

ಬೆಂಗಳೂರು: ಸದನದಲ್ಲಿ ನಡೆದಿರುವ ಹಳೆಯ ಚರ್ಚೆಗಳು, ಮಹತ್ವದ ವಿಷಯ ಕುರಿತು ಡೇಟಾ ಬೇಸ್ ಸಿದ್ಧಪಡಿಸಿ ಒಂದೇ ವೇದಿಕೆಯಲ್ಲಿ ಎಲ್ಲರಿಗೂ ಮುಕ್ತವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕಾಮನ್‌ವೆಲ್ತ್ ಸಂಸದೀಯ ಸಂಘ (ಸಿಪಿಎ) ಭಾರತ ವಿಭಾಗದ 11ನೇ ಸಮ್ಮೇಳನದ ಸಮಾರೋಪದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸನ ಸಭೆಯಲ್ಲಿ ನಡೆಯುವ ಮಹತ್ವ ವಿಷಯಗಳ ಚರ್ಚೆಗಳನ್ನು ಸಂಗ್ರಹಿಸಲು ಡೇಟಾಬೇಸ್ ಸಿದ್ಧ ಮಾಡಲಾಗುತ್ತಿದೆ. ಈ ಮೂಲಕ ಹಳೆಯ ವಿಷಯಗಳನ್ನು ಸದಸ್ಯರು ಅಧ್ಯಯನ ನಡೆಸಿ ಸದನದಲ್ಲಿ ಉತ್ತಮ ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಇದನ್ನು ಬಹುತೇಕ ರಾಜ್ಯಗಳ ವಿಧಾನಸಭೆಯಲ್ಲಿ ಅಳವಡಿಸಿದ್ದು, ಕೆಲವೇ ದಿನಗಳಲ್ಲಿ ಪೂರ್ಣವಾಗಲಿದೆ ಎಂದರು.
ಸದನದಲ್ಲಿ ಮಂಡನೆಗೂ ಮುನ್ನ ವಿಧೇಯಕಗಳ ಉದ್ದೇಶ, ಕಾರಣಗಳ ಕುರಿತು ಸದಸ್ಯರಿಗೆ ತಿಳಿಸಲು ವಿಷಯ ತಜ್ಞರ ಜೊತೆ ಕಾರ್ಯಯೋಜನೆ ರೂಪಿಸಬೇಕು. ಇದರಿಂದಾಗಿ, ವಿಧೇಯಕ ಕುರಿತು ಚರ್ಚಿಸಲು ಸಾಧ್ಯವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ವಿಶ್ವಾಸವನ್ನು ಮತ್ತಷ್ಟು ಬಲಗೊಳಿಸಲು ಪ್ರಯತ್ನ ಮಾಡಬೇಕಿದೆ. ಶಾಸನ ಸಭೆಗೆ ಹೆಚ್ಚು ಹೆಚ್ಚು ಯುವಕರು ಬರುವಂತೆ ಅವಕಾಶ ಕಲ್ಪಿಸಬೇಕೆಂದು ಸ್ಪೀಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸದನದ ಸಮಯ ಸದ್ಬಳಕೆಯಾಗಬೇಕು. ಎಲ್ಲ ಪೀಠಾಸೀನ ಅಧಿಕಾರಿಗಳು, ಸದಸ್ಯರು, ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ಮಾಡಿ ಸದನದಲ್ಲಿ ಎದುರಾಗುವ ಪ್ರತಿರೋಧ ಕಡಿಮೆ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ಸದನದ ಘನತೆ ಕಾಪಾಡಿಕೊಳ್ಳಬೇಕು. ಕಲಾಪಕ್ಕೆ ಅಡ್ಡಿ, ಅಡಚಣೆ ಮತ್ತು ಆಗಾಗ್ಗೆ ಮುಂದೂಡಿಕೆಗಳು ಪ್ರಜಾಪ್ರಭುತ್ವಕ್ಕೆ ಹಾನಿ ಮಾಡುತ್ತವೆ ಮತ್ತು ಸಾರ್ವಜನಿಕ ವಿಶ್ವಾಸ ಕುಗ್ಗಿಸುತ್ತವೆ ಎಂದು ಬಿರ್ಲಾ ಬೇಸರಿಸಿದರು. ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಲೋಕಸಭೆ ಮಹಾ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವಿಧಾನಮಂಡಲವು ಈ ಪ್ರಜಾಪ್ರಭುತ್ವದ ಆತ್ಮವಾಗಿದೆ. ನಮ್ಮ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನವಾಗಿದೆ ಎಂದು ರಾಜ್ಯಪಾಲ ಥಾವರ ಚಂದ್ ಗೆಹಲೋತ್ ತಿಳಿಸಿದರು.
