

ರಾಮನಗರ : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರ ಪಾಲಿಗೆ ಸಂಜೀವಿನಿಯಾಗಿದ್ದ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳು ಕಾರ್ಯ ನಿಲ್ಲಿಸಿದ್ದು, ಚಿಕಿತ್ಸೆಯ ನಿರೀಕ್ಷೆಯಲ್ಲಿವೆ.
ರೋಗಿಗಳಿಗೆ ಉಚಿತ ವಾಗಿ ಡಯಾಲಿಸಿಸ್ ಮಾಡಲು ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಕೇಂದ್ರಗಳನ್ನು ಆರಂಭ ಮಾಡಲಾಗಿದೆ.ಆದರೆ, ಇದರ ನಿರ್ವಹಣೆ ಮತ್ತು ಚಿಕಿತ್ಸೆ ಕೊಡುವ ಜವಾಬ್ದಾರಿ ಹೊತ್ತಿದ್ದ ಸಂಸ್ಥೆಗೆ ಸರ್ಕಾರ ಹಣ ಬಿಡುಗಡೆ ಮಾಡದಿರುವ ಕಾರಣದಿಂದ ಹೆಚ್ಚಿನ ಡಯಾಲಿಸಿಸ್ ಕೇಂದ್ರಗಳು ಬಂದ್ ಆಗಿದ್ದು, ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳೆಡೆಗೆ ಮುಖ ಮಾಡುತ್ತಿದ್ದಾರೆ.
ಬಡ ರೋಗಿಗಳು ಜೀವ ಉಳಿಸಿಕೊಳ್ಳಲು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಹೆಚ್ಚಿನ ರೋಗಿಗಳು ತುತ್ತಿನ ಚೀಲ ತುಂಬಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದು, ಸ್ವಂತ ಹಣ ಖರ್ಚು ಮಾಡಿ ಡಯಾಲಿಸಿಸ್ ಮಾಡಿಸಿಕೊಳ್ಳುವುದು ದೂರದ ಮಾತು. ಈ ಸಲುವಾಗಿಯೇ ದಾನಿಗಳ ಮೊರೆ ಹೋಗುತ್ತಿದ್ದಾರೆ. ಮತ್ತೊಂದೆಡೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಇಲ್ಲದ ಕಾರಣ ಆರೋಗ್ಯ ಇಲಾಖೆಯಿಂದಲೂ ನಿರ್ವಹಣೆ ಸಾಧ್ಯವಾಗುತ್ತಿಲ್ಲ.
ಕೆಟ್ಟಿವೆ ಜಿಲ್ಲಾಸ್ಪತ್ರೆಯ 4 ಯಂತ್ರಗಳು: ರಾಮನಗರದ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲೆಯ ಮೂರು ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 14 ಡಯಾಲಿಸಿಸ್ ಯಂತ್ರಗಳಿವೆ. ಇದರಲ್ಲಿ ಜಿಲ್ಲಾಸ್ಪತ್ರೆಯ ನಾಲ್ಕು ಕೆಟ್ಟು ಹೋಗಿದ್ದರೆ, ತಾಲೂಕು ಆಸ್ಪತ್ರೆಗಳಲ್ಲಿ ಆರೋಗ್ಯ ಇಲಾಖೆ ಆರೋಗ್ಯ ರಕ್ಷಾ ಕವಚ ಸೇರಿ ಇತರ ಆರ್ಥಿಕ ಮೂಲದಿಂದ ಡಯಾಲಿಸಿಸ್‌ಗೆ ಬೇಕಾದ ಅಗತ್ಯ ಪರಿಕರಗಳು ಮತ್ತು ಔಷಧಗಳನ್ನು ಪೂರೈಕೆ ಮಾಡಿ ರೋಗಿಗಳಿಗೆ ಡಯಾಲಿಸಿಸ್ ಮುಂದುವರಿಸಲಾಗಿದೆ. ಜಿಲ್ಲೆಯಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 300-350 ರೋಗಿಗಳಿದ್ದು, ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಈ ವ್ಯವಸ್ಥೆ ಇನ್ನೆಷ್ಟು ದಿನ ನಡೆಯಲಿದೆ ಎನ್ನುವ ಅನುಮಾನವೂ ಅಧಿಕಾರಿ ವರ್ಗದಲ್ಲಿದೆ.
ಗುತ್ತಿಗೆದಾರರಿಗೆ ಹಣವಿಲ್ಲ: ರಾಜ್ಯದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಯಂತ್ರಗಳ ನಿರ್ವಹಣೆ, ಸಿಬ್ಬಂದಿಗೆ ಸಂಬಳ, ರೋಗಿಗಳಿಗೆ ಚಿಕಿತ್ಸೆ ನೀಡುವ ಗುತ್ತಿಗೆಯನ್ನು ಬಿಆರ್‌ಎಸ್ ಆರೋಗ್ಯ ಸಂಶೋಧನಾ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ತಿಂಗಳಿಗೊಮ್ಮೆ ಬಿಲ್‌ಗಳನ್ನು ಆಯಾ ಆಸ್ಪತ್ರೆಗಳಿಗೆ ಸಲ್ಲಿಕೆ ಮಾಡಿ ಸರ್ಕಾರದಿಂದ ಸಂಸ್ಥೆಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಹಣ ನೀಡದಿರುವ ಕಾರಣ ಸಂಸ್ಥೆ ಕೆಲಸ ಸ್ಥಗಿತಗೊಳಿಸಿದೆ ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.
ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ನಿರ್ವಹಣೆ ಇಲ್ಲದೆ ನಾಲ್ಕು ಡಯಾಲಿಸಿಸ್ ಯಂತ್ರಗಳು ಕೆಟ್ಟಿವೆ. ಗುತ್ತಿಗೆ ನೀಡಲಾಗಿದ್ದ ಸಂಸ್ಥೆ ನಿರ್ವಹಣೆ ಮಾಡುತ್ತಿಲ್ಲ. ರೋಗಿಗಳಿಗೆ ತೊಂದರೆ ಆಗುತ್ತಿರುವುದು ನಿಜ. ಡಾ.ಶಶಿಧರ್ ಜಿಲ್ಲಾ ಶಸ್ತ್ರ ಚಿಕಿತ್ಸಕ, ರಾಮನಗರ, ಜಿಲ್ಲಾಸ್ಪತ್ರೆ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯ ಇಲ್ಲದೆ ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದು ಈ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಬಳಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ನಾವು ನಮ್ಮ ಕೈಲಾದಷ್ಟು ಮಂದಿಗೆ ನೆರವು ನೀಡುತ್ತಿದ್ದೇವೆ. ಸೈಯದ್ ಸಮದ್ ಸಾಮಾಜಿಕ ಕಾರ್ಯಕರ್ತ