ತಾಲೂಕುಮಟ್ಟದಲ್ಲೇ ಪ್ರಕರಣ ಇತ್ಯರ್ಥಕ್ಕೆ ಮನವಿ

balluru.jpg
Published on

ದಾವಣಗೆರೆ : ಜಿಲ್ಲಾಧಿಕಾರಿ, ಭೂಮಾಪನ ಇಲಾಖೆಯ ಉಪ ನಿರ್ದೇಶಕರು ಮತ್ತು ಕಂದಾಯ ಇಲಾಖೆಯ ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ ಕಲಾಪಗಳನ್ನು ತಾಲೂಕುಮಟ್ಟದಲ್ಲೇ ನಡೆಸಲು ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಆಗ್ರಹಿಸಿದ್ದಾರೆ.
 ಈ ಕುರಿತು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
 ರೈತರು ಈ ನ್ಯಾಯಾಲಯಗಳಿಗೆ 3 ರಿಂದ 5 ವರ್ಷಗಳ ಕಾಲ ಓಡಾಡಿದರೂ ಪ್ರಕರಣಗಳು ಇತ್ಯರ್ಥವಾಗುತ್ತಿಲ್ಲ. ಅರ್ಜಿದಾರರು ವಯಸ್ಸಾಗಿದ್ದು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ವೈಫಲ್ಯ, ಹೃದಯ ರೋಗ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
 ತಾಲೂಕು ಕಚೇರಿ ಹಾಗೂ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಆಯಾ ತಾಲೂಕಿನ ಪ್ರಕರಣಗಳನ್ನು ತಿಂಗಳಿಗೊಂದು ತಾಲೂಕಿನಂತೆ ಆಯ್ಕೆ ಮಾಡಿಕೊಂಡು ಇತ್ಯರ್ಥ ಪಡಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
 ಇದರಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ಆರ್ಥಿಕ ನಷ್ಟ ತಪ್ಪಲಿದ್ದು ಆರೋಗ್ಯ ಸಮಸ್ಯೆಯೂ ಇರುವುದಿಲ್ಲ. 30 ಜಿಲ್ಲೆಗಳಲ್ಲೂ ಇದನ್ನು ಮಾಡಿದರೆ ‘ಸರ್ಕಾರದ ನಡೆ ಹಳ್ಳಿ ಕಡೆಗೆ’ ಎಂಬ ಕಾರ್ಯಕ್ರಮಕ್ಕೆ ಒತ್ತು ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net