

ಹೈದರಾಬಾದ್: ಸಂಕ್ರಾಂತಿಯ ನಂತರ ತೆಲುಗು ರಾಜ್ಯಗಳಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುವ ಹಬ್ಬವೆಂದರೆ ಅದು ದಸರಾ. ತೆಲುಗು ರಾಜ್ಯಗಳಲ್ಲಿ ಈ ಹಬ್ಬವನ್ನು ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ಆಂಧ್ರದಲ್ಲಿ ವಿಜಯದಶಮಿ ಎಂದು ಆಚರಿಸಿದರೆ, ತೆಲಂಗಾಣದಲ್ಲಿ ಬತುಕಮ್ಮ ಹಬ್ಬವೆಂದು ಆಚರಿಸುತ್ತಾರೆ. ಸದ್ಯ ದಸರಾ ಹಬ್ಬ ಹತ್ತಿರ ಬಂದಿರುವುದರಿಂದ ವಿವಿಧ ಆಫರ್ ( Dasara Offer ) ಗಳೂ ಸಹ ಬರುತ್ತಿವೆ. ಗಾರ್ಮೆಂಟ್ ಅಂಗಡಿಗಳು, ಚಿಕನ್ ಮತ್ತು ಮಟನ್ ಅಂಗಡಿಗಳು ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡುತ್ತಿವೆ. ಗ್ರಾಹಕರಿಗೆ ಆಕರ್ಷಕ ಕೊಡುಗೆಗಳನ್ನು ಜಾಹೀರಾತು ಮಾಡಿ ಹಂಚಿಕೊಳ್ಳುತ್ತಿವೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮುನುಗೋಡು ಮಂಡಲದ ವೆಲ್ಮಕನ್ನೆ ಗ್ರಾಮದ ಯುವಕರು ಈ ಬಾರಿಯ ದಸರಾಕ್ಕೆ ಬಫರ್ ಆಫರ್ ( Dasara Offer ) ಘೋಷಿಸಿದ್ದಾರೆ. ದೋಟಿ ಶ್ರೀನು, ಲೋಕಿ ಮತ್ತು ಭಾರ್ಗವ್ ಎಂಬ ಯುವಕರು ಕೇವಲ ನೂರು ರೂಪಾಯಿಗೆ ಹತ್ತು ಕೆಜಿ ಮೇಕೆ ಸೇರಿದಂತೆ ಹಲವು ಕೊಡುಗೆಗಳನ್ನು ಘೋಷಿಸಿದ್ದಾರೆ. ಈ ಆಫರ್ ಅನ್ನು ಗ್ರಾಮದ ಜನರಿಗೆ ತಿಳಿಸಲು ಗ್ರಾಮದಾದ್ಯಂತ ಪೋಸ್ಟರ್, ಕಟೌಟ್ಗಳನ್ನು ಹಾಕಿದ್ದಾರೆ. ಈ ಆಫರ್ ಪಡೆಯಬೇಕಾದರೆ, ಕೂಪನ್ ರೂಪದಲ್ಲಿ ಖರೀದಿ ಮಾಡಬೇಕು. ಪ್ರತಿ ಕೂಪನ್ ಬೆಲೆ 100 ರೂ. ನಿಗದಿಪಡಿಸಲಾಗಿದೆ.
ಐದು ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಬಹುಮಾನವಾಗಿ 10 ಕೆಜಿ ಮೇಕೆ, ದ್ವಿತೀಯ ಬಹುಮಾನವಾಗಿ 2 ಬ್ಲೆಂಡರ್ಸ್ ಪ್ರೈಡ್ ಫುಲ್ ಬಾಟಲಿ ಎಣ್ಣೆ, ತೃತೀಯ ಬಹುಮಾನ ಕಾಟನ್ ಬೀರ್, ನಾಲ್ಕನೇ ಬಹುಮಾನ 2 ನಾಟಿಕೋಳಿ ಹಾಗೂ ಐದನೇ ಬಹುಮಾನ 1 ರಾಯಲ್ ಸ್ಟಾಗ್ ಫುಲ್ ಬಾಟಲ್ ನೀಡಲಾಗುತ್ತದೆ.
ದಸರಾ ಉಡುಗೊರೆಯಾಗಿ ಅಕ್ಟೋಬರ್ 10 ರಂದು ಈ ಲಕ್ಕಿ ಡ್ರಾ ನಡೆಯಲಿದೆ. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಯುವಕರು ಚಿಕ್ಕ ಮಕ್ಕಳು ಈ ಲಕ್ಕಿ ಡ್ರಾನಲ್ಲಿ ಭಾಗವಹಿಸುವಂತಿಲ್ಲ ಎಂದು ಬ್ಯಾನರ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ. ಪ್ರತಿ ಬಾರಿ ಇಂತಹ ಲಕ್ಕಿ ಡ್ರಾಗಳ ಮೂಲಕ ಮಹಿಳೆಯರಿಗೆ ಸೀರೆ ಮತ್ತು ಅಡುಗೆ ಪಾತ್ರೆಗಳನ್ನು ನೀಡಲಾಗುತ್ತಿತ್ತು. ಆದರೆ, ಈ ಬಾರಿ ಮಾದಕ ವ್ಯಸನಿಗಳಿಗೆ ನೆಚ್ಚಿನ ವಸ್ತುಗಳನ್ನು ನೀಡುವ ಮೂಲಕ ಬಂಪರ್ ಆಫರ್ ಘೋಷಿಸಲಾಗಿದೆ. ಹೀಗಾಗಿ ಕೂಪನ್ ಖರೀದಿಸಲು ಸಾಕಷ್ಟು ಮಂದಿ ಮುಂದೆ ಬಂದಿದ್ದಾರೆ. (ಏಜೆನ್ಸೀಸ್)