

ಕಾನ್ಪುರ : ತನ್ನ ಮಗಳು ಹಾಳಾದ ರಸ್ತೆಯಲ್ಲಿ ಜಾರಿಬಿದ್ದ ಪರಿಣಾಮ ಆಕೆಯ ತಂದೆ ರಸ್ತೆಯ ನೀರಿನಲ್ಲಿ ಮಲಗಿ ಪ್ರತಿಭಟನೆ ನಡೆಸಿರುವ ಘಟನೆ ಕಾನ್ಪುರದ ಆನಂದ್ ಸೌತ್ ಸಿಟಿಯಲ್ಲಿ ನಡೆದಿದೆ.
ಕಾನ್ಪುರದ ವ್ಯಕ್ತಿಯೊಬ್ಬ ಇಂದು (ಆ.04) ಸ್ಥಳೀಯ ಶಾಲೆಗೆ ಹೋಗುವ ಪ್ರಮುಖ ರಸ್ತೆಯ ಅಪಾಯಕಾರಿ ಸ್ಥಿತಿಯನ್ನು ಎತ್ತಿ ತೋರಿಸಲು, ಚಾಪೆ ಮತ್ತು ದಿಂಬು ಸೇರಿದಂತೆ ನೀರಿನಿಂದ ತುಂಬಿದ ದೊಡ್ಡ ಗುಂಡಿಯಲ್ಲಿ ಮಲಗಿ ವಿಶಿಷ್ಟ ಪ್ರತಿಭಟನೆ ನಡೆಸಿದ್ದಾರೆ. ಕಿತ್ತುಹೋದ ಮತ್ತು ನೀರು ತುಂಬಿದ ರಸ್ತೆಯಿಂದಾಗಿ ನನ್ನ ಮಗಳು ಜಾರಿ ಬಿದ್ದಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಇನ್ನೂ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಈ ರಸ್ತೆ ಅಭಿವೃದ್ಧಿ ಕಾಣದೆ ಹಲವು ತಿಂಗಳುಗಳೇ ಆಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಸ್ಥಳೀಯ ವಾರ್ಡ್ ಕೌನ್ಸಿಲರ್, ಶಾಸಕರು ಮತ್ತು ಸಚಿವರು ಸೇರಿದಂತೆ ಅಧಿಕಾರಿಗಳಿಗೆ ಹಲವು ದೂರುಗಳನ್ನು ನೀಡಿದ್ದರೂ, ರಸ್ತೆಯನ್ನು ಸರಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆ ವ್ಯಕ್ತಿ "ಭಾರತ್ ಮಾತಾ ಕಿ ಜೈ" ಎಂದು ಘೋಷಣೆ ಕೂಗಿದ್ದಾರೆ. ರಸ್ತೆಯಿಂದ ಉಂಟಾಗುವ ಅಪಘಾತಗಳು ಮತ್ತು ಗಾಯಗಳ ಬಗ್ಗೆ, ವಿಶೇಷವಾಗಿ ಶಾಲಾ ಮಕ್ಕಳು ಮತ್ತು ದೈನಂದಿನ ಪ್ರಯಾಣಿಕರನ್ನು ಒಳಗೊಂಡ ಅಪಘಾತಗಳ ಬಗ್ಗೆ ಗಮನ ಸೆಳೆಯಲು ಇಂತಹ ಕ್ರಮ ಕೈಗೊಳ್ಳಲಾಯಿತು ಎಂದಿದ್ದಾರೆ.
(ಏಜೆನ್ಸೀಸ್)