ಆರೋಗ್ಯ ಸಬಲೀಕರಣ ಎಸ್.ಎಸ್. ಕೇರ್ ಟ್ರಸ್ಟ್ ಸಂಕಲ್ಪ

dvg-mp-press-meet_20250624001320470.jpg
Published on

  ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ  1 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಆರೋಗ್ಯ ಸಬಲೀಕರಣ ಎಸ್.ಎಸ್. ಕೇರ್ ಟ್ರಸ್ಟ್‌ನ ಉದ್ದೇಶವಾಗಿದ್ದು, 15 ಕಾರ್ಯಕ್ರಮಗಳ ಮೂಲಕ ಇದುವರೆಗೆ 1 ಲಕ್ಷ ಫಲಾನುಭವಿಗಳನ್ನು ತಲುಪಲಾಗಿದೆ ಎಂದು ಸಂಸದೆ, ಟ್ರಸ್ಟ್‌ನ ಆಜೀವ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜೆಜೆಎಂ ವೈದ್ಯಕೀಯ ಕಾಲೇಜಿನ ಹೊಸ ಶೈಕ್ಷಣಿಕ ಕಟ್ಟಡದಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ನ ನೂತನ ಕಚೇರಿಯ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಾವಣಗೆರೆ ನಗರ ಮತ್ತು ಸುತ್ತಲಿನ ಗ್ರಾಮಗಳಿಗೆ ಸೀಮಿತವಾಗಿದ್ದ ಟ್ರಸ್ಟ್‌ನ ಚಟುವಟಿಕೆಗಳನ್ನು ಇಡೀ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ವಿಸ್ತರಿಸುವ ಉದ್ದೇಶವಿದೆ ಎಂದು ತಿಳಿಸಿದರು.  ಟ್ರಸ್ಟ್ 2019 ರಲ್ಲಿ ಸ್ಥಾಪನೆಯಾಗಿ, ಕಳೆದ 6 ವರ್ಷಗಳಲ್ಲಿ ಬಡ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯದ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತ ಬಂದಿದೆ ಎಂದು ವಿವರಿಸಿದರು.  ಉಚಿತ ಡಯಾಲಿಸಿಸ್ ಮಾಡಲು ಆರಂಭದಲ್ಲಿ ಕೇವಲ 4 ಯಂತ್ರಗಳಿದ್ದವು, ಈಗ ಅವುಗಳ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಇದುವರೆಗೆ 20 ಸಾವಿರ ಉಚಿತ ಡಯಾಲಿಸಿಸ್ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ಚಿಕಿತ್ಸೆ, ರಕ್ತಹೀನತೆ ಇರುವ ಮಕ್ಕಳ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಸ್ತನ ಕ್ಯಾನಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚಿ, ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.  ‘ಕೌಶಲ’ ಯೋಜನೆಯಡಿ ಯುವಜನರಿಗೆ ಕಂಪ್ಯೂಟರ್ ಜ್ಞಾನ ಮತ್ತು ನಾಯಕತ್ವ ಗುಣಗಳ ತರಬೇತಿ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳ ಮಕ್ಕಳ ದಂತ ಆರೋಗ್ಯಕ್ಕಾಗಿ ‘ಮುಗುಳ್ನಗೆ’ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.  ರಕ್ತದಾನದ ಮಹತ್ವದ ಬಗ್ಗೆ ಯುವಜನರಿಗೆ, ಬಾಯಿ ಆರೋಗ್ಯದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಬ್ರಶ್‌ನಿಂದ ಹಲ್ಲು ಉಜ್ಜುವ ವಿಧಾನದ ಬಗ್ಗೆ ತಿಳಿಸಿಕೊಡಲಾಗುತ್ತಿದೆ ಎಂದರು.  ದಾವಣಗೆರೆ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ 3 ರಿಂದ 4 ಕ್ಯಾಂಪ್‌ಗಳನ್ನು ಮಾಡುವ ಉದ್ದೇಶವಿದ ಎಂದು ತಿಳಿಸಿದರು.  ಜೆಜೆಎಂಎಂಸಿ ಪ್ರಾಚಾರ್ಯೆ ಡಾ. ಶುಕ್ಲಾ ಶೆಟ್ಟಿ, ಎಸ್‌ಎಸ್‌ಐಎಂಎಸ್‌ಆರ್‌ಸಿ ಪ್ರಾಚಾರ್ಯ ಡಾ. ಪ್ರಸಾದ್, ಡಾ. ಮೂಗನಗೌಡ ಪಾಟೀಲ್, ಡಾ. ಕುಮಾರ್, ಡಾ. ಅರುಣ್ ಕುಮಾರ್ ಅಜಪ್ಪ, ಡಾ. ಎಸ್. ಲತಾ, ಡಾ. ಎ. ಶಾಂತಲಾ, ಡಾ. ಡಿ.ಬಿ. ಶುಭಾ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net