವ ಅಂಗನವಾಡಿ ಕಟ್ಟಡಗಳಲ್ಲಿ ಕೈ ತೋಟ ಮಾಡಲು ತೋಟಗಾರಿಕೆ ಇಲಾಖೆ ಹಾಗೂ ನರೇಗಾ ಯೋಜನೆಯನ್ನು ಬಳಸಿಕೊಳ್ಳಿ. ಅಂಗನವಾಡಿ ಸಹಾಯಕರು ಕೈ ತೋಟವನ್ನು ಉತ್ತಮವಾಗಿ ನಿರ್ವಹಿಸುವಂತೆ ಪ್ರೇರೆಪಿಸಿ. ಜಿಲ್ಲೆಯಲ್ಲಿ 4 ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಮಹಿಳೆಯರಿಗೆ ನೀಡಲಾಗುತ್ತಿರುವ ಆಹಾರ ಮತ್ತು ಇನ್ನಿತರ ಮೂಲ ವ್ಯವಸ್ಥೆಗಳನ್ನು ಪರಿಶೀಲಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ವರದಿ ನೀಡುವುದು ಇದರೊಂದಿಗೆ ವಸತಿ ನಿಲಯಗಳಲ್ಲಿರುವ ಮಹಿಳೆಯರಿಂದಲೂ ಸಹ ವರದಿ ಪಡೆಯುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಬಾಲ್ಯವಿವಾಹ ನಡೆಯದಂತೆ ನೋಡಿಕೊಳ್ಳಲು ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಸ್ಥಳೀಯ ಅಧಿಕಾರಿಗಳು ಹಾಗೂ ಮುಖಂಡರನ್ನು ಹೆಚ್ಚು ತೊಡಗಿಸಿಕೊಳ್ಳಬೇಕು. ಬಾಲ್ಯವಿವಾಹ ಹೆಚ್ಚು ನಡೆಯುತ್ತಿರುವ ಸ್ಥಳಗಳನ್ನು ಗುರುತಿಸಿ ಕಾರಣದ ಬಗ್ಗೆ ತಿಳಿದುಕೊಂಡು ಪರಿಹಾರದ ನಿಟ್ಟಿನಲ್ಲಿ ಚಿಂತಿಸಿ. ಇದಕ್ಕೆ ಬೇಕಿರುವ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಒದಗಿಸಲಿದೆ ಎಂದರು.
ವರದಕ್ಷಿಣೆ ನಿಷೇಧ ಕಾಯ್ದೆಯಡಿ 2022 ಜನವರಿಯಿಂದ ಡಿಸೆಂಬರ್‌ರವರೆಗೆ 65 ಪ್ರಕರಣಗಳು ದಾಖಲಾಗಿ 58 ಪ್ರಕರಣಗಳು ಇತ್ಯರ್ಥಗೊಂಡು 5 ಪ್ರಕರಣಗಳ ಇತ್ಯರ್ಥ ಬಾಕಿ ಇದೆ ಎಂದು ವರದಿ ನೀಡಲಾಗಿದೆ. ಇತ್ಯರ್ಥವಾದ ನಂತರ ಯಾವುದೇ ರೀತಿಯ ತೊಂದರೆ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು ಮುಖ್ಯ. ಪ್ರಕರಣವಾರು ಮಾಹಿತಿಯನ್ನು ಸಿದ್ಧಪಡಿಸಿ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಎಸ್.ರಾಜಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸಿದ್ದಲಿಂಗೇಶ್, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಇತರರಿದ್ದರು.