ಸ್ವಚ್ಛತೆಗೆ ಆದ್ಯತೆ ನೀಡಲು ಡಿಸಿ ಸೂಚನೆ

dc visit
ಕೋಲಾರ ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಮೀಪದ ರಾಜಕಾಲುವೆಯನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಭಾನುವಾರ ವೀಕ್ಷಿಸಿದರು.
Published on

ಕೋಲಾರ: ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರು ಕಸ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದರು.

ಶನಿವಾರ ರಾತ್ರಿ ಕೆಇಬಿ ರಸ್ತೆ, ಎಂಬಿ ರಸ್ತೆ, ಬಂಗಾರಪೇಟೆ ರಸ್ತೆ ಸೇರಿ ಪ್ರಮುಖ ಬೀದಿಗಳಲ್ಲಿ ಸಿಸಿಎಂಎಸ್ ಯೋಜನೆಯಡಿ ಅಳವಡಿಸಲಾಗಿರುವ ಎಲ್‌ಇಡಿ ಬೀದಿ ದೀಪಗಳ ಕಾರ್ಯನಿರ್ವಹಣೆ ಹಾಗೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಉರಿಯದೆ ಇರುವ ಬೀದಿದೀಪಗಳನ್ನು ಸರಿಪಡಿಸಬೇಕು, ಮಳೆಗಾಲ ಆರಂಭವಾಗಿರುವುದರಿಂದ ಸಣ್ಣ ಪುಟ್ಟ ಬಾಕಿ ಕಾಮಗಾರಿಗಳನ್ನು ಬೇಗ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭಾನುವಾರ ಕೆಪಿಟಿಸಿಎಲ್ ಕಚೇರಿ ಹಿಂಭಾಗ, ಬೈಪಾಸ್ ರಸ್ತೆ, ರೈಲ್ವೆ ನಿಲ್ದಾಣ ಹಾಗೂ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ನೈರ್ಮಲ್ಯ, ಕಸ ವಿಲೇವಾರಿ ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು.
ಕೆಪಿಟಿಸಿಎಲ್ ಹಿಂಭಾಗದಲ್ಲಿ ಮಾಂಸದ ಅಂಗಡಿ, ಗ್ಯಾರೇಜ್ ಅಂಗಡಿಗಳವರು ತ್ಯಾಜ್ಯವನ್ನು ತಂದು ರಾಶಿ ಹಾಕಿದ್ದಾರೆ. ಮೋರಿಗೆ ತ್ಯಾಜ್ಯ ತುಂಬಿರುವುದರಿಂದ ಮಳೆ ನೀರು, ಚರಂಡಿ ನೀರು ಹರಿದು ಹೋಗುತ್ತಿಲ್ಲ. ಕೂಡಲೇ ತ್ಯಾಜ್ಯ ತೆರವುಗೊಳಿಸಿ ನೀರು ನಿಲ್ಲದಂತೆ ಕ್ರಮವಹಿಸಬೇಕು, ಇಲ್ಲಿ ತ್ಯಾಜ್ಯ ಹಾಕದಂತೆ ಸುತ್ತಮುತ್ತಲಿನ ಅಂಗಡಿಗಳಿಗೆ ಎಚ್ಚರಿಕೆ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗಿದ್ದು ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕು, ಮುಚ್ಚಿ ಹೋಗಿರುವ ಚರಂಡಿಗಳಲ್ಲಿ ತ್ಯಾಜ್ಯ ತೆಗೆಸಬೇಕು, ರಾಜ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಳನ್ನು ಹಾಗೂ ಕಸವನ್ನು ತೆಗೆಯಬೇಕು, ಇದರಿಂದಾಗಿ ಮಳೆಯ ನೀರು ಸರಾಗವಾಗಿ ಕೆರೆಗೆ ಹರಿದು ಹೋಗುತ್ತದೆ. ಆ ಮೂಲಕ ಮಳೆ ಅನಾಹುತಗಳನ್ನು ತಡೆಯಬಹುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net