ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಸರ್ಕಾರ ಕಲ್ಲಿನಂತೆ ಕೂರಬಾರದು, ಆಗಿರುವ ತಪ್ಪನ್ನ ಸರಿಪಡಿಸಿ, ಕೂಡಲೆ ಕ್ರಮ ಜರುಗಿಸಬೇಕು ಮತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ನಾಯಕ ಭೋಜೆಗೌಡ ಅವರು ಒತ್ತಾಯಿಸಿದ್ದಾರೆ.
ನಿಯಮ 68 ರಡಿ ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಇಲ್ಲಿರುವವರು ಯಾರು ಕೂಡ ವಾಲ್ಮೀಕಿ ನಿಗಮದ ದರೋಡೆಯಲ್ಲಿ ಪಾಲುದಾರರಲ್ಲ. ಆದರೂ
ಯಾರನ್ನ ರಕ್ಷಣೆ ಮಾಡಲು ಹೋಗ್ತಿದ್ದೀರಾ ಎಂದು ಕೇಳಿದರು.
ಸರ್ಕಾರದಲ್ಲಿ ಏನಾದ್ರು ಹಗರಣ ಆದಾಗ ನಾವು ಮಾತನಾಡಬೇಕು. ಅದು ನಮ್ಮ ಕರ್ತವ್ಯ, ನಾವು ಆ ಕರ್ತವ್ಯ ಮಾಡದಿದ್ದರೆ ಸಾರ್ವಜನಿಕರಿಗೆ ಮಾಡಿದ ಮೋಸ ಆಗುತ್ತೆ. 84 ಲಕ್ಷ ಜೀವರಾಶಿ ದಾಟಿ ಬಂದು… ಎಂದು ದಾಸರ ಪದ ಹೇಳಿ ವಾಲ್ಮೀಕಿ ಹಗರಣದ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸಿದರು.
ಸರ್ಕಾರಕ್ಕೆ ಮುಜುಗರ ಆಗದಂತೆ ಹಿಂಬಾಲಿಕೆ ಪಾಲಿಸಿ ದೂರು ನೀಡುವಂತೆ ಅಧಿಕಾರಿಗಳಿಗೆ ವಾಲ್ಮೀಕಿ ನಿಗಮದ ಅಪರ ಮುಖ್ಯಕಾರ್ಯದರ್ಶಿ ಸೂಚನೆ ಕೊಡ್ತಾರೆ ಅಂದ್ರೆ ಆ ಅಧಿಕಾರಿಗೆ ನಾಚಿಕೆ ಆಗಬೇಕು ಎಂದರು.
ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ್ರಲ್ಲ, ಮಾಜಿ ಸಚಿವ ನಾಗೇಂದ್ರ ಮೇಲೆ ಏಕೆ 307 ಹಾಕಿಲ್ಲ? ಈ ಬಗ್ಗೆ 14 ಬಜೆಟ್ ಮಂಡಿಸಿದ ಸಿಎಂ ಉತ್ತರಿಸಬೇಕು ಎಂದರು.
ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ
ದಾಸನಾಗು ಎಂದು ದಾಸರು ಹೇಳಿದ್ರೆ, ಈ ಸರ್ಕಾರ ಎಲ್ಲವನ್ನು ಬಾಚ್ತಿದೆ ಎಂದು ಬಿಜೆಪಿಯ ನವೀನ್ ಕಾಲೆಳೆದರು.
ಆಗ ಮಧ್ಯ ಪ್ರೇಶಿಸಿದ ಸಚಿವ ಎಂ ಬಿ ಪಾಟೀಲ್, ಲೋಕಸಭೆ ಚುನಾವಣೆಯ ವೇಳೆ ಐಟಿ, ಇಡಿ, ಸಿಬಿಐ ದಾಳಿ ಆದ್ರೆ ಈ ಕಡೆ ಬಿಜೆಪಿಯ ಎಲೆಕ್ಟ್ರೋಲ್ ಬಾಂಡ್ ಏರಿಕೆ ಆಗ್ತಿತ್ತು ಅಲ್ಲವೇ? ಎಂದು ಕಿಚಾಯಿಸಿದರು.
ಸಿಎಂ ಹೆಸರು ಎಳೆದು ತರಬೇಡಿ ಎಂದು ಸಚಿವರಾದ ಜಮೀರ್ ಅಹಮದ್, ಶಿವರಾಜ ತಂಗಡಗಿ ಅವರು ಪ್ರತಿರೋದ ಒಡ್ಡಿದರು. ಈ ವೇಳೆ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ ನಡೆಯಿತು.