

ಶಿವಮೊಗ್ಗ: ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು ದೇವರ ದಾಸಿಮಯ್ಯ. ರಾಮನಾಥನ ಆರಾಧಕರಾಗಿದ್ದ ಇವರು ರಾಮನಾಥ ಎನ್ನುವ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ ಎಂದು ಸಾಹಿತಿ ಹಾಗೂ ಸಂಶೋಧಕ ಬಾಗೂರು ಆರ್.ನಾಗರಾಜಪ್ಪ ತಿಳಿಸಿದರು.
ಜಿಲ್ಲಾಡಳಿತದಿಂದ ಬುಧವಾರ ಏರ್ಪಡಿಸಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನೇಕಾರ ಸಮಾಜದ ಸಂಸ್ಕೃತಿಯ ಪ್ರತೀಕವಾಗಿ ದೇವರ ದಾಸಿಮಯ್ಯ ಜಯಂತಿ ಆಚರಿಸಲಾಗುತ್ತಿದೆ. ಇವರು ಆದ್ಯ ವಚನಕಾರ ಮತ್ತು ಮೊದಲನೇ ಬಂಡಾಯ ವಚನಕಾರರೂ ಹೌದು ಎಂದು ಹೇಳಿದರು.
ದಾಸಿಮಯ್ಯ ಕುರಿತಾದ ಆಧಾರಗಳನ್ನು ಪ್ರಾಚೀನ ಶಿಲಾ ಶಾಸನ, ಪುರಾಣಗಳಿಂದ ಪಡೆಯಬಹುದು. 11ನೇ ಶತಮಾನದ ಅವಧಿಯ 7 ಪುಷ್ಕರಿಣಿಗಳು, ಮುದನೂರಿನ 25 ಶಾಸನಗಳಲ್ಲಿ ದಾಸಿಮಯ್ಯ ಕುರಿತು ಕುರುಹುಗಳಿವೆ. ಸೀರೆ ನೇಯ್ಗೆಯಿಂದಲೇ ಸಂಸಾರ ಸಾಗಿಸುತ್ತ, ಕಷ್ಟದ ನಡುವೆಯೇ ದಾಸೋಹ ನಡೆಸುತ್ತಿದ್ದ ದಾಸಿಮಯ್ಯ ಮುಂದೆ ತವನಿಧಿ ವರ ಪಡೆದು ಪವಾಡ ಪುರುಷರಾದರು ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ಯಾರಂಟಿ ಸಮಿತಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ, ನೇಯ್ಗೆಯ ಮೂಲಕ ಮನುಕುಲಕ್ಕೆ ಕಾಯಕದ ದಾರಿ ತೋರಿದ ಮಹಾನ್ ಪುರುಷ ದೇವರ ದಾಸಿಮಯ್ಯ ಎಂದು ಅಭಿಪ್ರಾಯಪಟ್ಟರು.
ದಾಸಿಮಯ್ಯ 10-11ನೇ ಶತಮಾನದ ಮೊಟ್ಟ ಮೊದಲ ವಚನಕಾರ. ಇವರನ್ನು ವಚನಗಳ ಸಂಸ್ಥಾಪಕ ಅಥವಾ ವಚನಗಳ ತಂದೆ ಎಂದೆನ್ನಬಹುದು. ಇವರು ದೇವರ ಅಂಗದಿಂದ ಜನಿಸಿದವರೆಂಬ ನಂಬಿಕೆಯಿಂದ ದೇವಾಂಗ ಎಂದು ಕರೆಯಲಾಗುತ್ತದೆ. ಇವರನ್ನುದೇವಲ ಮಹರ್ಷಿ ಎಂದೂ ಕರೆಯಲಾಗುತ್ತದೆ ಎಂದರು.
ಜಿಲ್ಲಾ ಪಟ್ಟಸಾಲಿ ಸಂಘದ ಅಧ್ಯಕ್ಷ ಕಾಂತೇಶ ಕದರಮಂಡಲಗಿ, ಮಲೆನಾಡು ದೇವಾಂಗ ಸಂಘದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ, ಜಿಲ್ಲಾ ಪದ್ಮಸಾಲಿ ಸಂಘದ ಅಧ್ಯಕ್ಷ ಜೆ.ರಾಮಕೃಷ್ಣಪ್ಪ, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಜಯಮ್ಮ, ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಶಿವಾನಂದ ಶೆಟ್ಟಿ, ಸಮಾಜದ ಮುಖಂಡರಾದ ಸತೀಶ್‌ಕುಮಾರ್, ವಿನಾಯಕ, ತಹಸೀಲ್ದಾರ್ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್ ಇತರರಿದ್ದರು.