ಅಮ್ಮನಿಗೆ ಹೊಡೆಯುತ್ತಿದ್ದ ಅಪ್ಪನನ್ನೇ ಬಡಿದು ಸಾಯಿಸಿದ 16ರ ಹುಡುಗಿ; ಅಷ್ಟಕ್ಕೇ ಸುಮ್ಮನಾಗಲಿಲ್ಲ..

Crime
Published on

ಅಪ್ಪ ದಿನಾ ಕುಡಿದು ಬಂದು ಅಮ್ಮನಿಗೆ ಹೊಡೆಯುವುದನ್ನು ನೋಡಿ ರೋಸಿಹೋಗಿದ್ದ ಮಗಳು, ಅಪ್ಪನನ್ನೇ ಬಡಿದು ಸಾಯಿಸಿದ್ದಾಳೆ. ಹದಿನಾರರ ಈ ಹುಡುಗಿ ಬಟ್ಟೆ ತೊಳೆಯಲು ಬಳಸುವ ಬಡಿಗೆ ಹಾಗೂ ಕಬ್ಬಿಣದ ರಿಂಗ್ ಇರುವ ದೊಣ್ಣೆಯಿಂದ ಅಪ್ಪನಿಗೆ ಬಡಿದಿದ್ದಾಳೆ.

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಬುಧವಾರ ಈ ಪ್ರಕರಣ ನಡೆದಿದೆ. ಅಪ್ಪ ಜೀವನೋಪಾಯಕ್ಕಾಗಿ ಏನೂ ದುಡಿಯುತ್ತಿರಲಿಲ್ಲ. ತನ್ನ ಹಿರಿಯ ಮಗ ಕಲ್ಲುಕಡಿದು ಕೆಲಸ ಮಾಡಿ ತರುತ್ತಿದ್ದ ಸಂಪಾದನೆಯನ್ನೇ ನೆಚ್ಚಿಕೊಂಡು ಸಂಸಾರ ಸಾಗುತ್ತಿತ್ತು. ಇಷ್ಟಾದರೂ ಆತ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಬಹುತೇಕ ಎಲ್ಲ ದಿನ ಪಾನಮತ್ತನಾಗಿ ಬಂದು ಹೆಂಡತಿಗೆ ಹೊಡೆಯುತ್ತಿದ್ದ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.

ಬುಧವಾರ ಅಣ್ಣನ ಮದುವೆ ಕುರಿತು ಮನೆಯಲ್ಲಿ ಮಾತುಕತೆ ನಡೆಯುತ್ತಿದ್ದಾಗ ಅಪ್ಪ ಜಗಳ ಮಾಡಿದ್ದ. ಆಗ ಸಿಟ್ಟಾದ ಮಗಳು ಚೆನ್ನಾಗಿ ಬಡಿದಿದ್ದಾಳೆ. ರಕ್ತಸಿಕ್ತವಾಗಿ ಬಿದ್ದ ಆತ ಮೃತಪಟ್ಟಿದ್ದಾನೆ. ಅಷ್ಟಕ್ಕೇ ಸುಮ್ಮನಾಗದ ಪುತ್ರಿ, 100 ನಂಬರ್​ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾಳೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು, ಕೊಲೆ ಮಾಡಿರುವ ಹುಡುಗಿಯನ್ನು ಬಾಲಾಪರಾಧಿಗಳ ವಿಭಾಗದಲ್ಲಿ ಇರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net