1949ರ ನ.25ರಂದು, ಸಂವಿಧಾನದ ಕೊನೆಯ ಸಭೆಯಲ್ಲಿ, ಡಾ.ಬಿ.ಆರ್. ಅಂಬೇಡ್ಕರ್ ಐತಿಹಾಸಿಕ ಭಾಷಣ ಮಾಡಿದರು. ಸಂವಿಧಾನವು ಒಳ್ಳೆಯದಾಗಿರಬಹುದು. ಅದು ಕೆಟ್ಟದಾಗಿ ಪರಿಣಾಮ ಬೀರಬಹುದು. ಏಕೆಂದರೆ ಅದರ ಕೆಲಸ ಮಾಡಲು ಕರೆಯಲ್ಪಟ್ಟವರು ಕೆಟ್ಟವರಾಗಿರುತ್ತಾರೆ. ಮತ್ತೊಂದು ವಿಷಯ ಎಂದರೆ ಸಂವಿಧಾನವು ಕೆಟ್ಟದಾಗಿರಬಹುದು, ಅದರಲ್ಲಿ ಕೆಲಸ ಮಾಡಲು ಬರುವವರು ಒಳ್ಳೆಯವರಾಗಿದ್ದರೆ ಅದು ಒಳ್ಳೆಯದಾಗಿ ಪರಿಣಮಿಸಬಹುದು. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿದ್ದು, ಇವುಗಳೇ ಅದರ ಅಸ್ತಿತ್ವವನ್ನು ಬಲಪಡಿಸುತ್ತವೆ ಎಂದು ಡಾ.ಅಂಬೇಡ್ಕರ್ ನಂಬಿದ್ದರು ಎಂದರು.
ಸಮ್ಮೇಳನದ ನಿರ್ಣಯಗಳು
1. ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಜನರ ನಂಬಿಕೆ ಹೆಚ್ಚಿಸಲು, ಸದನಗಳಲ್ಲಿ ಅಡಚಣೆ ನಿವಾರಿಸಬೇಕು. ಇದರಿಂದಾಗಿ ಸಾರ್ವಜನಿಕ ಕಲ್ಯಾಣದ ವಿಷಯಗಳನ್ನು ಚರ್ಚಿಸಲು ಹೆಚ್ಚಿನ ಸಮಯ ಸಿಗಲಿದೆ.
2. ಸಂಸತ್ತಿನ ಅಗತ್ಯ ಬೆಂಬಲದೊಂದಿಗೆ, ರಾಜ್ಯ ಶಾಸಕಾಂಗಗಳ ಸಂಶೋಧನೆ ಮತ್ತು ಇತರ ಶಾಖೆಗಳನ್ನು ಬಲಪಡಿಸಬೇಕು. ಗುಣಮಟ್ಟದ ಚರ್ಚೆ ಮತ್ತು ವಿಷಯಗಳನ್ನು ಖಚಿತಪಡಿಸಿಕೊಳ್ಳಲು ಶಾಸಕಾಂಗಗಳಲ್ಲಿನ ಸಮಗ್ರ ಡೇಟಾಬೇಸ್ ಸಿದ್ಧಪಡಿಸಬೇಕು.
3. ಶಾಸಕಾಂಗಗಳಲ್ಲಿ ಸಾಧ್ಯವಾದಷ್ಟು ಡಿಜಿಟಲ್ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಇದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯವೈಖರಿಯನ್ನು ಜನರಿಗೆ ಸರಿಯಾಗಿ ತಿಳಿಸಬಹುದು.
4. ದೇಶದ ಜನಸಂಖ್ಯೆಯ ಹೆಚ್ಚಿನ ಭಾಗವಾಗಿರುವ ಯುವಕರು ಮತ್ತು ಮಹಿಳೆಯರು ಶಾಸಕಾಂಗ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ಭಾಗವಹಿಸುವಂತೆ ಮಾಡಬೇಕು.
26 ರಾಜ್ಯಗಳ ಸಭಾಧ್ಯಕ್ಷರು ಭಾಗಿ
26 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 45 ಶಾಸನ ಸಭಾಧ್ಯಕ್ಷರು ಭಾಗವಹಿಸಿದ್ದರು. ಇದರಲ್ಲಿ ನಾಲ್ವರು ವಿಧಾನ ಪರಿಷತ್ ಸಭಾಪತಿಗಳು, 22 ವಿಧಾನಸಭೆ ಅಧ್ಯಕ್ಷರು. ಮೂವರು ಉಪಸಭಾಪತಿಗಳು ಮತ್ತು 16 ಉಪಸಭಾಧ್ಯಕ್ಷರು ಇದ್ದರು.
ಸದನದಲ್ಲಿ ನಡೆಯುವ ಸಮಾಜಮುಖಿ, ಆರೋಗ್ಯಪೂರ್ಣ ಚರ್ಚೆಗಳು ಪ್ರಜಾಪ್ರಭುತ್ವದ ಯಶಸ್ಸಿಗೆ ಮೂಲಾಧಾರ. ಕ್ರಮಬದ್ಧವಾಗಿ ಇಲ್ಲದೆ, ಅರ್ಥಪೂರ್ಣ ಚರ್ಚೆ ಆಗದೆ ಕಾನೂನು ಅಂಗೀಕರಿಸಿದಾಗ ಜನರಿಗೆ ನಮ್ಮ ಮೇಲಿನ ನಂಬಿಕೆ ಕ್ಷೀಣಿಸಲಿದೆ.
ಬಸವರಾಜ ಹೊರಟ್ಟಿ, ಸಭಾಪತಿ